'ಆರೋಗ್ಯ ಇಲಾಖೆಯೋ, ಸಾವಿನ ಕುಣಿಕೆಯೋ'

state Bjp released Health department failure report

27-04-2018

ಬೆಂಗಳೂರು: ಸಾರ್ವಜನಿಕ ಆಸ್ಪತ್ರೆಗಳ ದುಸ್ಥಿತಿ, ಆರೋಗ್ಯಇಲಾಖೆಯ ವೈಫಲ್ಯಗಳನ್ನು ಬಿಂಬಿಸುವ ವರದಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಹೊರತಂದಿರುವ 'ಆರೋಗ್ಯಇಲಾಖೆಯೋ, ಸಾವಿನ ಕುಣಿಕೆಯೋ' ಸಮೀಕ್ಷಾ ವರದಿಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರಳೀಧರ್ ರಾವ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಬಿಡುಗಡೆ ಮಾಡಿದರು.

ಪಿ.ಮುರಳೀಧರ್ ರಾವ್ ಮಾತನಾಡಿ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಕೊಳಚೆ ಪ್ರದೇಶಗಳು, ಭ್ರಷ್ಟಾಚಾರ, ಚುನಾವಣೆಗೆ ಮುಂಚೆ ನೀಡಿದ್ದ ಭರವಸೆಗಳು ಜಾರಿಗೆತರುವಲ್ಲಿ ಕಾಂಗ್ರೆಸ್‍ನ ವೈಫಲ್ಯ ಸೇರಿದಂತೆಆರು ವಿಷಯಗಳ ಬಗ್ಗೆ ಬಿಜೆಪಿ ಚಾರ್ಜ್‍ಶೀಟ್‍ಗಳನ್ನು ಬಿಡುಗಡೆ ಮಾಡಿದೆ. ಚುನಾವಣೆಗೆ ಮುನ್ನ ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಔಪಚಾರಿಕ ಚರ್ಚೆ ಯಾಗಬೇಕೆಂಬುದು ಬಿಜೆಪಿ ಉದ್ದೇಶವಾಗಿದೆ ಎಂದರು.

ಇದೀಗ ಆರೋಗ್ಯ ವಲಯದಲ್ಲಿನ ವೈಫಲ್ಯಗಳ ಬಗ್ಗೆ ವರದಿ ಬಿಡುಗಡೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ 21,370 ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ನಾಲ್ಕುವರೆ ವರ್ಷಗಳಲ್ಲಿ 44,630 ನವಜಾತ ಶಿಶುಗಳು ಮರಣಹೊಂದಿವೆ. ಕಣ್ಣು ಬದಲಿ ಜೋಡಣೆ ಪ್ರಮಾಣ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಶೇಕಡ 62ರಷ್ಟಿತ್ತು. ಆದರೆ, ಈ ಪ್ರಮಾಣ 30.12ಕ್ಕೆ ಇಳಿದಿದೆ. ಅಪೌಷ್ಠಿಕತೆಯಿಂದ ಸಾವನ್ನಪ್ಪುತ್ತಿರುವ ಮತ್ತು ನರಳುತ್ತಿರುವ ಮಕ್ಕಳ ಸಾವು ಪ್ರಮಾಣ ಹೆಚ್ಚಾಗಿದೆ. ಎಲ್ಲ ವಲಯಗಳಂತೆ ಆರೋಗ್ಯವಲಯದಲ್ಲಿ ರಾಜ್ಯ ಸರ್ಕಾರ ವೈಫಲ್ಯ ಕಂಡಿದ್ದು, ಜನರು ರೋಗಗಳಿಂದ ನರಳುವಂತೆ ಮಾಡಿದೆ ಎಂದು ದೂರಿದರು.

ರಾಜ್ಯದಲ್ಲಿನ ಇಂದಿನ ಮತ್ತು ಹಿಂದಿನ ಸ್ಥಿತಿಯ ಬಗ್ಗೆ ಚರ್ಚೆ ಮಾಡುವುದು ಬಿಟ್ಟು, ಯಾವುದೇ ವಿಷಯ ಪ್ರಸ್ತಾಪ ಮಾಡಿದರೂ ಬೇರೆ ರಾಜ್ಯಗಳ ಜೊತೆ ಹೋಲಿಕೆ ಮಾಡಿ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದರೆ ಉತ್ತರ ಪ್ರದೇಶದಲ್ಲಿನ ಸ್ಥಿತಿಯ ಬಗ್ಗೆ ಹೋಲಿಕೆ ಮಾಡುತ್ತಾರೆ. ವಿಷಯಾಂತರದಿಂದ ಕಾಂಗ್ರೆಸ್‍ಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಸಿದ್ದರಾಮಯ್ಯ ಅವರು ದಿಕ್ಕು ತಪ್ಪಿಸುವ ವಿಷಯಗಳನ್ನೇ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆಗಳನ್ನು ಬಿಜೆಪಿ ಖಂಡಿಸುತ್ತದೆ. ಯಾವುದೇ ವಿಷಯವನ್ನು ಬಿಜೆಪಿ ಒಗ್ಗಟ್ಟಾಗಿ ಎದುರಿಸುತ್ತದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ