'ಸಿಬಿಐ ಅಂದರೆ ಸೆಂಟ್ರಲ್ ಬ್ಯೂರೋ ಆಫ್ ಮೈನಿಂಗ್'27-04-2018

ಬೆಂಗಳೂರು: ನಮ್ಮ ಪ್ರಣಾಳಿಕೆಯಲ್ಲಿ ನಮ್ಮ ಮನಸ್ಸಿನ‌ ಮಾತಿಲ್ಲ. ಕರ್ನಾಟಕದ ಜನರ, ಬಡವರ, ಮಹಿಳೆಯ ಮನಸ್ಸಿನ ಮಾತಿದೆ. ಪ್ರಣಾಳಿಕೆಯನ್ನು ಬಂದ್ ಕೋಣೆಯಲ್ಲಿ ತಯಾರಿಸಲಾಗಿಲ್ಲ. ಮೊಯ್ಲಿ ಹಾಗೂ ಇತರರು ಸೇರಿ ಕಷ್ಟಪಟ್ಟು ತಯಾರಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್  ಗಾಂಧಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ರಾಹುಲ್ ಗಾಂಧಿ ಮಾತನಾಡಿದರು. ಕಳೆದ ಬಾರಿ ನಾವು ನೀಡಿದ ಶೇ.90ರಷ್ಟು ಆಶ್ವಾಸನೆಗಳನ್ನು ಪೂರೈಸಿದ್ದೇವೆ. ಯಾವ ವ್ಯಕ್ತಿಯ ಬಾಯಿಂದ ಸುಳ್ಳು ಬರುತ್ತದೆಯೋ ಆ ವ್ಯಕ್ತಿ ಪ್ರಯೋಜನವಿಲ್ಲ. ನಾವು ಹೇಳಿದ್ದನ್ನು ಮಾಡೇ ಮಾಡ್ತೇವೆ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕರ್ನಾಟಕದ ಪ್ರತೀ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಲಿದೆ. ರಾಜ್ಯದ ಪ್ರತಿ ಮೂಲೆಯಲ್ಲಿ ಇಂದಿರಾ ಕ್ಯಾಂಟೀನ್ ಹೊಂದಿರಲಿದೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.

ಪ್ರಧಾನಿ ಮೋದಿ ಬಾಯಿಯೋ ಬಹನೋ ಎಂದು ಹೇಳಿ 15 ಲಕ್ಷ ರೂ. ಹಾಕುತ್ತೇನೆ ಎನ್ನುತ್ತಾರೆ. ಬಸವಣ್ಣನಿಗೆ ಹೂ ಹಾರ ಹಾಕುತ್ತಾರೆ, ಪಕ್ಕದಲ್ಲಿ ರೆಡ್ಡಿ ಬ್ರದರ್ಸ್ ಗೆ ಟಿಕೆಟ್ ನೀಡುತ್ತಾರೆ. ಮೋದಿ ಹೇಳುತ್ತಾರೆ ನಾನು ಭ್ರಷ್ಟಾಚಾರದ ವಿರುದ್ಧವಾಗಿದ್ದೇನೆ ಎಂದು, ಆದರೆ, ಪಕ್ಕದಲ್ಲೇ ನಿಂತಿರುವ ಯಡಿಯೂರಪ್ಪ ಜೈಲಿನಲ್ಲಿ ದಿನಕಳೆದು ಬಂದಿದ್ದಾರೆ ಎಂದು ಟೀಕಿಸಿದರು.

ರೆಡ್ಡಿ ಬ್ರದರ್ಸ್ ಅನ್ನು ಬಿಟ್ಟಿರುವ ಸಿಬಿಐ ಈಗ ಸೆಂಟ್ರಲ್ ಬ್ಯೂರೋ ಆಫ್ ಮೈನಿಂಗ್ ಆಗಿದೆ. ಸಾವಿರಾರು ಕೋಟಿ ಹಣವನ್ನು ರೆಡ್ಡಿ ಬ್ರದರ್ಸ್ ಕೊಳ್ಳೆ ಹೊಡೆದಿದ್ದಾರೆ. ರೆಡ್ಡಿ ಬ್ರದರ್ಸ್ ಕೊಳ್ಳೆ ಹೊಡೆದಿರುವ ಹಣ ಕರ್ನಾಟಕದ ಬಡವರ ಹಣ. ಬಡವರ ಸಾಲ ಮನ್ನಾ ಮಾಡುವುದು ಮೋದಿ ಹಾಗೂ ಅಮಿತ್ ಷಾ ಉದ್ದೇಶವಲ್ಲ. ಅವರು 15 ಶ್ರೀಮಂತರ ಸಾಲ‌ ಮಾತ್ರ ಮನ್ನಾ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಪೆಟ್ರೋಲ್, ಡಿಸೆಲ್ ಬೆಲೆ ಬ್ಯಾರೆಲ್ ಗೆ ಕಡಿಮೆಯಾಗಿದ್ದರೂ ದೇಶದಲ್ಲಿ ಬೆಲೆ ಕಡಿಮೆಯಾಗಿಲ್ಲ. ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬ ಘೋಷಣೆ ಮಾಡುತ್ತಿದ್ದರು. ಬೇಟಿ ಬಚಾವೋ, ಆದರೆ, ಬಿಜೆಪಿಯ ನಾಯಕರಿಂದ ಭೇಟಿ ಬಚಾವೊ ಎಂಬ ಹೊಸ ಘೋಷಣೆ ಪ್ರಾರಂಭವಾಗಿದೆ. ಆದರೂ ದೇಶದ ಕಾವಲುಗಾರ ಮೋದಿ ಸೈಲೆಂಟಾಗಿದ್ದಾರೆ ಎಂದು ರಾಹುಲ್ ಹರಿಹಾಯ್ದರು.

ಡೋಕ್ಲಾಂ ನಲ್ಲಿ ಚೀನಾದ ಸೈನಿಕರು ಕುಳಿತಿದ್ದಾರೆ. ಆದರೆ 56 ಇಂಚಿನ‌ ಎದೆ ಎಲ್ಲಿಗೆ ಹೋಗಿದೆಯೆಂದು ತಿಳಿದಿಲ್ಲ. ಡೋಕ್ಲಾಂ ವಿಷಯವನ್ನು ಮೋದಿ ಯಾವುದೇ ಕಾರಣಕ್ಕೂ ಪ್ರಸ್ತಾಪಿಸುವುದಿಲ್ಲ ನೋಡಿ. ಜನರ ಹಣ ಪಡೆದು ನೀರವ್ ಮೋದಿ ಓಡಿದ್ದಾನೆ, ವಿಜಯ ಮಲ್ಯ ಓಡಿದ್ದಾನೆ. ಆದರೆ, ಮೋದಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಪ್ರತಿ ಜಾತಿ, ಸಮುದಾಯದ ನಡುವೆ ಗಲಾಟೆಯೆಬ್ಬಿಸುತ್ತಿದೆ.

ನಾವು ನುಡಿದಂತೆ ನಡೆಯುತ್ತೇವೆ, ನಾವು ಹೇಳಿದಂತೆ ಮಾಡುತ್ತೇವೆ ಎಂದೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

Rahul gandhi mining ಸಮುದಾಯ 56 ಇಂಚಿನ‌ ಎದೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ