ಅಕ್ರಮ ಗುರುತಿನ ಚೀಟಿಗಳು: ಐವರ ಬಂಧನ

Illegal Identity Card: Five arrested

26-04-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿಗಳನ್ನು ಸಿದ್ಧಪಡಿಸುತ್ತಿದ್ದ ಜಾಲವನ್ನು ಬೇಧಿಸಿರುವ ಪೀಣ್ಯ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಲದಲ್ಲಿದ್ದ ಬಾಗಲಗುಂಟೆಯ ನವೀನ್ ಕುಮಾರ್ (30), ಚೆನ್ನನಾಯಕನ ಹಳ್ಳಿಯ ಸಚಿನ್ (26), ನಾಗಸಂದ್ರದ ದೇವರಾಜ್ (25), ಸಿಡೇದಹಳ್ಳಿಯ ಸಂಜಯ್ ಕುಮಾರ್ ಶೀಲವಂತ (29), ಮಲ್ಲಸಂದ್ರದ ಕರಿಸಿದ್ದೇಶ್ವರ (34)ಸೇರಿ ಐವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.

ಬಂಧಿತರಿಂದ ಅಕ್ರಮ ಗುರುತಿನ ಚೀಟಿಗಳನ್ನು ಸಿದ್ಧಪಡಿಸುತ್ತಿದ್ದ ಕಂಪ್ಯೂಟರ್ ಗಳು, ಪೆನ್‍ಡ್ರೈವ್, ಚುನಾವಣಾ ಗುರುತಿನ ಚೀಟಿ ಪಡೆಯಲು ಸಲ್ಲಿಸುವ ಅರ್ಜಿಗಳು, ಅನಧಿಕೃತ ಮತದಾರರ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದಾಸರಹಳ್ಳಿ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ಸಹಾಯಕ ಕಂದಾಯಾಧಿಕಾರಿಗಳು ಬಳಸುವ ಇಆರ್‍ಎಂಎಸ್ ವೆಬ್‍ಸೈಟ್‍ನ ಯೂಸರ್ ಐಡಿ, ಪಾಸ್‍ವರ್ಡ್ ಹಾಗೂ ಡಿಜಿಟಲ್ ಕೀಗಳನ್ನು ಅನಧಿಕೃತವಾಗಿ ಪಡೆದುಕೊಂಡು ಇಲ್ಲಿಯವರೆಗೆ 1 ಸಾವಿರ ನಕಲಿ ಗುರುತಿನ ಚೀಟಿಗಳನ್ನು ನೀಡಿ ವಂಚನೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ದಾಸರಹಳ್ಳಿ ಹಾಗೂ ಏರೋಹಳ್ಳಿ ಉಪವಲಯ ಸಹಾಯಕರ ಚುನಾವಣಾಧಿಕಾರಿಗಳಾದ ನಾಗರತ್ನ ಹಾಗೂ ಅನಂತರಾಮಯ್ಯ ಅವರು ದಾಸರಹಳ್ಳಿ ಹಾಗೂ ಯಶವಂತಪುರ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಅನಧಿಕೃತವಾಗಿ ಅಂತರ್ಜಾಲದ ಮೂಲಕ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ ಎಂದು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಪೀಣ್ಯ ಪೊಲೀಸರ ವಿಶೇಷ ತಂಡ ಜಾಲವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

fake voters computer ಅಕ್ರಮ ವೆಬ್‍ಸೈಟ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ