‘ಮೋದಿಗೆ ಭ್ರಷ್ಟಾಚಾರದ ವಿರುದ್ಧ ಮಾತಾಡುವ ಅರ್ಹತೆ ಇಲ್ಲ’26-04-2018

ಉತ್ತರ ಕನ್ನಡ: ಬಡವರು, ರೈತರು ದುಡಿದ ಹಣವನ್ನು ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಲು ಬಳಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತಾಡುವ ಅರ್ಹತೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ‌ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಅವರು, ಮೋದಿ ಪದೇ ಪದೆ ಭ್ರಷ್ಟಾಚಾರದ ವಿರುದ್ಧ ಅಬ್ಬರದಿಂದ ಮಾತಾಡುತ್ತಾರೆ. ಆದರೆ ಕೇವಲ 10-15 ಉದ್ಯಮಿಗಳಿಗೆ 2.5ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಅವರು ದೇಶದ ರೈತರ ಸಾಲ ಮನ್ನಾ ಮಾಡಲು ನಿರಾಕರಿಸುತ್ತಾರೆ ಎಂದು ಟೀಕಿಸಿದರು.

ತಮ್ಮ ಭವಿಷ್ಯಕ್ಕಾಗಿ ದಿನಕ್ಕೆ 8-10 ಗಂಟೆ ಬಡವರು ದುಡಿಯುತ್ತಾರೆ. ಜನರ ತೆರಿಗೆ ಹಣ ಜನರಿಗೆ ಸಿಗಬೇಕು. ಆದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ರಾಹುಲ್ ಗಾಂಧಿ ಹೇಳಿದರು. ಬಿಜೆಪಿ, ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರೈತರು, ಬಡವರು ಸಂಪಾದಿಸಿದ ಹಣವನ್ನು ಕೇಂದ್ತ ಮೋದಿ ಸರ್ಕಾರ 10-15 ಉದ್ಯಮಿಗಳ ಲಾಭಕ್ಕೆ ನೀಡುತ್ತಿದೆ. ಕಾಂಗ್ರೆಸ್ ಜನರ ಉಪಯೋಗಕ್ಕೇ ಬಳಸುತ್ತಿದೆ. ಇದು ನಮ್ಮ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ. ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸ‌ರ್ಕಾರ ರೈತರ ಸಾಲ ಮನ್ನಾ ಮಾಡುವುದು ನಮ್ಮ ನೀತಿಯಲ್ಲ ಎನ್ನುತ್ತದೆ ಎಂದು ಟೀಕಿಸಿದರು.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ, ಅವರ ಮಂತ್ರಿ ಮಂಡಲದ. ನಾಲ್ಕೈದು ಸದಸ್ಯರು ಜೈಲಿಗೆ ಹೋದರು. ಅಂತಹವರು ಇಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ನೀವು ನೋಡಿದಿರಿ. 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಯಡಿಯೂರಪ್ಪ ಜೈಲಿಗೆ ಕೂಡ ಹೋಗಿ ಬಂದರು. ಅದೇ ಕಳಂಕಿತ ವ್ಯಕ್ತಿಯನ್ನು ಮತ್ತೆ ಮುಖ್ಯಮಂತ್ರಿ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಲೂಟಿಕೋರರಿಗೆ ಅಧಿಕಾರ ಕೊಡಬೇಡಿ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ದಲಿತ, ಅಲ್ಪಸಂಖ್ಯಾತ, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ಸಮಾನ ನ್ಯಾಯ ಒದಗಿಸಿದ್ದೇವೆ ಎಂದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಕೇಂದ್ರದಲ್ಲಿರುವ ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯಲು ರಾಹುಲ್ ಗಾಂಧಿ ಅವರ ಕೈ ಬಲಪಡಿಸಿ ಎಂದರು.


ಸಂಬಂಧಿತ ಟ್ಯಾಗ್ಗಳು

Rahul gandhi siddaramaiah ಸಮಾನ ನ್ಯಾಯ ದಿಕ್ಸೂಚಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ