‘ಕೀಳುಮಟ್ಟದ ಮಾತನ್ನು ಕಾಂಗ್ರೆಸ್ ನಿಲ್ಲಿಸಬೇಕು’-ಶೋಭಾ

Tomorrow Narendra Modi speech at gulbarga, bellary and bangalore

02-05-2018

ಬೆಂಗಳೂರು: ಉಡುಪಿ, ಸಂತೇಮರಹಳ್ಳಿ ‌ಸೇರಿದಂತೆ ನಿನ್ನೆ ಹಲವು ಕಡೆ‌ ನಡೆದ ಪ್ರಧಾನಿ ಮೋದಿ ಅವರ ಮೂರು ಸಮಾವೇಶಗಳು ಯಶಸ್ವಿಯಾಗಿ ನಡೆದಿವೆ. ಯಡಿಯೂರಪ್ಪನವರ‌ ನೇತೃತ್ವಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ ಎಂದು ನಗರದ ಬಿಜೆಪಿ ಮಾಧ್ಯಮ ಕೇಂದ್ರ‌ದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ, ಬಳ್ಳಾರಿ, ಬೆಂಗಳೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ. ಅಲ್ಲದೇ  ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಕೂಡ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

'ಕಾಂಗ್ರೆಸ್ ಸೋಲಿನ ಭೀತಿಯಿಂದ ಹತಾಶೆಗೊಳಗಾಗಿದೆ. ಹತಾಶರಾದ ಕಾಂಗ್ರೆಸ್ಸಿಗರು ಬೆಂಗಳೂರು, ದಾವಣಗೆರೆ, ‌ಕೋಲಾರ, ಧಾರವಾಡ ಕಡೆಗಳಲ್ಲಿ ಬಿಜೆಪಿ ಪ್ರಚಾರದ ವಾಹನಗಳನ್ನು ಒಡೆದು ಹಾಕಿದ್ದಾರೆ. ಪ್ರಚಾರದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದೆ, ವಾಹನದ‌ ಡ್ರೈವರ್ ಮತ್ತು ಆಪರೇಟರ್ ಗಳ ಮೇಲೆ ಕಾಂಗ್ರೆಸಿಗರು ಹಲ್ಲೆ ಮಾಡಿದ್ದಾರೆ. ಹತಾಶ ಕಾಂಗ್ರೆಸ್ ವರ್ತನೆಗೆ ನಮ್ಮ‌ ಬಳಿ ಹಲವು ಸಾಕ್ಷಿಗಳಿವೆ' ಎಂದು ದೂರಿದ್ದಾರೆ.

'ಜಾಹೀರಾತಿನಲ್ಲಿ ಹತಾಶೆ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿಯ ಆಧಾರದ ಮೇಲೆ ಜಾಹೀರಾತು ನೀಡಬೇಕಿತ್ತು. ಆದರೆ, ವೈಯಕ್ತಿಕ‌ ದ್ವೇಷಕ್ಕೆ ಜಾಹಿರಾತು ಮೀಸಲಾಗಿದೆ‌. ನಿಜಕ್ಕೂ ಅಭಿವೃದ್ಧಿ ಮಾಡಿದ್ದರೆ ಕೀಳುಮಟ್ಟದ ಭಾಷೆ ಬಳಸುವ ದುಸ್ಥಿತಿ ಬರುತ್ತಿರಲಿಲ್ಲ'. ಕೀಳುಮಟ್ಟದ ರಾಜಕಾರಣಕ್ಕೆ ಕಾಂಗ್ರೆಸ್ ಇಳಿದಿದೆ, ಹತಾಶ ಕಾಂಗ್ರೆಸಿನ‌ ಮುಖವಾಡ ಕಳಚುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಹುಲ್‌ ಗಾಂಧಿಯದು ಹಳೆಯ ಗ್ರಾಮ ಫೋನ್ ಭಾಷಣ. ರಾಹುಲ್‌ ಮಾತಿನಲ್ಲಿ ಹೊಸತನವೇನಿಲ್ಲ. 2014ರ ಲೋಕಸಭೆ‌ ಚುನಾವಣೆಯಲ್ಲಿ ಗೋದ್ರಾ ಪ್ರಕರಣ ಕಾಂಗ್ರೆಸ್ ಬಳಸಿತ್ತು, ಆಗ ಕಾಂಗ್ರೆಸಿಗರ ಮಾತೇ ತಿರುಗುಬಾಣವಾಗಿತ್ತು. 'ಕೀಳುಮಟ್ಟದ ಮಾತನ್ನು ಕಾಂಗ್ರೆಸ್ ನಿಲ್ಲಿಸಬೇಕು, ಇಲ್ಲದಿದ್ದರೆ ಜನರೇ ತಕ್ಕಪಾಠ ಕಲಿಸಲಿದ್ದಾರೆ' ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

shobha karandlaje Rahul Gandhi ಗ್ರಾಮ ಫೋನ್ ಕೀಳುಮಟ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ