ಅಕ್ರಮ ಸಂಬಂಧ ಮತ್ತು ಕೊಲೆ

Illegal relationship and murder!

27-04-2018

ಬೆಂಗಳೂರು: ಬೇರೊಬ್ಬರ ಜೊತೆ ಮದುವೆಯಾಗಲು ಅಡ್ಡಿಯಾದ ಹಿನ್ನಲೆಯಲ್ಲಿ ಪ್ರಿಯತಮೆ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಆಕೆಯ 9 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಪ್ರಿಯಕರನನ್ನು ತಿರುಮಲಶೆಟ್ಟಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೋಟೆಯ ಅತ್ತಿವಟ್ಟದ ರಾಮಮೂರ್ತಿ(27)ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಏ.20 ರಂದು ಹೊಸಕೋಟೆಯ ವಾಗಟದ ಪ್ರಿಯತಮೆ ಜ್ಯೋತಿ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಆಕೆಯ ಪುತ್ರ  ಗೌತಮ್(9) ನನ್ನು ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ತಿರುಮಲಶೆಟ್ಟಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಗ್ರಾಮಾಂತರ ಎಸ್‍ಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಅಕ್ರಮ ಸಂಬಂಧ: ಕಳೆದ ಕೆಲ ವರ್ಷಗಳ ಹಿಂದೆ ರಾಯಚೂರು ಮೂಲದ ಜ್ಯೋತಿ ಕಿರಣ್ ಎಂಬಾತನನ್ನು ಮುದುವೆಯಾಗಿದ್ದು ದಂಪತಿಗೆ ಗೌತಮ್ ಎನ್ನುವ ಮಗನಿದ್ದ. ಕೆಲಸ ಅರಸಿಕೊಂಡು ಹೊಸಕೋಟೆಗೆ ಬಂದು ಕೆಲ ದಿನ ಸಂಸಾರ ಮಾಡಿದ್ದ ಪತಿ ಜ್ಯೋತಿಯನ್ನು ಬಿಟ್ಟು ಹೋಗಿದ್ದ. ಬಳಿಕ ಜ್ಯೋತಿ ಆರೋಪಿ ರಾಮಮೂರ್ತಿ ಜೊತೆ ಪರಿಚಯವಾಗಿ ಆತನ ಜೊತೆ ಆಕ್ರಮ ಸಂಬಂಧ ಹೊಂದಿದ್ದಳು.

ಈ ನಡುವೆ ರಾಮಮೂರ್ತಿಗೆ ಆತನ ಪೋಷಕರು ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ರಾಮಮೂರ್ತಿ ವಿವಾಹವಾಗಲು ಜ್ಯೋತಿ ಒಪ್ಪಿರಲಿಲ್ಲ. ತಾನು ಮದುವೆಯಾಗಲು ಪ್ರಿಯತಮೆ ಹಾಗೂ ಆಕೆಯ ಮಗ ಅಡ್ಡ ಬಂದ ಕಾರಣ ಇಬ್ಬರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊಲೆ ಮಾಡಲು ಮುಂದಾಗಿದ್ದ ಆತ ತನ್ನ ಸ್ನೇಹಿತರ ಜೊತೆ ಚರ್ಚೆ ನಡೆಸಿ ಕೃತ್ಯಕ್ಕೆ ಸಂಚು ರೂಪಿಸಿದ್ದ.

ಅದರಂತೆ  ಕಳೆದ ಏ.20ರಂದು ಸ್ನೇಹಿತರ ಸಹಾಯದಿಂದ ಗ್ರಾಮದ ಹೊರ ವಲಯಕ್ಕೆ ಇಬ್ಬರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಲು ಯತ್ನಿಸಿದ್ದ. ಈ ವೇಳೆ ಗೌತಮ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಮೃತ ದೇಹವನ್ನು ವಾಗಟ ಗ್ರಾಮದ ಬಳಿ ಪೊದೆಯಲ್ಲಿ ಎಸೆದು ಬಂದಿದ್ದ. ಬಳಿಕ ಪ್ರಿಯತಮೆಯನ್ನು ಕೊಲೆ ಮಾಡಲು ಯತ್ನಿಸಿ ಆಕೆಯ ತಲೆಗೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಇದರಿಂದ ಸ್ಥಳದಲ್ಲೇ ಜ್ಯೋತಿ ಕುಸಿದು ಬಿದಿದ್ದಳು. ಇದನ್ನು ಕಂಡ ಆರೋಪಿ ರಾಮಮೂರ್ತಿ, ಜ್ಯೋತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಸ್ಥಳದಿಂದ ಪರಾರಿಯಾಗಿದ್ದ.

ಮಾರಣಾಂತಿಕವಾಗಿ ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಪ್ರಜ್ಞೆ ಬಂದ ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಗೌತಮ್ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ ಬಳಿಕ ಆತನ ದೇಹ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ ಘಟನೆಯ ಸತ್ಯಾಂಶ ಹೊರ ಬಂದಿದ್ದು ಆರೋಪಿ ರಾಮಮೂರ್ತಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

relationship murder ಹುಡುಕಾಟ ಮದುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ