ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಸಲಹೆ

Kannada News

19-05-2017

ಬೆಂಗಳೂರು,ಮೇ,19 ಕನ್ನಡದಲ್ಲಿ ನ್ಯಾಯದಾನ ಮಾಡುವ ನ್ಯಾಯಮೂರ್ತಿಗಳು, ಕನ್ನಡದಲ್ಲಿ ವಾದ ಮಂಡಿಸುವ ಅಭಿಯೋಜಕರನ್ನು ಸನ್ಮಾನಿಸುವ ಮಾದರಿಯಲ್ಲೇ ಕನ್ನಡದಲ್ಲಿಯೇ ವಾದ ಮಂಡಿಸುವ  ವಕೀಲರನ್ನೂ ಕೂಡಾ ಗುರುತಿಸಿ ಗೌರವಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಇಲ್ಲಿ ಇಂದು ಸಲಹೆ ಮಾಡಿದರು.

ವಿಧಾನಸೌಧದ ಔತಣ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಯೋಜಿಸಿದ್ದ  2015-16 ಮತ್ತು 2016-17 ನೇ ಸಾಲಿನಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 69 ನ್ಯಾಯಾಧೀಶರು  ಹಾಗೂ 19 ಸರ್ಕಾರಿ ಅಭಿಯೋಜಕರಿಗೆ ಗೌರವ ಸಮರ್ಪಿಸಿ ಅವರು ಮಾತನಾಡುತ್ತಿದ್ದರು.

ನ್ಯಾಯ ಬಯಸಿ ಬರುವ ಕಕ್ಷಿದಾರರಿಗೆ ಸರಳವಾಗಿ ಅರ್ಥವಾಗುವಂತೆ ಈ ನೆಲದ ಭಾಷೆ ಕನ್ನಡದಲ್ಲಿಯೇ ವಾದ ವಿವಾದಗಳು ನಡೆದು ತೀರ್ಪು ಪ್ರಕಟವಾದರೆ ಕಕ್ಷಿಗಾರರಿಗೆ ಸಮಾಧಾನವಾಗುತ್ತದೆ.  ನ್ಯಾಯ ಕೋರಿ ನ್ಯಾಯಾಲಯದ ಮೆಟ್ಟಲೇರುವ ಶೇಕಡಾ ತೊಂಭತ್ತರಷ್ಟು ಕನ್ನಡಿಗರೇ ಆಗಿರುತ್ತಾರೆ ಎಂಬುದನ್ನು ನಾವು ಮರೆಯಬಾರದು. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ತೀರ್ಪು ನೀಡುವ,    ನೆಲದ ಭಾಷೆಯಲ್ಲಿ ವಾದ ಮಂಡಿಸುವ ಸರ್ಕಾರಿ ಅಭಿಯೋಜನಕರಷ್ಟೇ ಅಲ್ಲ,   ಕನ್ನಡದಲ್ಲಿ ವಾದ ಮಂಡಿಸುವ ವಕೀಲರೂ ಮುಖ್ಯವಾಗುತ್ತಾರೆ.  ಕನ್ನಡವನ್ನು ನ್ಯಾಯಾಂಗದಲ್ಲಿ ಅನುಷ್ಠಾನಗೊಳಿಸುವ ಎಲ್ಲರನ್ನೂ ಪ್ರೋತ್ಸಾಹಿಸಬೇಕು, ಉತ್ತೇಜಿಸಬೇಕು ಹಾಗೂ  ಗೌರವಿಸಬೇಕು.   ಈ ಕ್ರಮದಿಂದ ಮುಂದಿನ ದಿನಗಳಲ್ಲಿ ನ್ಯಾಯ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು  ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ನ್ಯಾಯಾಂಗದಲ್ಲಿ ನೆಲದ ಭಾಷೆ ಕನ್ನಡದ ಅನುಷ್ಠಾನದಲ್ಲಿ ಕೆಲವು ಸಮಸ್ಯೆಗಳಿವೆ.  ಅದನ್ನು ಬಗೆಹರಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.  ಅದಕ್ಕೆ ಅಗತ್ಯ ತಂತ್ರಾಂಶಗಳನ್ನು ಸಿದ್ಧಪಡಿಸುವ ಯತ್ನ ಕೂಡಾ ನಡೆದಿದೆ.

ಎರಡು ಸಾವಿರ ವರ್ಷಗಳಿಗೂ ಹೆಚ್ಚು ಸುದೀರ್ಘ ಇತಿಹಾಸವಿರುವ  ಶಾಸ್ತ್ರೀಯ ಭಾಷೆಯೂ ಆಗಿರುವ ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಸರ್ಕಾರ ಸತತ ಪ್ರಯತ್ನ ಮಾಡುತ್ತಲೇ ಇದೆ.  ರಾಜ್ಯದಲ್ಲಿ  ಉಚ್ಛ ನ್ಯಾಯಾಲಯ ಸೇರಿದಂತೆ  ಎಲ್ಲಾ ನ್ಯಾಯಾಲಯಗಳಲ್ಲೂ ಕನ್ನಡ ಭಾಷೆಯಲ್ಲಿಯೇ ತೀರ್ಪು ಹೊರಬರಬೇಕು ಎಂಬುದು   ಸರ್ಕಾರದ ಸದಾಶಯವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಎ. ಎಸ್. ಬೋಪಣ್ಣ ಅವರು  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ,           ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೆಂಗಳೂರು ಅಭಿವೃದ್ಧಿ ಹಾಗೂ   ನಗರ ಯೋಜನಾ ಸಚಿವ  ಕೆ. ಜೆ. ಜಾರ್ಜ್ ಅವರೂ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಈ ಮುನ್ನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ಧರಾಮಯ್ಯ ಅವರು    ಪ್ರಾಸ್ತಾವಿಕವಾಗಿ ಮಾತನಾಡಿದರು.  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ  ಡಾ ಕೆ. ಮುರಳೀಧರ್ ಅವರು ಸ್ವಾಗತಿಸಿದರು.

ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಹಾಗೂ ಜನಪದ ಕಲಾ ಪ್ರದರ್ಶನ ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ