ಕಾರಾಗೃಹದಲ್ಲಿ ಮೊಬೈಲ್, ಪೆನ್ ಡ್ರೈವ್, ಗಾಂಜಾ!

ganja, mobile, pendrive in central jail bengaluru

20-04-2018

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಮ್ ಕಾರ್ಡ್‍ಗಳು, ಮೊಬೈಲ್‍ಗಳು, ಪೆನ್ ಡ್ರೈವ್‍ಗಳು ಮತ್ತು ಗಾಂಜಾ ಸೇದಲು ಬಳಸಲಾಗುತ್ತಿದ್ದ ಪೈಪ್‍ಗಳು ಪತ್ತೆಯಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ಚುನಾವಣಾ ಸಮಯದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಲೇ ಅಕ್ರಮ ನಡೆಸಲು ಕೆಲವು ಖೈದಿಗಳು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಪಡೆದ ನಗರ ಪೊಲೀಸರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಸಿಮ್ ಕಾರ್ಡ್‍ಗಳು, ಮೊಬೈಲ್‍ಗಳು, ಪೆನ್ ಡ್ರೈವ್‍ಗಳು ಮತ್ತು ಗಾಂಜಾ ಸೇದಲು ಬಳಸಲಾಗುತ್ತಿದ್ದ ಪೈಪ್‍ಗಳು ಪತ್ತೆಯಾಗಿವೆ. ಜೈಲಿನ ಒಳಕ್ಕೆ ಮೊಬೈಲ್, ಸಿಮ್‍ಕಾರ್ಡ್ ಮತ್ತು ಪೆನ್ ಡ್ರೈವ್ ನಂತಹ ಸಂಪರ್ಕ ಸಾಧನಗಳು ಹೋಗಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೈಲು ಅಧಿಕಾರಿಗಳ ಅಣತಿಯಿಲ್ಲದೇ ಈ ಎಲ್ಲಾ ಅಕ್ರಮ ನಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಂಜಾ ದಂಧೆ ನಡೆಯುತ್ತಿರುವುದೂ ಕೂಡ ಬೆಳಕಿಗೆ ಬಂದಿದೆ. ಗಾಂಜಾ ಸೇದಲು ಕೈದಿಗಳು ಇಟ್ಟುಕೊಂಡಿದ್ದ ಪೈಪ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚುನಾವಣಾ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಲವು ರೌಡಿಗಳನ್ನು ಬಂಧಿಸಿ ಪೊಲೀಸರು ಈಗಾಗಲೇ ಜೈಲಿಗಟ್ಟಿದ್ದಾರೆ. ಆದರೆ ರೌಡಿಗಳು ಜೈಲಲ್ಲೇ ಕುಳಿತುಕೊಂಡು ತಮ್ಮ ಸಹಚರರ ಜೊತೆ ಸಂಪರ್ಕ ಸಾಧಿಸಿ ಸಕ್ರಿಯರಾಗಿರೋದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ ಸಿಸಿಬಿ ಜಂಟಿ ಆಯುಕ್ತ ಸತೀಶ್ ಕುಮಾರ್ ನೇತೃತ್ವದಲ್ಲಿ 200 ಅಧಿಕಾರಿಗಳ ತಂಡ ಸುಮಾರು ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದೆ.


ಸಂಬಂಧಿತ ಟ್ಯಾಗ್ಗಳು

central jail illegal ರೌಡಿ ಪೆನ್ ಡ್ರೈವ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ