ಕುಖ್ಯಾತ ದರೋಡೆಕೋರರ ಗ್ಯಾಂಗ್ ಬಂಧನ

Notorious gangster gang detention

02-05-2018

ಬೆಂಗಳೂರು: ಬಂದೂಕು ತೋರಿಸಿ ವ್ಯಾಪಾರಿಗಳು, ಪಿಗ್ಮಿ ಕಲೆಕ್ಟರ್ ಗಳು ಬ್ಯಾಂಕುಗಳಲ್ಲಿ ನಗದು ವಹಿವಾಟು ನಡೆಸುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ದರೋಡೆಕೋರರ ಗ್ಯಾಂಗ್‍ನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಬಲೆಗೆ ಕೆಡವಿ 2 ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಗ್ಯಾಂಗ್‍ನಲ್ಲಿದ್ದ ಮಾರತ್‍ಹಳ್ಳಿಯ ಸಯೈದ್ ಅಬ್ರಹಾರ್ ಅಲಿಯಾಸ್ ಅಬ್ರಾರ್ (29), ಕೆಜಿ ಹಳ್ಳಿಯ ನಸ್ರುಲ್ಲಾ ಅಲಿಯಾಸ್ ಕಜ್ಜಿ (21), ತೌಸಿಫ್ ಅಹ್ಮದ್ ಅಲಿಯಾಸ್ ತೌಸಿಫ್ (28), ವಿನೋಬಾ ನಗರದ ಸೈಯದ್ ಶೇಖ್ ತಬ್ರೇಜ್ ಅಲಿಯಾಸ್ ಬಿಲಾವಡ್ (28) ಎಂಬುವರನ್ನು ಬಂಧಿಸಿ ಬಂಧಿಸಿ ಪಿಸ್ತೂಲ್ ಪೂರೈಸುತ್ತಿದ್ದವನನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಬಂಧಿತ ಗ್ಯಾಂಗ್‍ನಿಂದ 2 ನಾಡಪಿಸ್ತೂಲುಗಳು, 4 ಜೀವಂತ ಗುಂಡುಗಳು, 2 ಡ್ರ್ಯಾಗರ್‍ ಗಳು, 2 ಬೈಕ್‍ಗಳು, 80 ಸಾವಿರ ನಗದನ್ನು ವಶಪಡಿಸಿಕೊಂಡು ಬಾಣಸವಾಡಿ, ಕೊಡಿಗೇಹಳ್ಳಿಯ ತಲಾ 3, ಬೇಗೂರು, ಹೆಣ್ಣೂರು, ಕೆ.ಆರ್.ಪುರ, ಸೋಲದೇವನಹಳ್ಳಿಯ ತಲಾ 2, ರಾಮಮೂರ್ತಿ ನಗರ, ಗಂಗಮ್ಮನ ಗುಡಿ, ಮಡಿವಾಳ, ನಂದಿನಿ ಲೇಔಟ್, ಇಂದಿರಾನಗರ ತಲಾ 1 ಸೇರಿ 22 ದರೋಡೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಆರೋಪಿಗಳು ಹೋಲ್‍ ಸೇಲ್ ಸಿಗರೇಟ್ ಇನ್ನಿತರ ದಿನಸಿ ವಸ್ತುಗಳ ಮಾರಾಟ ಮಾಡುವ ವ್ಯಾಪಾರಿಗಳು, ಪಿಗ್ಮಿ ಕಲೆಕ್ಟರ್‍ ಗಳು, ಬ್ಯಾಂಕುಗಳಲ್ಲಿ ನಗದು ವಹಿವಾಟು ನಡೆಸುವವರು, ಶ್ರೀಮಂತರನ್ನು ಗುರಿಯಾಗಿಸಿಕೊಂಡು ಹೊಂಚು ಹಾಕಿ ಅಡ್ಡಗಟ್ಟಿ ಡ್ರ್ಯಾಗರ್‍ ನಿಂದ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು.

ಕೃತ್ಯಕ್ಕಾಗಿ ಬೈಕ್‍ಗಳನ್ನು ಕಳವು ಮಾಡಿ ಅದಕ್ಕೆ ನಕಲಿ ನಂಬರ್ ಪ್ಲೇಟ್‍ಗಳನ್ನು ಹಾಕಿಕೊಂಡು ಆಗ್ನೇಯ ಹಾಗೂ ಈಶಾನ್ಯ ವಿಭಾಗದ ಹಲವೆಡೆ ತಿರುಗುತ್ತಾ ಸುಲಿಗೆ ನಡೆಸುತ್ತಿದ್ದರು. ಆರೋಪಿಗಳಲ್ಲಿ ಸಯೈದ್ ಅಬ್ರಹಾರ್, ಹಾಗೂ ಬಿಲಾವಡ್, ಕೆಜಿಹಳ್ಳಿಯ ಪೊಲೀಸ್ ಠಾಣೆಯ ಎ ರೌಡಿ ಪಟ್ಟಿಯಲ್ಲಿದ್ದಾರೆ.

ಅಬ್ರಹಾರ್ ವಿರುದ್ಧ 9 ವಾರೆಂಟ್‍ಗಳು ಸೇರಿ ವಿವಿಧ ಠಾಣೆಗಳಲ್ಲಿ 30 ಅಪರಾಧ ಪ್ರಕರಣಗಳು ದಾಖಲಾಗಿವೆ. ನಸ್ರುಲ್ಲಾ ವಿರುದ್ಧ 8 ವಾರೆಂಟ್‍ಗಳು ಜಾರಿಯಾಗಿ, 18 ಪ್ರಕರಣಗಳು ದಾಖಲಾಗಿವೆ. ಬಿಲಾವಡ್ ವಿರುದ್ಧ ವಾರೆಂಟ್‍ಗಳು ಜಾರಿಯಾಗಿದ್ದು, 15 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

ಆರೋಪಿಗಳು ಹಿಂದೆ ಕೂಡ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಕೃತ್ಯವೆಸಗಿ ಬಂಧಿತರಾಗಿ ಜೈಲಿಗೆ ಹೋಗಿದ್ದರೂ ಜಾಮೀನು ಪಡೆದು ಹೊರ ಬಂದು ನ್ಯಾಯಾಲಯಕ್ಕೆ ಹಾಜರಾಗದೆ ದರೋಡೆ ಕೃತ್ಯದಲ್ಲಿ ತೊಡಗಿದ್ದರು.

ಆರೋಪಿಗಳು 2 ಪಿಸ್ತೂಲುಗಳನ್ನು, ಉತ್ತರ ಪ್ರದೇಶದ ಮೀರಜ್ ಖಾನ್ ಎಂಬಾತನಿಂದ ಖರೀದಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಬಂಧಿತನಾಗಿ ಜೈಲಿನಲ್ಲಿರುವ ಮೀರಜ್ ಖಾನ್‍ನನ್ನು ವಶಕ್ಕೆ ಪಡೆದು ಪಿಸ್ತೂಲ್ ಮೂಲದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದರು.

ಹೊಂಗಸಂದ್ರದ ಎಪಿಆರ್ ರಸ್ತೆಯಲ್ಲಿ ಕಳೆದ ಏಪ್ರಿಲ್ 5ರಂದು ಮಧ್ಯಾಹ್ನ ಬಂಧಿತ ಆರೋಪಿಗಳು, ಹೆಲ್ಮೆಟ್ ಧರಿಸಿ ಪಲ್ಸರ್ ಬೈಕ್‍ಗಳಲ್ಲಿ ಬಂದು ಸಿಗರೇಟ್ ವ್ಯಾಪಾರಿ ಮಧುಸೂದನ್ ಅವರನ್ನು ಅಡ್ಡಗಟ್ಟಿ ಹಣವಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದರು.

ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಎಸಿಪಿ ಕೆ.ಎಂ ರಮೇಶ್, ಇನ್ಸ್ಪೆಕ್ಟರ್  ಜಿ.ವೈ ಗಿರಿರಾಜ್ ಅವರ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

special squad Robbery gang ಪಿಸ್ತೂಲ್ ಹೆಲ್ಮೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ