ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಸ್ಪರ್ಧೆ ಸರಿಯೆ?

siddaramaiah v/s  Sriramulu

25-04-2018

ಬೆಂಗಳೂರು: ಬಾದಾಮಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಬಿಜೆಪಿಯಿಂದ ಶ್ರೀರಾಮುಲು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಿಂದುಳಿದ ಜಾತಿಗಳ ಡಾರ್ಲಿಂಗ್ ಸಿದ್ದರಾಮಯ್ಯ ಹಾಗೂ ಗಣಿ ನಾಡಿನ ಶಕ್ತಿ ರಾಜಕಾರಣದ ಶ್ರೀರಾಮುಲು ನಡುವಿನ ಸ್ಪರ್ಧೆಯಿಂದ ಬಾದಾಮಿ ಈಗ ದೇಶದ ಗಮನ ಸೆಳೆದಿದೆ.

ಬಾದಾಮಿಯಲ್ಲಿ ‌ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ನಾಲ್ಕನೇ ಮುಖ್ಯ ಮಂತ್ರಿ. 1962ರಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದ ಅಂದಿನ ಮುಖ್ಯ ಮಂತ್ರಿ ಎಸ್.ನಿಜಲಿಂಗಪ್ಪ ನಂತರ ಬಾಗಲಕೋಟೆ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದರು. 1980ರಲ್ಲಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, 1991ರಲ್ಲಿ ರಾಮಕೃಷ್ಣ ಹೆಗಡೆ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದರು. ವೀರೇಂದ್ರ ಪಾಟೀಲ್ ಗೆದ್ದರೆ, ರಾಮಕೃಷ್ಣ ಹೆಗಡೆ ಸೋಲುಂಡಿದ್ದರು.

ಕರ್ನಾಟಕದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಉತ್ತರ ಕರ್ನಾಟಕ ಭಾಗದ ಅದರಲ್ಲೂ ಮುಖ್ಯವಾಗಿ ಮುಂಬೈ-ಕರ್ನಾಟಕದ ಜನರ ಆಶೀರ್ವಾದ ಬಹಳ ಮುಖ್ಯ.        ಉತ್ತರ ಕರ್ನಾಟಕ ಭಾಗದಲ್ಲಿ 96 ವಿಧಾನಸಭಾ ಕ್ಷೇತ್ರಗಳಿವೆ. ಅಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುವುದೊ ಆ ಪಕ್ಷ ಸಾಮಾನ್ಯವಾಗಿ ಅಧಿಕಾರಕ್ಕೆ ಬರುತ್ತದೆ. 1989ರಲ್ಲಿ ಕಾಂಗ್ರೆಸ್ ಪಕ್ಷ ಉತ್ತರ ಕರ್ನಾಟಕ ಭಾಗದ 96 ಕ್ಷೇತ್ರಗಳ ಪೈಕಿ 69ರಲ್ಲಿ ಗೆಲುವಿನ ನಗೆ ಬೀರಿತ್ತು. ಆಗ, ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದಿತ್ತು. 1999ರಲ್ಲಿ 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದಾಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. 2013ರಲ್ಲಿ  ಕಾಂಗ್ರೆಸ್ ಗೆ ಉತ್ತರ ಕರ್ನಾಟಕ ಭಾಗದ 57 ಕ್ಷೇತ್ರಗಳು ಒಲಿದಾಗ ಸಿದ್ದರಾಮಯ್ಯ ನಾಯಕತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಈ ಇತಿಹಾಸದ ಪಾಠ ಹೇಳುವುದೇನೆಂದರೆ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಉತ್ತರ ಕರ್ನಾಟಕ ಭಾಗವನ್ನು ಗಂಭೀರವಾಗಿ ತೆಗೆದು ಕೊಳ್ಳಲೇ ಬೇಕು. ಇತಿಹಾಸ ಹೀಗಿದ್ದರೂ, ಮುಂಬೈ-ಕರ್ನಾಟಕ ಭಾಗದಲ್ಲಿ ಪ್ರಭಾಶಾಲಿಯಾಗಿರುವ ಬಿಜೆಪಿ, ಈ ಬಾರಿ ಬಹು ಸಂಖ್ಯಾತ ಲಿಂಗಾಯತರ ಅಭ್ಯರ್ಥಿ ಬದಲು ಜಾತಿ ಲೆಕ್ಕಾಚಾರದಲ್ಲಿ ಐದನೇ ಸ್ಥಾನದಲ್ಲಿರುವ ವಾಲ್ಮೀಕಿ ನಾಯಕ ಜನಾಂಗದ ಶ್ರೀರಾಮುಲು ಅವರನ್ನು ಸ್ಪರ್ಧೆಗೆ ಇಳಿಸಿದೆ.

ಬಾದಾಮಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅವರಷ್ಟೇ ಪ್ರಭಾವಶಾಲಿ ಲಿಂಗಾಯತ ನಾಯಕನನ್ನು ಕಣಕ್ಕಿಳಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಈಗ ಅದು ಸುಳ್ಳಾಗಿದೆ.

ಈ ಮಾಹಿತಿಯನ್ನು ಒಮ್ಮೆ ಗಮನಿಸಿ. ಬಾದಾಮಿಯಲ್ಲಿ ಲಿಂಗಾಯತ ಉಪ ಜಾತಿಗಳಾದ ಪಂಚಮಸಾಲಿ, ಬಣಜಿಗ, ಗಾಣಿಗ ಹಾಗೂ ರಡ್ಡಿಗಳ ಮತವೇ ಸುಮಾರು 68 ಸಾವಿರ ಇವೆ. ಅಲ್ಲಿಂದ ಒಂದು ಬಾರಿ ಕುರುಬ ಜಾತಿಯ ಅಭ್ಯರ್ಥಿ ಮತ್ತೊಂದು ಬಾರಿ ಲಿಂಗಾಯತ ಅಭ್ಯರ್ಥಿ ವಿಧಾನ ಸಭೆಗೆ ಆಯ್ಕೆ ಆಗುತ್ತಿದ್ದಾರೆ. ಆದರೂ, ಬಾದಾಮಿ ವಿಧಾನ ಸಭಾ ಕ್ಷೇತ್ರವನ್ನು ಕುರುಬರ ಪ್ರಾಬಲ್ಯದ ಕ್ಷೇತ್ರ ಎಂದೇ ಗುರುತಿಸಲಾಗುತ್ತಿದೆ.

ಇಂತಹ ಕ್ಷೇತ್ರಕ್ಕೆ ಇಡೀ ರಾಜ್ಯವೇ ಆಶ್ಚರ್ಯದಿಂದ ನೋಡುವಂತೆ ವಾಲ್ಮೀಕಿ ನಾಯಕ ಜನಾಂಗದ ಶ್ರೀರಾಮುಲು ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈಗ ರಾಜ್ಯದ ಜನರ ಮನಸ್ಸಿನಲ್ಲಿ ಬಿಜೆಪಿ ಲೆಕ್ಕಾಚಾರದ ತಂತ್ರವೇನು? ಎನ್ನುವ ಚರ್ಚೆ ಆರಂಭವಾಗಿದೆ. ಚಾಲುಕ್ಯರ ನಾಡಿನಲ್ಲಿ ದೇಶವೇ ತಿರುಗಿ ನೋಡುವಂತಹ ಹಣಾಹಣಿ ನಡೆಯಬಹುದು, ಕ್ಷೇತ್ರ ಹೈ-ವೋಲ್ಟೇಜ್ ಕ್ಷೇತ್ರ ವಾಗಬಹುದು ಎಂದು ಕೊಂಡಿದ್ದವರಿಗೆ, ಲಿಂಗಾಯತ ಮತ ಬೇಟೆಗಾಗಿ ಉತ್ತರ ಕರ್ನಾಟಕದ ಬಾದಾಮಿಗೆ ಆಗಮಿಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಿ, ಲಿಂಗಾಯತ ಮತಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶ ಕಾಣಲಿದೆ ಎಂದು ಕೊಂಡಿದ್ದವರಿಗೆ ಚುನಾವಣಾ ತಂತ್ರಗಾರ ಅಮಿತ್ ಷಾ ಎಡವಿದರೇ ಎಂಬ ಅನುಮಾನ ಮೂಡುವಂತಾಗಿದೆ.

ಬಾದಾಮಿಯಲ್ಲಿ ಅಹಿಂದ ಮತಗಳು ಸೇರಿದಂತೆ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಹೆಚ್ಚಾಗಿವೆ. ಕುರುಬರು 40 ಸಾವಿರ, ದಲಿತರು 35 ಸಾವಿರ, ನಾಯಕರು 21 ಸಾವಿರ, ಮುಸ್ಲಿಂರು 10 ಸಾವಿರ ಮತದಾರರಿದ್ದಾರೆ. ಅವುಗಳೊಂದಿಗೆ ಲಿಂಗಾಯತ ಮತಗಳನ್ನು ಸೆಳೆಯಬಹುದೆಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಬಾದಾಮಿಯತ್ತ ಮುಖಮಾಡಿದ್ದಾರೆ. ಆದರೆ, ಇದೇ ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಲಿಂಗಾಯತ ‌ಮತಗಳು ಯಾವಾಗಲೂ ನಮ್ಮ ಬೆಂಬಲಕ್ಕೆ ಇರುತ್ತವೆ ಎಂಬ ಸಂದೇಶ ನೀಡಲು ಬಿಜೆಪಿ ಮುಂದಾಗಬೇಕಿತ್ತು. ಹೀಗಾಗಿಯೇ ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದು ಎಂದು ಅಂದಾಜು ಮಾಡಿದ್ದವರಿಗೆ ಬಿಜೆಪಿ ನಿರ್ಧಾರ ಅರ್ಥವಾಗುತ್ತಿಲ್ಲ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ವರುಣಾ ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಸ್ಪರ್ಧೆಗೆ ಅವಕಾಶ ನೀಡದಿರುವುದು, ಬಿಜೆಪಿಯಲ್ಲಿ ಯಡಿಯೂರಪ್ಪ ಹಿಂದಿನಷ್ಟು ಪ್ರಭಾವಶಾಲಿಯಲ್ಲ ಎನ್ನುವುದನ್ನು ಬಿಂಬಿಸುವ ಯತ್ನ ಎಂದ ಭಾವಿಸಿರುವ ಲಿಂಗಾಯತರು ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನಗೊಳ್ಳಲು ದಾರಿ ಮಾಡಿಕೊಟ್ಟಿದೆ.

ಬಾದಾಮಿಯಲ್ಲಿ ಸ್ಪರ್ಧೆ ಮಾಡಿದರೆ ತಾವು ಪ್ರಬಲ ನಾಯಕರ ಪಟ್ಟಿಯಲ್ಲಿ ಹೆಸರು ಗಿಟ್ಟಿಸಬಹುದು, ಬಿಜೆಪಿ ಅಧಿಕಾರಕ್ಕೆ ಬಂದರೆ ಉಪ ಮುಖ್ಯ ಮಂತ್ರಿ ಸ್ಥಾನ ಖಾತ್ರಿ ಮಾಡಿಕೊಳ್ಳಬಹುದು ಎಂದು ಶ್ರೀರಾಮುಲು ಮೊಳಕಾಲ್ಮೂರು ಜೊತೆಗೆ ಬಾದಾಮಿಯಲ್ಲೂ ಸ್ಪರ್ಧೆಗಿಳಿದಿದ್ದಾರೆ. ಆದರೆ, ಬಾದಾಮಿಯಲ್ಲಿ ನಾಯಕರ ಮತ ಪಡೆಯುವುದು ಅಷ್ಟು ಸುಲಭವಲ್ಲ. ಸಿದ್ದರಾಮಯ್ಯ ಅವರ ಆಪ್ತ ಎಂದೇ ಗುರುತಿಸಲ್ಪಡುವ ನಾಯಕ ಜನಾಂಗದ ಮುಖಂಡ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಈಗಾಗಲೇ ಬಾದಾಮಿಯಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ  ಕ್ಷೇತ್ರ ಬಿಟ್ಟರೆ ಬಾದಾಮಿ ಕ್ಷೇತ್ರದಲ್ಲೇ  ಮುಖ್ಯಮಂತ್ರಿಗಳ ಪರ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕೈಗೊಳ್ಳುವುದಾಗಿ  ಹೇಳಿದ್ದಾರೆ.

ತಮ್ಮ ಜನಾಂಗದವರಿಗೇ ಬಿಜೆಪಿ ಟಿಕೆಟ್ ಎಂದು ಅಂದು ಕೊಂಡಿದ್ದ ಬಾದಾಮಿಯ ಲಿಂಗಾಯತ ಮತದಾರರು ಈಗ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಾದಾಮಿಯ ಟಿಕೆಟ್ ತಮಗೆ ಎಂದು ಸ್ಪರ್ಧೆಗೆ ಸಿದ್ಧತೆ ನಡೆಸಿದ್ದ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪುರ ಬಿಜೆಪಿ ಹಾಗೂ ಪಕ್ಷೇತರ ಎಂದು ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಸಾಂಪ್ರದಾಯಿಕ ಲಿಂಗಾಯತ ಮತಗಳು ಬಿಜೆಪಿ ಕೈಬಿಡುವ ಅಪಾಯ ಇದೆ. ಇನ್ನು  ಕ್ಷೇತ್ರದಲ್ಲಿನ ದಲಿತ ಮತಗಳ ಮೇಲೆ ಬಾಗಲಕೋಟೆಯ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಬಿ.ಬಿ.ಚಿಮ್ಮನಕಟ್ಟಿ, ಸತೀಶ್ ಜಾರಕಿಹೊಳಿ ಪ್ರಭಾವ ಇದೆ. ಹೀಗಾಗಿ, ಶ್ರೀರಾಮುಲು ನಾಯಕ ಜನಾಂಗದವರು ಎನ್ನುವ ಕಾರಣಕ್ಕೆ ಬಾದಾಮಿಯ ಮತದಾರರು ಅವರ ಪರವಾಗಿ ಮತ ಚಲಾವಣೆ ಮಾಡುವುದು ಕಷ್ಟ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶ್ರೀರಾಮುಲು ಅವರನ್ನು ಚುನಾವಣಾ ಕಣಕ್ಕಿಳಿಸಿರುವುದನ್ನು ನೋಡಿದರೆ, ಪಕ್ಷದ ಹೈಕಮಾಂಡ್ಗೆ ಶ್ರೀರಾಮುಲು ಆಪ್ತ ಜನಾರ್ಧನ ರೆಡ್ಡಿ ಸಹೋದರರು ಈ ಹಿಂದೆ ಪಕ್ಷವನ್ನು ಇಕ್ಕಟಿಗೆ ಸಿಲುಕಿಸಿದ್ದನ್ನು ಮರೆತಂತೆ ಕಾಣುತ್ತಿಲ್ಲ. ಅಮಿತ್ ಷಾ, 'ಬಿಜೆಪಿಗೂ ಜನಾರ್ಧನ ರೆಡ್ಡಿಗೂ ಯಾವುದೇ ಸಂಬಂಧ ಇಲ್ಲ ಎಂದ ಮೇಲೂ ಜನಾರ್ಧನ ರೆಡ್ಡಿ ಬಿಜೆಪಿಯಿಂದ ದೂರವಾಗದೆ ಹತ್ತಿರಕ್ಕೆ ಬರಲು ಪ್ರಯತ್ನಿಸುತ್ತಿರುವುದು ಮತ್ತೆ ರೆಡ್ಡಿಗಳ ದರ್ಬಾರ್ಗೆ ಅವಕಾಶವಾದರೆ ಕಷ್ಟ. ಈ ಹಂತದಲ್ಲೇ ಅವರನ್ನು ನಿಯಂತ್ರಿಸುವುದು ಒಳ್ಳೆಯದು ಎನ್ನುವ  ಕಾರಣಕ್ಕಾಗಿ ಶ್ರೀ ರಾಮುಲು ಅವರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ, ಬಿಜೆಪಿ ಹೈಕಮಾಂಡ್ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಲಿಂಗಾಯತ ಅಭ್ಯರ್ಥಿ ಬದಲು ನಾಯಕ ಜನಾಂಗದ ಶ್ರೀರಾಮುಲು ಮೂಲಕ ಏನನ್ನು ಹೇಳಲು ಹೊರಟಿದೆ. ರಾಜ್ಯದ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಮತ್ತೊಂದು ಹಿಂದುಳಿದ ಜಾತಿಗೆ ಸೇರಿದ ನಾಯಕ ಜನಾಂಗದ ಶ್ರೀರಾಮುಲು ಮೂಲಕ ಹಣಿಯುವುದೇ ಸರಿ ಅಂದು ಕೊಂಡಿದೆಯೇ? ಬಿಜೆಪಿಯ ಚುನಾವಣಾ ಚಾಣಕ್ಯ ಎಂತಲೇ ಕರೆಯಲ್ಪಡುವ ಅಮಿತ್ ಷಾ ಅವರ ತಂತ್ರಗಾರಿಕೆಯಾದರೂ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಲಿಂಗಾಯತ ಅಭ್ಯರ್ಥಿ ಬದಲು ನಾಯಕ ಜನಾಂಗದ ಅಭ್ಯರ್ಥಿ ಹೂಡಿಕೆಯ ಹಿಂದೆ ಬಾದಾಮಿ ಜೊತೆಗೆ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿರುವ ನಾಯಕರ ಮತಗಳನ್ನು ವರುಣ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಯತ್ತ ಸೆಳೆಯುವ ತಂತ್ರ ಇದೆಯೇ? ಒಂದೇ ತಂತ್ರದ ಮೂಲಕ ಮೂರೂ ಕ್ಷೇತ್ರಗಳಲ್ಲೂ ಗಣನೀಯ ಪ್ರಮಾಣದಲ್ಲಿರುವ ನಾಯಕರ ಮತಗಳು ಬಿಜೆಪಿ ಅಭ್ಯರ್ಥಿಗಳಿಗೆ ದೊರೆಯುವಂತೆ ಮಾಡುವ ವ್ಯೂಹಾತ್ಮಕ ತಂತ್ರ ರೂಪಿಸಲಾಗಿದೆಯೇ?ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ