ಬೇಸಿಗೆ ರಜೆ ಕಡಿತ: ಉಪನ್ಯಾಸಕರ ಧರಣಿ

Summer Vacation Reduction: Lecturers protest

30-04-2018

ಬೆಂಗಳೂರು: ಬೇಸಿಗೆ ರಜೆ ಕಡಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಫ್ರೀಡಂ ಪಾರ್ಕ್‍ನಲ್ಲಿನಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮತ್ತು ಪ್ರಾಂಶುಪಾಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಸಿದ ಧರಣಿಯಲ್ಲಿ ಧರಣಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಸಂಘಗಳ ಪದಾಧಿಕಾರಿಗಳು, ಉಪನ್ಯಾಸಕರುಗಳು ಪಾಲ್ಗೊಂಡು ರಜೆ ಕಡಿತಗೊಳಿಸಿ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು. ಸುತ್ತೋಲೆಯನ್ನು ಹಿಂಪಡೆಯಬೇಕು ಇಲ್ಲವೆ ಕಡಿತಗೊಳಿಸಿರುವ 30 ದಿನ ಬೇಸಿಗೆ ರಜೆಯನ್ನು ಗಳಿಕೆ ರಜೆಯಾಗಿ ಪರಿಗಣಿಸಬೇಕು ಎಂದು ಉಪನ್ಯಾಸಕರು ಒತ್ತಾಯಿಸಿದರು.

ರಾಜ್ಯ ಸರ್ಕಾರ ಬೇಸಿಗೆ ರಜೆಯನ್ನು ಕಡಿತಗೊಳಿಸಿ ಸುತ್ತೋಲೆ ಹೊರಡಿಸುವ ಮೊದಲು ಶೈಕ್ಷಣಿಕ ಚಿಂತಕರು, ಪ್ರತಿನಿಧಿಗಳು, ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸದೆ ಹೊರಡಿಸಿರುವ ಸುತ್ತೋಲೆಯು ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪಿ.ಯು.ಸಿ ಪರೀಕ್ಷೆ ಫೆಬ್ರವರಿ 21ರಂದು ಮುಗಿದಿದ್ದು, ವಿದ್ಯಾರ್ಥಿಗಳಿಗೆ 69 ದಿನ ಬೇಸಿಗೆ ರಜೆ ಸಿಕ್ಕಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿರುತ್ತಾರೆ. ಆದರೆ ವಾಸ್ತವವಾಗಿ ಮಾರ್ಚ್ 18ರವರೆಗೆ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳನ್ನು ಉಪನ್ಯಾಸಕರು ನಡೆಸಿರುತ್ತಾರೆ. ಆನಂತರ ಏಪ್ರಿಲ್ 11 ರವರೆಗೆ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ನಿರ್ವಹಿಸುತ್ತಿದ್ದು, ರಜೆ ಕಡಿತಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈಗಾಗಲೇ ದಸರಾ ರಜೆಯ 15 ದಿನ ಕಡಿತಗೊಳಿಸಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಾಗಿತ್ತು. ಈ ರೀತಿ ಪದವಿ ಪೂರ್ವ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಅವರ ಬೇಸಿಗೆ ರಜಾ ಕಡಿತಗೊಳಿಸಲಾಗಿದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ರ್ಲೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು. ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಹೊಸ ಸರ್ಕಾರ ಆಡಳಿತಕ್ಕೆ ಬಂದ ನಂತರ ಧರಣಿಯನ್ನು ಮುಂದುವರೆಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಮಾರ್ಚ್ 27ರ ನಂತರ ಏಪ್ರಿಲ್ 11 ರಂದು ಸುತ್ತೋಲೆ ಹೊರಡಿಸಿರುವುದು ಖಂಡನೀಯ ಎಂದ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಪಿ. ಶ್ರೀಕಂಠೇಗೌಡ ಅವರು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಅವರ ಹಕ್ಕಿನ ರಜೆಯನ್ನು ಕೊಡಿಸಿಲ್ಲ. ಜೊತೆಗೆ 32 ಇಲಾಖೆಗಳಲ್ಲಿ ಜಾರಿಯಲ್ಲಿರುವಂತಹ ರಜೆಯನ್ನು ಅವರಿಗೆ ನೀಡದೆ ಸರ್ಕಾರ ಅನ್ಯಾಯವೆಸಗುತ್ತಿದೆ ಎಂದು ವಿರೋಧಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ