‘ಪ್ರಧಾನಿ ಹೊಗಳಿಕೆ: ವಿಶೇಷ ವ್ಯಾಖ್ಯಾನ ಅಗತ್ಯವಿಲ್ಲ’

H.D.Deve Gowda press meet at press club bangalore

02-05-2018

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಪಿಯ ಚುನಾವಣಾ ಪ್ರಚಾರ ಭಾಷಣ ಸಂದರ್ಭದಲ್ಲಿ ತಮ್ಮನ್ನು ಹೊಗಳಿರುವ ಬಗ್ಗೆ ವಿಶೇಷ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಸಹಜ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಯಾದವರಿಗೆ ದೇಶದ ಎಲ್ಲಾ ಸಮಗ್ರ ಚಿತ್ರಣದ ಮಾಹಿತಿ ಇರುತ್ತದೆ. ರಾಜ್ಯದ ಆಗುಹೋಗುಗಳು ಸಹ ತಿಳಿದಿರುತ್ತದೆ. ಇಂತಹ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಏನಿದೆಯೋ ತಿಳಿದಿಲ್ಲ. ಆದರೆ ವಿಶೇಷ ಚರ್ಚೆ ಅಗತ್ಯವಿಲ್ಲ ಎಂದರು.

ಒಬ್ಬ ಕನ್ನಡಿಗ ಪ್ರಧಾನಿ ಸ್ಥಾನಕ್ಕೆ ಏರಿದ ವಿಚಾರದ ಬಗ್ಗೆ ಹೆಮ್ಮೆ ಇರಬೇಕಾಗಿತ್ತು. ಆದರೆ ನನ್ನನ್ನು ಟೀಕಿಸುವವರಿಗೆ ಇದು ಅರ್ಥವಾಗುವುದಿಲ್ಲ. ಇದನ್ನು ಮೋದಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ತೃತೀಯ ರಂಗ ರಚನೆಗೆ ಮುಂದಾದ ಸಂದರ್ಭದಲ್ಲಿ ಮೋದಿ ಅವರು ನನ್ನನ್ನು ಟೀಕಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನನ್ನನ್ನು ಹೊಗಳಿದ್ದರು. ಪರಿಸ್ಥಿತಿಗೆ ತಕ್ಕಂತೆ ಹೊಗಳಿಕೆ ಮತ್ತು ತೆಗಳಿಕೆಗಳು ಬರುತ್ತವೆ ಎಂದರು.

ಹಿಂದಿನ ಲೋಕಸಭೆಗೂ ಮುನ್ನ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಲ್ಲಿ ಲೋಕಸಭೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದೆ. ಫಲಿತಾಂಶ ಬಂದ ಮೂರ್ನಾಲ್ಕು ದಿನಗಳಲ್ಲೇ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ನರೇಂದ್ರ ಮೋದಿ ಅವರು ನಿಮ್ಮ ಅನುಭವ ನಮಗೆ ಅಗತ್ಯವಾಗಿದೆ. ನೀವು ರಾಜೀನಾಮೆ ನೀಡಬಾರದು. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಟೀಕೆ, ಟಿಪ್ಪಣಿಗಳು ಬರುತ್ತವೆ. ಅಷ್ಟಕ್ಕೆ ನೀವು ಸೂಕ್ಷ್ಮಮತಿಗಳಾಗಬಾರದು ಎಂದು ಹೇಳಿ ನನ್ನ ನಿಲುವು ಬದಲಾಗುವಂತೆ ಮಾಡಿದ್ದರು ಎಂದು ದೇವೇಗೌಡ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ. ಅವರಿನ್ನೂ ಚಿಕ್ಕವರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮತ್ತು ಕುಮಾರ ಸ್ವಾಮಿ ಅವರ ಬಗ್ಗೆ ಪದೇ ಪದೇ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಎಲ್ಲಾ ಕಡೆ ಅಪ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಕುಮಾರ ಸ್ವಾಮಿ ಚುನಾವನಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಸ್ಪಷಪಡಿಸಿದರು.

ಒಬ್ಬ ಕನ್ನಡಿಗ ಪ್ರಧಾನಿಯಾದ ಅನ್ನೋ ಹೆಮ್ಮೆಯಿಂದ ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರು ವಿಧಾನಸೌಧದ ಮೂರನೆ ಮಹಡಿ ಸಿಎಂ ಕಚೇರಿಯಲ್ಲಿ ನನ್ನ ಫೋಟೋ ಹಾಕಿಸಿದರು. ನಂತರದ ಕಾಲಘಟ್ಟದಲ್ಲಿ ಸಿಎಂ ಆದ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಯಾರು ಕೂಡ ನನ್ನ ಫೋಟೋ ತೆಗೆಯಲಿಲ್ಲ. ಆದರೆ ನಾನೇ ಬೆಳೆಸಿದ ಸಿದ್ದರಾಮಯ್ಯ ಸಿಎಂ ಆಗಿ ಕಚೇರಿ ಪ್ರವೇಶ ಮಾಡುತ್ತಿದ್ದಂತೆ ಮೊದಲು ನನ್ನ ಫೋಟೋ ತೆಗೆಸಿ ಆಚೆಗೆ ಹಾಕಿದ್ದರು. ಈ ಅವಮಾನ ಮರೆಯಕ್ಕೆ ಆಗುತ್ತಾ? ಇದೆಲ್ಲವೂ ಬಿಜೆಪಿಗೆ ಮೋದಿಗೆ ಗೊತ್ತಿಲ್ವಾ? ಹಾಸನದಲ್ಲಿ ರಾಹುಲ್ ಗಾಂಧಿ ಮೂಲಕ ನಿಂದನೆ ಮಾಡಿಸಿದರು. ಸಿದ್ದರಾಮಯ್ಯ ನಿರಂತರ ನಿಂದನೆ ಮಾಡುತ್ತಲೇ ಇದ್ದಾರೆ. ಎಷ್ಟು ದಿನ ನಿಂದನೆ ಸಹಿಸಲು ಸಾಧ್ಯ? ನಮ್ಮ ಜನ ಇದೆಲ್ಲದಕ್ಕೂ ಚುನಾವಣೆಯಲ್ಲಿ ಉತ್ತರಿಸುತ್ತಾರೆ ಎಂದರು.

ಜೆಡಿಎಸ್ ಸುಪರ್ದಿಯಲ್ಲಿದ್ದ ಕಚೇರಿಯನ್ನು ಕಿತ್ತುಕೊಂಡರು. ಜೊತೆಗೆ ಬೆಳೆದವರು ಕೈ ಕೊಟ್ಟರು. ಪೆಟ್ಟು ಮೇಲೆ ಪೆಟ್ಟು ತಿಂದಿದ್ದೇನೆ. ಪ್ರವಾಹದ ವಿರುದ್ಧವಾಗಿ ಈಜಿಕೊಂಡೇ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಪ್ರಾದೇಶಿಕ ಪಕ್ಷ ಉಳಿಸಿಕೊಲ್ಳುವುದು ಕಷ್ಟ. ಆದರೂ ಹಗಲಿರುಳು ನನ್ನ ಜನರಿಗಾಗಿ ಹೋರಾಡುತ್ತಿದ್ದೇನೆ ಎಂದರು.

ಕಾವೇರಿ ಸಮಸ್ಯೆ ಬಂದಾಗ ಸಿದ್ದರಾಮಯ್ಯ ನನ್ನ ಮನೆಗೆ ಬಂದು ಮನವಿ ಮಾಡಿದರು. ನನ್ನ ಫೋಟೋ ಕಿತ್ತು ಎಸೆದು ಅವಮಾನ ಮಾಡಿದ್ದನ್ನು ಮರೆತು ರಾಜ್ಯದ ಹಿತದೃಷ್ಟಿಯಿಂದ, ಕಾವೇರಿ ಕಣಿವೆ ಭಾಗದ ನನ್ನ ಜನರ ದೃಷ್ಟಿಯಿಂದ ವಿಧಾನಸೌಧಕ್ಕೆ ಬಂದು ಧರಣಿ ಕುಳಿತೆ. ಸರ್ಕಾರಕ್ಕೆ ಸಲಹೆ ಕೊಟ್ಟು ಹೋರಾಟ ಮಾಡಲಿಲ್ಲವೆ ಎಂದು ಪ್ರಶ್ನಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ