ಪಿಯುಸಿ ಘಲಿತಾಂಶ: ವಿದ್ಯಾರ್ಥಿನಿಯರ ಮೇಲುಗೈ

Karnataka: 2nd puc results announced

30-04-2018

ಬೆಂಗಳೂರು: ಕಳೆದ ಮಾರ್ಚ್‍ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 59.56 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 7 ರಷ್ಟು ಫಲಿತಾಂಶ ಹೆಚ್ಚಾಗಿದ್ದರೆ ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ದಕ್ಷಿಣ ಕನ್ನಡ ಶೇ. 91.49 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಚಿಕ್ಕೋಡಿ ಶೇ. 52.20 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಡೆಯ ಸ್ಥಾನ ಪಡೆದಿದೆ. ಪರೀಕ್ಷೆಗೆ ಹಾಜರಾದ 6,85,713 ವಿದ್ಯಾರ್ಥಿಗಳಲ್ಲಿ 4,08,421 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಪಿ.ಶಿಖಾ ಅವರು ತಿಳಿಸಿದ್ದಾರೆ.

ಪಿಯು ಪರೀಕ್ಷೆ  ಫಲಿತಾಂಶವನ್ನು ಪತ್ರಿಕಾಗೋಷ್ಠಿಯಲ್ಲಿಂದು ಬಿಡುಗಡೆ ಮಾಡಿದ ಅವರು ಪರೀಕ್ಷೆಗೆ ಹಾಜರಾದ 3,49,592 ಬಾಲಕರ ಪೈಕಿ 1,82,852 ಮಂದಿ (ಶೇ. 52.30) ಹಾಗೂ ಬಾಲಕಿಯರಲ್ಲಿ ಪರೀಕ್ಷೆಗೆ ಹಾಜರಾಗಿದ್ದ 3,36,121 ಮಂದಿಯಲ್ಲಿ 2,25,569 ಮಂದಿ ಉತ್ತೀರ್ಣರಾಗಿದ್ದು, ಶೇ. 67.11 ರಷ್ಟು ತೇರ್ಗಡೆಯಾಗಿದ್ದಾರೆ ಎಂದು ಹೇಳಿದರು.

ಸರ್ಕಾರಿ ಕಾಲೇಜುಗಳಲ್ಲಿ ಶೇ. 61.39 ರಷ್ಟು ಅನುದಾನಿತ ಕಾಲೇಜುಗಳಲ್ಲಿ ಶೇ. 62,47 ರಷ್ಟು, ಅನುದಾನ ರಹಿತ ಕಾಲೇಜುಗಳಲ್ಲಿ ಶೇ. 72.84, ವಿಭಜಿತ ಕಾಲೇಜುಗಳಲ್ಲಿ ಶೇ. 73.70, ಕಾರ್ಪೊರೇಷನ್ ಕಾಲೇಜುಗಳಲ್ಲಿ ಶೇ. 57.17 ಸೇರಿದಂತೆ ಈ ಸಾಲಿನಲ್ಲಿ ಶೇ. 68.89 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಉನ್ನತ ಶ್ರೇಣಿಯಲ್ಲಿ 54,692 ವಿದ್ಯಾರ್ಥಿಗಳು ಶೇ. 85ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದು, ಶೇ. 85ಕ್ಕಿಂತ ಕಡಿಮೆ ಅಂಕ ಪಡೆದ 2,13,611 ಮಂದಿ, ಶೇ. 60ಕ್ಕಿಂತ ಕಡಿಮೆ ಅಂಕ ಪಡೆದ 82,532 ಹಾಗೂ ತೃತೀಯ ದರ್ಜೆಯಲ್ಲಿ 5,75,86 ಮಂದಿ ಸೇರಿದಂತೆ ಒಟ್ಟಾರೆ 4,08,421 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು.

ಕಳೆದ ಮೂರು ವರ್ಷಗಳಿಂದ ಶೂನ್ಯ ಫಲಿತಾಂಶ ಪಡೆದಿರುವ 10 ಅನುದಾನಿತ ಕಾಲೇಜುಗಳ ಮಾನ್ಯತೆ ರದ್ದತಿಗೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು ಪದವಿಪೂರ್ವ ಕಾಲೇಜುಗಳಲ್ಲಿ ಶೇ. ನೂರಕ್ಕೆ ನೂರರಷ್ಟು ಫಲಿತಾಂಶ ಕಾಲೇಜುಗಳ ಪೈಕಿ ಸರ್ಕಾರಿ ಕಾಲೇಜುಗಳು 25, ಅನುದಾನಿತ ಪಿಯು ಕಾಲೇಜುಗಳು 2, ಅನುದಾನರಹಿತ ಪಿಯು ಕಾಲೇಜುಗಳು 41 ಒಟ್ಟು 68 ಕಾಲೇಜುಗಳು ನೂರಕ್ಕೆ ನೂರು ಫಲಿತಾಂಶ ಪಡೆದಿವೆ ಎಂದು ಹೇಳಿದರು.

ತಲಾ ಮೂರು ಪದವಿಪೂರ್ವ ಕಾಲೇಜುಗಳು ಮತ್ತು ಅನುದಾನರಹಿತ ಕಾಲೇಜುಗಳು, 112 ಅನುದಾನರಹಿತ ಕಾಲೇಜುಗಳೂ ಸೇರಿದಂತೆ 118 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ಅವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 14 ಕೊನೆಯ ದಿನವಾಗಿದೆ. ಫಲಿತಾಂಶಕ್ಕೆ ಕಾಯದೆ ಮುಂದಿನ ಪರೀಕ್ಷೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 14 ರಂದು ಕೊನೆಯ ದಿನವಾಗಿದ್ದು, ಪ್ರತಿ ವಿಷಯದ ಮರು ಮೌಲ್ಯಮಾಪನಕ್ಕೆ 1670 ರೂ. ಶುಲ್ಕ ಪಾವತಿಸಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯದೆ ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ ಅವರು, ಪೂರಕ ಪರೀಕ್ಷೆಗೆ ಪರೀಕ್ಷಾ ಶುಲ್ಕ ಪಾವತಿಸಲು ಮೇ 15 ಕಡೆ ದಿನವಾಗಿದೆ ಎಂದರು.

ಜೂನ್ 8 ರಿಂದ 20ರ ವರೆಗೆ ಪೂರಕ ಪರೀಕ್ಷೆಗಳನ್ನು ರಾಜ್ಯದೆಲೆಡೆ ನಡೆಸಲಾಗುವುದು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಭಾವಚಿತ್ರದಲ್ಲಿನ ನ್ಯೂನ್ಯತೆ ಸರಿಪಡಿಸಲು ಮೇ 2ರಿಂದ 10ರ ವರೆಗೆ ಇಲಾಖೆಯ ಆನ್‍ಲೈನ್ ಪೋರ್ಟಲ್‍ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಪಾವತಿಸಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Result 2nd PUC ಸ್ಕ್ಯಾನಿಂಗ್ ಆನ್‍ಲೈನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ