ರಾಹುಲ್ ವ್ಯಂಗ್ಯ-ಮೋದಿಗೆ ತಿರುಗುಬಾಣ

kannada speech: rahul gandhi vs narendra modi

02-05-2018

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಹಾನ್ ವಾಕ್ ಚತುರ. ಆ ಚತುರತೆಯೂ ಅವರು ಪ್ರಧಾನಮಂತ್ರಿ ಹುದ್ದೆಗೆ ಏರಲು ಪ್ರಮುಖ ಕಾರಣಗಳಲ್ಲಿ ಒಂದು. ಅದ್ಭುತ ಮಾತುಗಾರ ಪ್ರಧಾನಿ ಮೋದಿ ಅವರ ವಾಕ್ ಚಾತುರ್ಯ, ವ್ಯಂಗ್ಯ, ವಿವಿಧ ಆಂಗಿಕ ಭಂಗಿಗಳ ಮೂಲಕ ಆಡುವ ಮಾತುಗಳೇ ಈಗ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಮತ ಬೇಟೆಯಲ್ಲಿ ಉಚ್ಚಾರಣೆ ವಿರುದ್ಧ ಸಮರ ಮತ್ತು ವ್ಯಂಗ್ಯದ ಬಾಣಗಳ ಭರಾಟೆ ಆರಂಭವಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಬಸವಕಲ್ಯಾಣದ ಅನುಭವಮಂಟಪಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವಣ್ಣನ ವಚನವನ್ನು ಇವನರ್ವ, ಇವನರ್ವ, ಇವನರ್ವ, ಇವನಮ್ವ ಇವನಮ್ವ ಎಂದು ತಪ್ಪು ತಪ್ಪಾಗಿ ಉಚ್ಚರಿಸಿದ್ದರು. ನಂತರ ರಾಹುಲ್ ಬಾಯಲ್ಲಿ ಮೈಸೂರಿನಲ್ಲೂ ವಿಶ್ವೇಶ್ವರಯ್ಯ ಅವರ ಹೆಸರು ವಿಶ್ವರಯ್ಯ, ಕೃಷ್ಣರಾಜ ಒಡೆಯರ್ ಅವರದು ಕೃಷ್ಣರಾಜನ್ ಒಡೆಯರ್ ಆಗಿತ್ತು. ಕನ್ನಡ ಬಾರದ ರಾಹುಲ್ ಗಾಂಧಿ ಅವರ ಕನ್ನಡ ಉಚ್ಚಾರಣೆಯ ಪ್ರಯತ್ನ ಸಹಜವಾಗಿ ತಪ್ಪು ಉಚ್ಚಾರಣೆಗೆ ದಾರಿಮಾಡಿಕೊಟ್ಟಿತ್ತು. ಅದೇ ದೊಡ್ಡ ಪ್ರಮಾದ ಎಂದು ರಾಹುಲ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಲೇವಡಿ ಮಾಡಲಾಗಿತ್ತು. ಈಗ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿಗೆ ಬಂದ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಅವರ ಕನ್ನಡವನ್ನು ಗೇಲಿ ಮಾಡಿದರು. 15 ನಿಮಿಷ ಸಮಯ ಕೊಡುತ್ತೇನೆ ರಾಹುಲ್ ಗಾಂಧಿ 5 ಬಾರಿ ವಿಶ್ವೇಶ್ವರಯ್ಯ ಎಂದು ಹೇಳಲಿ ಎಂದು ಸವಾಲು ಹಾಕಿದರು. ರಾಹುಲ್ ಈಗ ಭಾಷಣ ಕಲಿಯುತ್ತಿದ್ದಾರೆ. ಚೀಟಿ ಹಿಡಿದು ಭಾಷಣ ಮಾಡುವ ರಾಹುಲ್ ಗಾಂಧಿ ಕೈಲಿ ಹಿಂದಿ ಬಂದರೆ ಹಿಂದಿಯಲ್ಲಿ, ಇಂಗ್ಲಿಷ್ ಬಂದರೆ ಇಂಗ್ಲಿಷ್‍ನಲ್ಲಿ ಹದಿನೈದು ನಿಮಿಷಗಳ ಕಾಲ ಕರ್ನಾಟಕ ರಾಜ್ಯ ಸರ್ಕಾರದ ಸಾಧನೆಗಳನ್ನ ವಿವರಿಸಲಿ ಎಂದು ಸವಾಲು ಹಾಕಿದರು.

ರಾಹುಲ್ ಗಾಂಧಿ ಕನ್ನಡ ಉಚ್ಚಾರಣೆಯನ್ನು ಅಪಹಾಸ್ಯಕ್ಕೆ ಬಳಸಿಕೊಂಡ ಪ್ರಧಾನಿ ನರೇಂದ್ರಮೋದಿ ಅವರೂ ಮಾಡಿದ್ದು ಅದೇ ತಪ್ಪು ಮತ್ತು ಎಡವಟ್ಟು. ಮೋದಿ ಅವರ ಬಾಯಲ್ಲೂ ವಿಶ್ವೇಶ್ವರಯ್ಯ-ವಿಸ್ವಸ್‍ವರಯ್ಯ ಆಯಿತು. ಮಂಟೇಸ್ವಾಮಿ-ಭಗವಾನ್ ಮಂತೇಸ್ವಾಮಿ, ಮಾರಮ್ಮ–ದೇವಿ ಮಾರವಬ್ಯಾ, ಮಲೆ ಮಹದೇಶ್ವರ- ಮಲ ಮೇವದೇವಸ್ವರ್, ಬಿಳಿಗಿರಿರಂಗ-ಬಿಲ್ಲಿಗಿರಿರಂಗ, ಹಿಮವದ್ ಗೋಪಾಲಸ್ವಾಮಿಗೆ-ಹಿಮ್ಮದ್ ಗೋಪಾಲ ಸ್ವಾಮಿ ಎಲ್ಲಾ ದೇವರುಗಲ್ಲೆ ನನ್ ಭಕ್ತಿಪೂರ್ವಕ ಪ್ರಳಾವ್ಗಳು. ಸುತ್ತೂರ್ ಮಠ್ ಕನಕಗಿರಿ ಮಠಗಳ ಪೂಜ್ಯ ಯತಿಗಲ್ಲಿಗೆ ನನ್ನ ಸ್ರದ್ಧೆಯ ನಮನಗಳು ಎಂದು ಅದ್ಭುತ ಕನ್ನಡ ಹೊರಬಿದ್ದಿತು. ಮೋದಿ ವ್ಯಂಗ್ಯದ ಬಾಣ ಅದೇ ವೇದಿಕೆಯಲ್ಲಿ ಅವರಿಗೇ ತಿರುಗುಬಾಣವಾಯಿತು. ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ಹೋಗಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರಮೋದಿಯವರೇ ನಗೆಪಾಟಲಿಗೀಡಾದರು.

ಪರಭಾಷಿಕರು ಕನ್ನಡ ಭಾಷೆಯನ್ನು ಬಳಸುವಾಗ ತಿಣುಕುವುದು, ತಪ್ಪು ಉಚ್ಚರಿಸುವುದು ಸಹಜ. ಅದು ಜನಸಾಮಾನ್ಯರಿಗೆ ಹಾಸ್ಯದ ವಸ್ತುವಾಗುತ್ತದೆ. ಭಾಷಾ ಶುದ್ಧತೆ ಬಗ್ಗೆ ಟೀಕಿಸುವುದು ಸರಿಯಲ್ಲ. ಅವರು ಏನು ಹೇಳುತ್ತಾರೆ ಅನ್ನುವುದಷ್ಟೇ ಮುಖ್ಯ, ಈಗ ಉದ್ಭವಿಸಿರುವ ಪ್ರಶ್ನೆ ಎಂದರೆ ಪ್ರಧಾನಮಂತ್ರಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಅವರು ಜನಸಾಮಾನ್ಯರ ಮಟ್ಟಕ್ಕೆ ಇಳಿದು ಬಿಟ್ಟು ಭಾಷಾ ಶುದ್ಧತೆಯನ್ನು ಗೇಲಿ ಮಾಡಲು ನಿಂತರಲ್ಲ ಎನ್ನುವುದು. ಸ್ವತಃ ತಮ್ಮ ಬಾಯಲ್ಲೆ ಕನ್ನಡದ ಉಚ್ಚಾರಣೆ ಸರಿಯಿಲ್ಲದಿರುವಾಗ ಈ ವ್ಯಂಗ್ಯ-ಗೇಲಿ ಯಾಕೆ?

ಪ್ರಧಾನಿ ನರೇಂದ್ರ ಮೋದಿ ಹಾಗು ರಾಹುಲ್ ಗಾಂಧಿ ನಡುವಿನ ವ್ಯಂಗ್ಯ, ಅಪಹಾಸ್ಯ, ಮಾತಿನ ಚಾಟಿಯೇಟುಗಳ ವಾಕ್ಸಮರಕ್ಕೆ ಇತಿಹಾಸ ಇದೆ. 2016ರ ನವೆಂಬರ್ ಎಂಟರಂದು ನೋಟುಗಳ ಅಮಾನ್ಯೀಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರು. “ನನಗೆ, ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಿದರೆ ಪ್ರಧಾನಿ ಮೋದಿ ಅಲ್ಲಿ ಕುಳಿತುಕೊಳ್ಳಲು ಆಗೋಲ್ಲ, ಭೂಕಂಪ ಆಗುತ್ತದೆ”  ಎಂದು ರಾಹುಲ್ ಗಾಂಧಿ ಅಣಕವಾಡಿದ್ದರು. ಅದಕ್ಕೆ ಪ್ರಧಾನಿ ಮೋದಿ ರಾಹುಲ್ ಗಾಂಧೀ ಅವರು ಮಾತನಾಡುವುದನ್ನು ಯಾರೂ ತಡೆದಿಲ್ಲ. ಅವರು ಮಾತನಾಡಲು ಶುರು ಮಾಡದ್ದರಿಂದಲೇ ಭೂಕಂಪ ಆಗುವುದು ನಿಂತು ಹೋಗಿದೆ ಎಂದು ಕಾಲೆಳೆದಿದ್ದರು.

ಹೀಗೆ ಅವಕಾಶ ಸಿಕ್ಕಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ವ್ಯಂಗ್ಯ, ಟೀಕಾಸ್ತ್ರ, ವಾಗ್ಬಾಣ ಹಾಗು ಗೇಲಿ ಮಾತುಗಳು, ಕಾಲೆಳೆಯುವುದು ನಡೆದೇ ಇರುತ್ತದೆ. ಆದರೆ ಇದು ಮಿತಿ ಮೀರದಂತೆ ಎರಡೂ ಕಡೆ ಎಚ್ಚರವನ್ನ ದೇಶದ ಜನತೆ ನಿರೀಕ್ಷಿಸುತ್ತದೆ.


ಸಂಬಂಧಿತ ಟ್ಯಾಗ್ಗಳು

Rahul gandhi Narendra Modi ಭೂಕಂಪ ಜನಸಾಮಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ