ಬಿಜೆಪಿ ಟಿಕೆಟ್ ನಿರಾಕರಿಸಿದ ಅರುಣ್ ಸೋಮಣ್ಣ!

Arun somanna refused arsikere bjp ticket

21-04-2018

ಬೆಂಗಳೂರು: ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣಾಗಾಗಿ ನಿನ್ನೆ ಪ್ರಕಟವಾದ ಬಿಜೆಪಿಯ ಮೂರನೇ ಪಟ್ಟಿಯಲ್ಲಿ ನೀಡಿದ್ದ ಟಿಕೆಟ್ ಅನ್ನು ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್ ಸೋಮಣ್ಣ ನಿರಾಕರಿಸಿದ್ದಾರೆ.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ನಿನ್ನೆ ವಿಧಾನಸಭಾ ಚುನಾವಣೆಗಾಗಿ ಮೂರನೇ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 59ಸ್ಪರ್ಧಾಕಾಂಕ್ಷಿಗಳಿಗೆ ಟಿಕೆಟ್ ನೀಡಲಾಗಿತ್ತು. ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರಿಗೆ ಅರಸೀಕೆರೆ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಪ್ರಕಟಿಸಲಾಗಿತ್ತು.

ಆದರೆ, ಅರುಣ್ ಸೋಮಣ್ಣ ಅವರು ಬಿಜೆಪಿ ಟಿಕೆಟ್ ನಿರಾಕರಿಸಿರುವುದಲ್ಲದೇ ಸದ್ಯಕ್ಕೆ ಕಾರ್ಯಕರ್ತರಿಗೂ ಸಿಗುತ್ತಿಲ್ಲ. ಈ ಬೆಳವಣಿಗೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರಿಗೆ ದೊಡ್ಡ ತಲೆ ನೋವಾಗಿದೆ. ಅವರು ಹೊಸ ಅಭ್ಯರ್ಥಿಯ ಹುಡುಕಾಟ ಆರಂಭಿಸಿದ್ದಾರೆ. ಇದಕ್ಕೂ ಮುನ್ನ, ಹುಲಿನಾಯ್ಕರ್ ಮಧುಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ನಿರಾಕರಿಸಿದ್ದರು. ನಾನು ಟಿಕೆಟ್ ಕೇಳಿರಲಿಲ್ಲ. ಹಾಗಾಗಿ, ನನಗೆ ಟಿಕೆಟ್ ಬೇಡ ಎಂದಿದ್ದರು.

ಡಾ.ಅರುಣ್ ಸೋಮಣ್ಣ, ಕೆಲ ತಿಂಗಳ ಹಿಂದೆ ಅರಸೀಕೆರೆ ಬಿಜೆಪಿ ಟಿಕೆಟ್ ಬಯಸಿ ಅಲ್ಲಿ ಚುನಾವಣಾ ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನವರ ಪುತ್ರ ಬಿ.ವೈ.ವಿಜಯೇಂದ್ರ ಪ್ರವೇಶವಾಗಿತ್ತು. ವಿಜಯೇಂದ್ರ ತಮ್ಮ ಸ್ನೇಹಿತರೊಬ್ಬರಿಗೆ ಅರಸೀಕೆರೆ ಟಿಕೆಟ್ ಕೊಡಿಸುವ ಯತ್ನ ಆರಂಭಸಿದ್ದರು. ಈ ಬೆಳವಣಿಗೆ ಡಾ.ಅರುಣ್ ಹಾಗೂ ಅವರ ತಂದೆ ವಿ.ಸೋಮಣ್ಣ ನವರಿಗೆ ಅತೀವ ಅಸಮಾಧಾನ ಉಂಟು ಮಾಡಿತ್ತು. ನಂತರದ ಬೆಳವಣಿಗೆಗಳಿಂದ ಅರುಣ್ ಸೋಮಣ್ಣ ಅರಸೀಕೆರೆ ಕ್ಷೇತ್ರದಿಂದ ದೂರವಾಗಿದ್ದರು.

ಆದರೆ, ಈಗ ದಿಢೀರನೆ ಟಿಕೆಟ್ ಪ್ರಕಟಿಸಿರುವುದನ್ನು ಒಪ್ಪಲು ಅರುಣ್ ಹಾಗೂ ಅವರ ತಂದೆ ವಿ.ಸೋಮಣ್ಣ ಸಿದ್ಧರಿಲ್ಲ. ಜೊತೆಗೆ, ವಿ.ಸೋಮಣ್ಣ, ಚಾಮರಾಜ ನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ, ಅವರಿಗೆ ಗೋವಿಂದರಾಜ ನಗರ ಕ್ಷೇತ್ರದ ಟಿಕೆಟ್ ನೀಡಿರುವುದು ತೀವ್ರ ಅಸಮಾಧಾನ ಉಂಟು ಮಾಡಿತ್ತು. ಈ ಬೆಳವಣಿಗೆ ಸಹ ವಿ.ಸೋಮಣ್ಣ ಅವರ ಮಗ ಅರಸೀಕೆರೆ ಟಿಕೆಟ್ ನಿರಾಕರಿಸಲು ಕಾರಣ ಎನ್ನಲಾಗುತ್ತಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ