ಬಸ್ ಟಿಕೆಟ್ ಖಾಲಿ!

karnataka election and bus tickets

25-04-2018

ಬೆಂಗಳೂರು: ವಾರಾಂತ್ಯದಲ್ಲಿ ಮತದಾನ ದಿನ ಬಂದಿರುವ ಹಿನ್ನಲೆಯಲ್ಲಿ ಮತದಾನದ ಜೊತೆ ರಜೆಯ ಮಜಾ ಅನುಭವಿಸಲು ಊರಿಗೆ ತೆರಳಲು ಮುಂದಾಗಿದ್ದವರಿಗೆ ಶಾಕ್ ಎದುರಾಗಿದೆ.!

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ)ಬಸ್‍ಗಳಲ್ಲಿ ಒಂದು ತಿಂಗಳು ಮುಂಗಡ ಟಿಕೆಟ್ ಪಡೆಯಲು ಅವಕಾಶ ಇದ್ದು, ಅಂತರ್ಜಾಲದಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಲು ಮುಂದಾಗಿರುವವರಿಗೆ ಕಳೆದ ಒಂದೆರಡು ದಿನಗಳಿಂದ ಶಾಕ್ ಎದುರಾಗಿದೆ. ಅದಾಗಲೇ ಮತದಾನದ ಮುಂಚಿನ ಒಂದೆರಡು ದಿನ ಬೆಂಗಳೂರಿನಿಂದ ತೆರಳುವ ಹಾಗೂ ನಂತರದ ಒಂದೆರಡು ದಿನ ಬೆಂಗಳೂರಿಗೆ ವಾಪಾಸಾಗುವ ಟಿಕೆಟ್‍ಗಳು ಅದಾಗಲೇ ಬಹುತೇಕ ಖಾಲಿ ಆಗಿವೆ.

ಉದ್ಯೋಗ ಅರಸಿ ರಾಜ್ಯದ ಹಾಗೂ ದೇಶದ ನಾನಾ ಭಾಗದಿಂದ ಸಾವಿರಾರು ಯುವಕ, ಯುವತಿಯರು ಬೆಂಗಳೂರಿಗೆ ಬರುತ್ತಾರೆ. ಹಲವರು ಮೊದಲ ಬಾರಿ ಮತದಾನ ಮಾಡುವ ಅವಕಾಶ ಹೊಂದಿದ್ದರೆ ಮತ್ತೆ ಕೆಲವರು ಬೆಂಗಳೂರಿಗೆ ಬಂದು ಕೆಲ ವರ್ಷ ಕಳೆದಿದ್ದರೂ, ಮತದಾನದ ಹಕ್ಕನ್ನು ಮಾತ್ರ ತಮ್ಮ ಸ್ವಂತ ಊರಲ್ಲಿಯೇ ಉಳಿಸಿಕೊಂಡಿದ್ದಾರೆ. ಈ ಸಾರಿಯಂತೂ ವಾರಾಂತ್ಯದಲ್ಲಿ ಚುನಾವಣೆ ಬಂದಿರುವುದರಿಂದ ಹಲವರು ಮತದಾನದ ನೆಪದಲ್ಲಿ ಊರಿಗೆ ಹೋಗಿ ಬರುವ ಪ್ಲ್ಯಾನ್ ರೂಪಿಸಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಶಾಕ್ ನೀಡುತ್ತಿದೆ ಆನ್‍ಲೈನ್ ಬುಕ್ಕಿಂಗ್. ಟಿಕೆಟ್ ಬಹುತೇಕ ಖಾಲಿ ಆಗಿದೆ. ಕೆಲವೇ ಕೆಲವು ಸೀಟುಗಳು ಉಳಿದಿದ್ದು, ಅದೂ ಕೂಡ ಆಯ್ಕೆಗೆ ಸೂಕ್ತವಾಗಿಲ್ಲ. ವಿಶೇಷ ಬಸ್‍ಗಳನ್ನು ಬಿಡುವ ನಿರ್ಧಾರವನ್ನು ಕೆಎಸ್‍ಆರ್‍ಟಿಸಿ ಇದುವರೆಗೂ ಮಾಡಿಲ್ಲ.

ಸಾಮಾನ್ಯವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಾಲ್ಕು ನಿಗಮದ ಶೇ.70ರಷ್ಟು ಬಸ್‍ಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗಲಿದೆ. ಮೇ 12ರಂದು ಮತದಾನವಿದ್ದು, ಮೇ 15ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದರಿಂದ ಮೇ 10ರಿಂದ ಮೇ 17ರವರೆಗೆ ಬಸ್‍ಗಳ ಲಭ್ಯತೆ ಕಡಿಮೆ ಇರಲಿದೆ. ಶನಿವಾರ ಮತದಾನದ ದಿನ ಬಂದಿರುವುದರಿಂದ ಊರಿಗೆ ತೆರಳುವವರ ಉತ್ಸಾಹ ಹೆಚ್ಚಿರುತ್ತದೆ. ಇದೀಗ ಎದುರಾಗಿರುವ ಸಮಸ್ಯೆಗೆ ಪರಿಹಾರವೆಂದರೆ ಊರಿಗೆ ತೆರಳಲೇ ಬೇಕೆಂದಿರುವವರು ಬುಧವಾರ ಇಲ್ಲ ಗುರುವಾರ (ಮೇ 9 ಅಥವಾ 10) ಹೊರಟು ಒಂದು ವಾರದ ನಂತರ ವಾಪಾಸಾಗುವ ಮಾದರಿಯ ಯೋಜನೆ ಹಾಕಿಕೊಳ್ಳಬೇಕಿದೆ.

ಕೆಲ ಪರ ಊರಿನ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ತಮ್ಮ ಮತದಾರರನ್ನು ಕರೆಸಿಕೊಳ್ಳಲು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕೂಡ ಮಾಡಿಸುತ್ತಿದ್ದಾರೆ ಎನ್ನುವ ಆರೋಪವನ್ನು ಕೆಲ ಸಾಮಾಜಿಕ ಕಾರ್ಯಕರ್ತರು ಮಾಡುತ್ತಿದ್ದಾರೆ. ಟಿಕೆಟ್ ಮಾಡಿಸಿ ಮತದಾರರನ್ನು ಊರಿಗೆ ಕರೆಸಿ, ಮತದಾನದ ನಂತರ ವಾಪಸ್ ಕಳಿಸಿಕೊಡುವ ಟಿಕೆಟ್ ಕೂಡ ಮುಂಗಡವಾಗಿ ಕೆಲವರು ಕೊಂಡುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ಸಂಸ್ಥೆಯ ಹಿರಿಯ ಅಧಿಕಾರಿ ಒಬ್ಬರು ಹೇಳುವ ಪ್ರಕಾರ, ಈ ಬಗ್ಗೆ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಗಮನ ಹರಿಸಿದೆ. ಇಂತಹ ಕಾರ್ಯ ಆದಲ್ಲಿ ಅವರು ಕ್ರಮ ಕೈಗೊಳ್ಳುತ್ತಾರೆ. ಸಾಮೂಹಿಕವಾಗಿ ಬಸ್‍ಗಳು ಬುಕ್ಕಿಂಗ್‍ಗೆ ಯಾವುದೇ ವ್ಯಕ್ತಿ ಮುಂದಾದರೆ ನಾವು ಅದನ್ನು ಆಯೋಗದ ಗಮನಕ್ಕೆ ತರುತ್ತೇವೆ. ಇದುವರೆಗೂ ಅಂತಹ ವಿಚಾರ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

polling online ಹಿರಿಯ ಮುಂಗಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ