ಮಕ್ಕಳನ್ನು ಪ್ರಚಾರಕ್ಕೆ ಬಳಸಿದರೆ ಕ್ರಿಮಿನಲ್ ಕೇಸ್ !

political parties should not be use children for election campaign: criminal case

25-04-2018

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯಾದ್ಯಂತ ಮನೆ ಮನೆ ಪ್ರಚಾರ, ಜಾಥಾ, ಮೆರವಣಿಗೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಪ್ರಚಾರ ಕಾರ್ಯದಲ್ಲಿ ಮಕ್ಕಳ ಬಳಸುವುದರ ಮೇಲೆ ಕ್ರಮಿನಲ್ ಮೊಕದ್ದಮೆ ದಾಖಲಿಸಲು ಚುನಾವಣಾ ಆಯೋಗ ಮುಂದಾಗಿದೆ.

100-200 ರೂ. ಕೊಟ್ಟು ಮಕ್ಕಳನ್ನು ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳುವ ಮೂಲಕ ಹಣ ಉಳಿಸುವ ತಂತ್ರಕ್ಕೆ ಅಭ್ಯರ್ಥಿಗಳು ಹಾಗೂ ಅವರ ಅನುಯಾಯಿಗಳು ಇಂತಹ ಸಂದರ್ಭದಲ್ಲಿ ಮುಂದಾಗಲಿದ್ದು ಅಂತಹವರ ವಿರುದ್ಧ ಆಯೋಗ ಹದ್ದಿನ ಕಣ್ಣಿಡಲಿದೆ.

ಮಕ್ಕಳು ಕೂಡ ಬೇಸಿಗೆ ರಜೆ ಆಗಿರುವ ಕಾರಣ ಖಾಲಿ ಇದ್ದು, ಬಹುಬೇಗ ಇಂತವರ ಬಳಕೆಗೆ ಸಿಕ್ಕಿ ಬಿಡುತ್ತಾರೆ. ಏನೂ ಅರಿಯದ ಮುಗ್ದ ಮಕ್ಕಳಿಗೆ ಹಣದ ಆಮಿಷ ಒಡ್ಡಿ ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳುತ್ತಾರೆ. ಇದು ಇಂದು ನಿನ್ನೆಯ ಬೆಳವಣಿಗೆ ಅಲ್ಲ, ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ರೂಢಿ. ಇದಕ್ಕೆ ಈಗ ಕಡಿವಾಣ ಹಾಕಲು ಚುನಾವಣಾ ಆಯೋಗ ಮುಂದಾಗಿದ್ದು, ಕಠಿಣ ಕ್ರಮದ ಮೂಲಕ ತಡೆಯುವ ಯತ್ನ ಮಾಡುತ್ತಿದೆ.

ಅತ್ಯಂತ ಚುರುಕಾಗಿ, ಕರಾರುವಕ್ಕಾಗಿ, ಅವಸರದಲ್ಲಿ ಉತ್ತಮವಾಗಿ ಮಕ್ಕಳು ಕಾರ್ಯನಿರ್ವಹಿಸುತ್ತಾರೆ ಎಂಬ ಕಾರಣಕ್ಕೆ ಹಲವರು ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಬಹುಬೇಗ ಬಳಲುವುದಿಲ್ಲ, ಮೋಸ ಮಾಡುವುದಿಲ್ಲ, ಹೆಚ್ಚಿನ ಹಣಕ್ಕೆ ಬಲವಂತ ಮಾಡಲ್ಲ, ತಪ್ಪಿಸಿಕೊಂಡು ತಿರುಗಲ್ಲ ಅನ್ನುವ ಕಾರಣಕ್ಕೆ ಮಕ್ಕಳ ಬಳಕೆ ಹೆಚ್ಚಾಗಿ ಆಗುತ್ತದೆ. ಕೇಂದ್ರ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದು ಎಲ್ಲಾ ಪಕ್ಷಗಳಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ .

ಆಯೋಗಕ್ಕೆ ಪತ್ರ: ಮಕ್ಕಳನ್ನು ಚುನಾವಣಾ ಕಾರ್ಯಕ್ಕೆ ಬಳಸುವುದನ್ನು ತಡೆಯಬೇಕು ಎಂದು ಕೇಂದ್ರ ಮಕ್ಕಳ ಹಕ್ಕು ಆಯೋಗವು ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದೆ. ಮಕ್ಕಳ ಕೈಲಿ ಪಕ್ಷದ ಬಾವುಟ, ಬ್ಯಾನರ್, ಬ್ರೋಷರ್ ಹಿಡಿಸುವುದು, ಕರಪತ್ರ ಹಂಚಿಸುವ ಕಾರ್ಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.

ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಮಾತನಾಡಿ, ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಒಂದೊಮ್ಮೆ ಪ್ರಚಾರ ಕಾರ್ಯಕ್ಕೆ ಮಕ್ಕಳ ಬಳಕೆ ಆಗಿದ್ದು ಕಂಡು ಬಂದಲ್ಲಿ ಬಳಸಿದ ಪಕ್ಷದ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದೇವೆ. ಯಾವ ಪಕ್ಷದವರೂ ಮಕ್ಕಳನ್ನು ಪ್ರಚಾರಕ್ಕೆ ಬಳಸಬಾರದು, ಬಳಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಮಾಹಿತಿಯನ್ನು ಕೂಡ ಚುನಾವಣಾ ಆಯೋಗದ ಮೂಲಕವೇ ಕೊಡಿಸುತ್ತೇವೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ