ಅತಂತ್ರ ವಿಧಾನಸಭೆ: ಮೂಲ ಕಾಂಗ್ರೆಸಿಗರು-ಬಿಎಸ್ವೈ ಹಿತ ಶತ್ರುಗಳ ಕನವರಿಕೆ!

karnataka election and surveys!

30-04-2018

ಬೆಂಗಳೂರು: ರಾಜ್ಯದಲ್ಲಿ ಮೇ ತಿಂಗಳ 12ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ? ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ?ಎಂದು ಯಾರನ್ನಾದರೂ ಕೇಳಿ."ಈಗಿನ ಪರಿಸ್ಥಿತಿಯಲ್ಲಿ ನೋಡಿದರೆ ಯಾರಿಗೂ ಬಹುಮತ ಸಿಗುವಂತೆ ಕಾಣುತ್ತಿಲ್ಲ. ಅತಂತ್ರ ವಿಧಾನಸಭೆ ಖಚಿತ" ಎನ್ನುತ್ತಾರೆ.

ಇಂತಹದೇ ಅಭಿಪ್ರಾಯ ಅನೇಕ ಮಾಧ್ಯಮಗಳು ಹಾಗೂ ಸಂಸ್ಥೆಗಳ ಚುನಾವಣಾ ಸಮೀಕ್ಷೆಗಳಲ್ಲಿ ವ್ಯಕ್ತವಾಗಿವೆ.(2013 ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೂ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ ಎಂದೇ ಬಹುತೇಕ ಸಮೀಕ್ಷೆ ಗಳು ಅಂದಾಜಿಸಿದ್ದವು). ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗುವುದನ್ನು, ಬಿಜೆಪಿ ಬಹುಮತ ಗಳಿಸಿದರೆ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಆಗುವುದನ್ನು ಬಯಸದಿರುವವರಂತೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಸರಳ ಬಹುಮತ ಲಭಿಸಬಾರದು, ಜೆಡಿಎಸ್ 'ಕಿಂಗ್ ಮೇಕರ್' ಆಗಬೇಕು ಎನ್ನುವ ಹಂಬಲದಲ್ಲಿದ್ದಾರೆ. ಅಂತಹ ಸಮಯದಲ್ಲಿ ಕಾಂಗ್ರೆಸ್ ನಿಂದ ಸಿದ್ದರಾಮಯ್ಯ, ಬಿಜೆಪಿಯಿಂದ ಯಡಿಯೂರಪ್ಪ ಮುಖ್ಯ ಮಂತ್ರಿ ಆಗುವುದಿಲ್ಲ ಎನ್ನುವ ತಮ್ಮ ಮನೋಭಿಲಾಷೆಯನ್ನು ಹರಡುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಮೀಕ್ಷೆಗಳು ಹಾಗೂ ಕೆಲ ರಾಜಕೀಯ ಪಂಡಿತರ ಅತಂತ್ರ ವಿಧಾನಸಭೆ ಅಂದಾಜನ್ನು ಸುಳ್ಳು ಮಾಡಲು  ಹಠಕ್ಕೆ ಬಿದ್ದಂತೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಭಾರೀ ಕಸರತ್ತು ನಡೆಸಿ ಟಿಕೆಟ್ ಹಂಚಿಕೆ ಮಾಡಿವೆ. ಜೆಡಿಎಸ್ ಅಂತೂ ಕಾಂಗ್ರೆಸ್ ಮತ್ತು ಬಿಜೆಪಿ ಯಲ್ಲಿ ಟಿಕೆಟ್ ಸಿಗದ ಅತೃಪ್ತರಿಗೆ ಗಾಳ ಹಾಕಿ ಗೆಲುವಿನ ಕನಸು ಕಾಣುತ್ತಿದೆ. ಮೇಲ್ನೋಟಕ್ಕೆ ಚುನಾವಣಾ ಕಣ ತೀವ್ರ ಹಣಾಹಣಿ ಇರುವಂತೆ ಕಾಣುತ್ತಿದೆ. ಜಿದ್ದಿಗೆ ಬಿದ್ದಂತೆ ಆರೋಪ-ಪ್ರತ್ಯಾರೋಪಗಳು, ವಾಗ್ದಾಳಿಗಳು ಆರಂಭವಾಗಿವೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಯ ಬಹುತೇಕರ ಅಂತರಂಗದ ಲೆಕ್ಕಾಚಾರಗಳು ಬೇರೆಯದ್ದೇ ಆಗಿವೆ. ಮೂಲ ಕಾಂಗ್ರೆಸಿಗರು ಮತ್ತು ಯಡಿಯೂರಪ್ಪ ಅವರ ಹಿತ ಶತ್ರುಗಳು ತಮ್ಮ ಪಕ್ಷಕ್ಕೆ ಬಹುಮತ ಬಾರದಿರಲಿ ಎಂದು ಹಂಬಲಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ಸರಳ ಬಹು ಮತ ಅಂದರೆ 113 ಕ್ಷೇತ್ರಗಳಲ್ಲಿ ಜಯಗಳಿಸಿದರೆ ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿ ಆಗುವುದು ಖಚಿತ. ನಿರಾಯಾಸವಾಗಿ ಮುಖ್ಯ ಮಂತ್ರಿ ಕುರ್ಚಿ ಅವರ ಪಾಲಾಗುತ್ತದೆ. ಅದನ್ನು ಯಾರಿಂದಲೂ ತಪ್ಪಿಸುವುದು ಕಷ್ಟ. ಆದರೆ, ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿ ಆಗುವುದು ಮೂಲ ಕಾಂಗ್ರೆಸಿಗರಿಗೆ ಬೇಡ. ಅದೇ ರೀತಿ ಬಿಜೆಪಿ ಬಹುಮತ ಗಳಿಸಿದರೆ ಯಡಿಯೂರಪ್ಪ ಮುಖ್ಯ ಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಅವರನ್ನು ಮುಖ್ಯ ಮಂತ್ರಿ ಅಭ್ಯರ್ಥಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದಾರೆ. ಆದರೆ, ಯಡಿಯೂರಪ್ಪ ಮುಖ್ಯ ಮಂತ್ರಿ ಆಗುವುದು ರಾಜ್ಯದ ಬಿಜೆಪಿಯ ಬಹುತೇಕ ಮುಂಚೂಣಿ ನಾಯಕರಿಗೆ ಬೇಡ. ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಕೂಟಕ್ಕೆ ಮಾತ್ರ ಬಹುಮತ ಬೇಕು.

ವಿಧಾನ ಸಭೆ ಚುನಾವಣಾ ಕಣ ನೋಡಿ, ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡನ್ನೂ ಸಮಾನಾಂತರವಾಗಿ ಟೀಕಿಸುತ್ತ ಪ್ರಚಾರದ ಅಬ್ಬರ ನಡೆಸಿದೆ. ಜೆಡಿಎಸ್ ನ ಕುಮಾರಸ್ವಾಮಿ ಅವರದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ವೈಯಕ್ತಿಕ ದ್ವೇಷ ಎನ್ನುವ ಮಟ್ಟಿಗೆ ಪರಿಸ್ಥಿತಿ ಬೆಳೆದುನಿಂತಿದೆ. ಕುಮಾರಸ್ವಾಮಿ ಅವರದು ಬಿಜೆಪಿ ಬಗ್ಗೆ ಯಾವಾಗಲೂ ಮೃದು ಧೋರಣೆ. ಬಿಜೆಪಿ ಹಾಗೂ ಜೆಡಿಎಸ್ ತಾವು ಪರಸ್ಪರ ವಿರೋಧಿಗಳು ಎನ್ನುವುದನ್ನೇ ಮರೆತಂತೆ ಕಾಂಗ್ರೆಸ್ ಪಕ್ಷ ಹಾಗೂ ವಿಶೇಷವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಆರೋಪ ಹಾಗು ಟೀಕೆಯಲ್ಲೆ ತೊಡಗಿವೆ.

ಇತ್ತೀಚಿನ ತಿಂಗಳುಗಳಲ್ಲಿ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಅವರ ಪುತ್ರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇಲ್ಲವೆ ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ಆರೋಪ ಇಲ್ಲವೆ ಟೀಕೆ ಮಾಡಿದ್ದನ್ನು ಕೇಳಿದವರಿಲ್ಲ. ಅದೇ ರೀತಿ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್ ನಾಯಕರ ಬಗ್ಗೆ ಪ್ರಧಾನಿಯಾಗಲಿ, ಅಮಿತ್ ಷಾ ಇಲ್ಲವೆ ರಾಜ್ಯ ಬಿಜೆಪಿ ನಾಯಕರಾಗಲಿ ತುಟಿ ಬಿಚ್ಚಿದ ಉದಾಹರಣೆಗಳಿಲ್ಲ. ಹೀಗಾಗಿಯೇ, ಬಿಜೆಪಿ ಮತ್ತು ಜೆಡಿಎಸ್ ನಡುವೆ 'ಮ್ಯಾಚ್ ಫಿಕ್ಸಿಂಗ್' ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ "ಬಿಜೆಪಿ ಅಭ್ಯರ್ಥಿಗಳು ಪ್ರಬಲವಾಗಿರುವ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್ ಮತಗಳು, ಅದೇ ರೀತಿ ಜೆಡಿಎಸ್ ಪ್ರಬಲವಾಗಿರುವ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಮತಗಳು ಬೀಳಲಿವೆ" ಎಂದು ಹೇಳಿ 'ಮ್ಯಾಚ್ ಫಿಕ್ಸಿಂಗ್'ಗೆ ಪ್ರಬಲ ಸಾಕ್ಷ್ಯ ಒದಗಿಸಿದ್ದಾರೆ‌.

ಒಂದು ವೇಳೆ, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸದೇ ಹೋದರೆ ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿಸಿ ಮುಖ್ಯ ಮಂತ್ರಿ ಹುದ್ದೆಯಿಂದ ದೂರ ಇರಿಸಬಹುದು. ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭ ಬಂದರೆ ಕಾಂಗ್ರೆಸ್ ಆಯ್ಕೆ ಸಹಜವಾಗಿಯೇ ಜೆಡಿಎಸ್. ಆಗ, ದೇವೇಗೌಡ ಹಾಗು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಗೆ ಬೆಂಬಲ ನೀಡುವ ಪಟ್ಟು ಹಿಡಿಯುವರು ಎಂಬ ಲೆಕ್ಕಾಚಾರ ಮೂಲ ಕಾಂಗ್ರೆಸ್ಸಿಗರದು. ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಮುಖ್ಯ ಮಂತ್ರಿ ಹುದ್ದೆಯ ಕ್ಯೂ ನಲ್ಲಿದ್ದಾರೆ. ಕೆಲವರಿಗೆ 'ಡಾರ್ಕ್ ಹಾರ್ಸ್' ಆಗಿ ಹೊರ ಹೊಮ್ಮುವ ಕನಸಿದೆ. ಹೀಗಾಗಿಯೇ, ಕಾಂಗ್ರೆಸ್ ನಲ್ಲಿ ಕೆಲ ನಾಯಕರು ಎಂದೂ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ದನಿ ಎತ್ತುವುದಿಲ್ಲ.

ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದರೆ ಹೆಚ್.ಡಿ.ಕುಮಾರಸ್ವಾಮಿ ಅವರ ಆದ್ಯತೆ ಬಿಜೆಪಿಯೇ ಆಗಿರುತ್ತದೆ. ಅವರು ಬಿಜೆಪಿ ಕಡೆ ವಾಲುವ ಸಾಧ್ಯತೆಗಳಿವೆ. ಹೀಗಾಗಿಯೇ, ಬಿಜೆಪಿ ನಾಯಕರು 20-20 ಸರ್ಕಾರದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸ್ಥಾನವನ್ನು ಯಡಿಯೂರಪ್ಪ ನವರಿಗೆ ಬಿಟ್ಟುಕೊಡದೆ ಮಾತು ತಪ್ಪಿದ್ದನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸುತ್ತಿಲ್ಲ.

ಜೆಡಿಎಸ್ ನ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗು ಕುಮಾರಸ್ವಾಮಿ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾವು 'ಕಿಂಗ್' ಹೊರತು 'ಕಿಂಗ್ ಮೇಕರ್' ಅಲ್ಲ .ಒಂದು ವೇಳೆ ಜೆಡಿಎಸ್ ಗೆ ಬಹುಮತ ದೊರೆಯದೆ ಹೋದರೆ ಯಾವುದೇ ಪಕ್ಷದ ಜೊತೆ ಕೈಜೋಡಿಸಿದೆ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧವೆಂದು ಹೇಳುತ್ತಿದ್ದಾರೆ. ಚುನಾವಣಾ ಪೂರ್ವದ ಈ ಮಾತುಗಳನ್ನು ಜೆಡಿಎಸ್ ನ ಹಿಂದಿನ ಇತಿಹಾಸ ನೋಡಿದವರಿಗೆ ಅವರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ ಎನ್ನುವುದನ್ನು  ನಂಬುವುದು ಕಷ್ಟ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಂದಿರುವ ಸಂಬಂಧ ನೋಡಿದರೆ ಕುಮಾರಸ್ವಾಮಿ ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗುವ ಸಾಧ್ಯತೆಗಳೇ ಹೆಚ್ಚು.

ಅತಂತ್ರ ವಿಧಾನಸಭೆಗಾಗಿ ಮೂಲ ಕಾಂಗ್ರೆಸ್ಸಿಗರು ಹಾಗೂ ಯಡಿಯೂರಪ್ಪ ನವರ ಹಿತಶತ್ರುಗಳ ಕನವರಿಕೆ ನಡುವೆ ಸ್ಪಷ್ಟ ಸರಳ ಬಹುಮತಕ್ಕಾಗಿ ಸಿದ್ದರಾಮಯ್ಯ ಹಾಗು ಯಡಿಯೂರಪ್ಪ ನಡೆಸಿರುವ ಕಸರತ್ತು ಕುತೂಹಲಕರವಾಗಿರುವಂತೆ ಆಸಕ್ತಿದಾಯಕವೂ ಆಗಿದೆ. ಮೇಲ್ನೋಟಕ್ಕೆ ಜಿದ್ದಾ-ಜಿದ್ದಾಜಿದ್ದಿ ರಾಜಕಾರಣ. ಅಂತರಂಗದಲ್ಲಿ ಅತಂತ್ರ ವಿಧಾನಸಭೆಯ ಬಯಕೆ .ಇದೇ ಈ ಬಾರಿಯ ವಿಧಾನಸಭೆ ಚುನಾವಣೆಯ ಚದುರಂಗದಾಟ.

 


ಸಂಬಂಧಿತ ಟ್ಯಾಗ್ಗಳು

Assembly election ಚದುರಂಗ ವಿಧಾನಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ