ಬಿಜೆಪಿಗೆ ಬಿಸಿ ತುಪ್ಪವಾದ ಜನಾರ್ಧನ ರೆಡ್ಡಿ!

BJP and G. Janardhana Reddy!

28-04-2018

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿಕೆ ನೀಡಿ (ಮಾರ್ಚ್ 31)ತಿಂಗಳು ಆಗುತ್ತಾ ಬಂದರೂ ಜನಾರ್ಧನ ರೆಡ್ಡಿ ಸದ್ದು ಮಾಡುತ್ತಲೇ ಇದ್ದಾರೆ. ತಮ್ಮ ಆಪ್ತ ಶ್ರೀರಾಮುಲು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತಿದಂತೆ ರಾಜಕೀಯದಲ್ಲಿ ಸಕ್ರಿಯರಾದರು. ಮೊಳಕಾಲ್ಮೂರಿನಲ್ಲಿ ಮನೆ ಮಾಡಿದರು. ಬಳ್ಳಾರಿ ನಗರದಲ್ಲಿ ಸ್ಪರ್ಧಿಸಿರುವ ತಮ್ಮ ಸಹೋದರ ಜಿ.ಸೋಮಶೇಖರ ರೆಡ್ಡಿ ಹಾಗೂ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ತಮ್ಮ ಆಪ್ತರ ಪರ ಪ್ರಚಾರ ಆರಂಭಿಸಿದರು. ಈ ಬೆಳವಣಿಗೆಗಳು ಜನಾರ್ಧನ ರೆಡ್ಡಿ ಅವರನ್ನು ಮತ್ತೆ ರಾಜ್ಯ ರಾಜಕಾರಣದಲ್ಲಿ ಮುನ್ನೆಲೆಗೆ ತಂದಿತು.

ಆರಂಭದಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದ ಜನಾರ್ಧನ ರೆಡ್ಡಿ, ಅದು ಸಿಗುವುದು ಅನುಮಾನವಾದಾಗ, ಐದಾರು ಜಿಲ್ಲೆಗಳ ಉಸ್ತುವಾರಿ ವಹಿಸುವಂತೆ ಬೇಡಿಕೆ ಇಟ್ಟರು. ಅದನ್ನು ತಿರಸ್ಕರಿಸಿದ್ದ ಅಮಿತ್ ಷಾ, ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂಬ ಬಾಂಬ್ ಸಿಡಿಸಿದ್ದರು.

ಆಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಜನಾರ್ಧನ ರೆಡ್ಡಿ ಪರವಾಗಿ ಹೇಳಿಕೆ ನೀಡಿದಲ್ಲಿ ಅಥವಾ ಮುಂಚುಣಿಯಲ್ಲಿ ಅವರ ಪಾತ್ರವನ್ನು ಸಮರ್ಥಸಿಕೊಂಡಲ್ಲಿ ಅದರಿಂದ ಪಕ್ಷಕ್ಕೆ ಧಕ್ಕೆ ಉಂಟಾಗಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ಜನಾರ್ಧನ ರೆಡ್ಡಿ ಅವರನ್ನು ಗುರಿಯಾಗಿರಿಸಿಕೊಂಡು ಆರೋಪ ಮಾಡುವ ಮೂಲಕ ಕಳಂಕವನ್ನು ಪಕ್ಷಕ್ಕೆ ಅಂಟಿಸುವ ಪ್ರಯತ್ನ ಮಾಡಬಹುದು. ಈ ಕಾರಣಕ್ಕಾಗಿ ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಕಾರಣಕ್ಕಾಗಿ ಅಮಿತ್ ಷಾ, ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ತೀಕ್ಷ್ಣ ಹೇಳಿಕೆ ನೀಡಿದರು.

ಆದರೆ, ಅಮಿತ್ ಷಾ ಅವರ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, "ತಾವು ಅಧಿಕಾರದಲ್ಲಿ ಇದ್ದಾಗ ಜನಾರ್ಧನ ರೆಡ್ಡಿ ತೊಂದರೆ ಕೊಟ್ಟಿರಬಹುದು. ಅದನ್ನು ಚುನಾವಣಾ ಗೆಲುವಿನ ದೃಷ್ಟಿಯಿಂದ ಮರೆಯಬೇಕಿದೆ. ಜನಾರ್ಧನ ರೆಡ್ಡಿ ಅವರ ಬೆಂಬಲದಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಗೆಲುವಿಗಾಗಿ ವಿರೋಧಿಗಳ ನೆರವು ನೀಡಿದರೂ ಅದನ್ನು ಪಡೆಯಿರಿ ಎಂದು ಅಮಿತ್ ಷಾ ಹೇಳಿದ್ದಾರೆ" ಎಂದು ಜನಾರ್ಧನ ರೆಡ್ಡಿ ಸಮರ್ಥನೆಗೆ ಇಳಿದರು.

ಈ ಮಧ್ಯೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ಜನಾರ್ಧನ ರೆಡ್ಡಿ ಅವರನ್ನ ಮುಂದಿರಿಸಿಕೊಂಡು 2013ರಲ್ಲಿ ಯ್ಯಾರಾರು ಲೂಟಿಕೋರರು ಒಂದಾಗಿದ್ದರೋ ಅವರೆಲ್ಲಾ ಮತ್ತೆ ಒಂದಾಗಿದ್ದಾರೆ ಎಂದು ವಾಗ್ದಾಳಿ ಆರಂಭಿಸಿದ್ದರು.

ಪರಿಸ್ಥಿತಿ ಕೈ ಮೀರುತ್ತಿರುವುದು ಕಂಡು ಬರುತ್ತಿದಂತೆ ಅಮಿತ್ ಷಾ ಹೇಳಿಕೆಯನ್ನೇ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ನಿನ್ನೆ ಪುನರಚ್ಚರಿಸಿದ್ದರು."ಅದರ ನಂತರ ಸಭೆ ನಡೆಸಿರುವ ಅಮಿತ್ ಷಾ, ಜೈಲಿಗೆ ಹೋಗಿ ಬಂದವರ ಜೊತೆ ವೇದಿಕೆ ಹಂಚಿಕೊಳ್ಳುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬಳ್ಳಾರಿ ಜಿಲ್ಲೆಯ ಉದ್ದೇಶಿತ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನೇ ರದ್ದು ಪಡಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಬಹಿರಂಗವಾಗಿ ಪ್ರಚಾರಕ್ಕೆ ಇಳಿಯದಂತೆ ಜನಾರ್ಧನ ರೆಡ್ಡಿಗೆ ಸೂಚನೆ ನೀಡಿದ್ದಾರೆ. ಬಹಿರಂಗವಾಗಿ ಕಾಣಿಸಿಕೊಂಡು ಪ್ರಚಾರ ನಡೆಸದಂತೆ, ಮಾಧ್ಯಮಗಳಿಗೆ ಹೇಳಿಕೆ ಅಥವಾ ಸಂದರ್ಶನ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.

ಜನಾರ್ಧನ ರೆಡ್ಡಿ ವಿರುದ್ದ, ಪಕ್ಷದ ಅಧ್ಯಕ್ಷ ಅಮಿತ್ ಷಾ ಹಾಗೂ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಬಹು ಕಟು ಎಚ್ವರಿಕೆ ನೀಡುತ್ತಿದ್ದರೂ, ಪಕ್ಷದ ಆತಂರಿಕ ಬೆಳವಣಿಗೆಗಳು ಅದಕ್ಕೆ ತದ್ವಿರುದ್ಧವಾಗಿರುವಂತಿವೆ. ಒಟ್ಟಿನಲ್ಲಿ ಒಂದು ಕಾಲದ ಬಿಜೆಪಿ ಆಧಾರ ಆಧಾರ ಸ್ತಂಭದಂತಿದ್ದ  ಜನಾರ್ಧನ ರೆಡ್ಡಿ ಈಗ ಅದೇ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ