ಗೆದ್ದರೂ ಸಿಎಂ ಆಗಲ್ಲ ಯಡಿಯೂರಪ್ಪ?

B.S Yeddyurappa and bjp high command

20-04-2018

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಬಹುಮತಗಳಿಸಿ ಅಧಿಕಾರಕ್ಕೆ ಬಂದರೆ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಆಗುವರೇ? ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಅವರು, ಬಿ.ಎಸ್.ಯಡಿಯೂರಪ್ಪ ನಮ್ಮ ಮುಖ್ಯ ಮಂತ್ರಿ ಅಭ್ಯರ್ಥಿ ಎಂದು ಅನೇಕ ಬಾರಿ ಹೇಳಿದ್ದರೂ ರಾಜ್ಯದ ಪ್ರಜ್ಞಾವಂತರಲ್ಲಿ ಇಂತಹ ಅನುಮಾನ ಕಾಡುತ್ತಲೇ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಗಮನಿಸಿದವರಿಗೆ ಅವರ ದೃಷ್ಟಿಯಲ್ಲಿ ಯಡಿಯೂರಪ್ಪ ಎರಡು ಪ್ರಮುಖ ನಕಾರಾತ್ಮಕ ಅಂಶಗಳನ್ನು ಹೊಂದಿದ್ದಾರೆ. ಒಂದು, ಯಡಿಯೂರಪ್ಪನವರ ವಯಸ್ಸು 75 ವರ್ಷಕ್ಕೆ ತಲುಪಿರುವುದು, ಮತ್ತೊಂದು, ಯಡಿಯೂರಪ್ಪ ನವರ ಮೇಲಿನ ಭ್ರಷ್ಟಾಚಾರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವುದು.

ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನಾಯಕರ ವಯೋಮಿತಿಗೆ ಸಂಬಂಧಿಸಿದಂತೆ ಈವರೆಗೆ ಅನುಸರಿಸಿಕೊಂಡು ಬಂದಿರುವ ನೀತಿಗೆ ಯಡಿಯೂರಪ್ಪ ನವರ 75ವರ್ಷ ವಯಸ್ಸು ಖಂಡಿತ ಅಡ್ಡಿಯಾಗಲಿದೆ. ಪಕ್ಷದ ಅತ್ಯಂತ ಹಿರಿಯರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಯಶವಂತ ಸಿನ್ಹಾ ಅವರಂತಹ ಘಟಾನುಘಟಿ ನಾಯಕರುಗಳನ್ನೇ ಮೋದಿ, ವಯಸ್ಸಿನ ನೆಪ ಹೇಳಿ ಯಾವುದೇ ಅಧಿಕಾರ ನೀಡದೆ ಮಾರ್ಗದರ್ಶಕ ಮಂಡಳಿಗೆ ಸೇರಿಸಿದ್ದರು. ಅಂತಹದ್ದರಲ್ಲಿ ಯಡಿಯೂರಪ್ಪ ನವರಿಗೆ ರಿಯಾಯಿತಿ ಸಿಗುತ್ತದೆ ಎನ್ನುವುದು ನಂಬುವುದು ಕಷ್ಟ.

ಉತ್ತರ ಪ್ರದೇಶದ ಕಲ್ ರಾಜ್ ಮಿಶ್ರಾ ಹಾಗೂ ನಜ್ಮಾ ಹೆಫ್ತುಲ್ಲಾ ಅವರಿಗೆ 75 ವರ್ಷ ವಯಸ್ಸು ತುಂಬಿದ ಕಾರಣಕ್ಕಾಗಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು.

ಇನ್ನೂ, ಬಿಜೆಪಿಯ ಬಲಿಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿ, ಈ 75 ವರ್ಷದ ಹಿರಿತನದ ಮಿತಿಯನ್ನು ಯಡಿಯೂರಪ್ಪ ನವರಿಗಾಗಿ ಸಡಿಲಿಸುವರೇ? ಅಂದರೆ, ಬಿ.ಎಸ್.ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಅಷ್ಟು ಮಹತ್ವದ ಮತ್ತು ಅನಿವಾರ್ಯದ ನಾಯಕರೇ?

ಯಡಿಯೂರಪ್ಪ ಮುಖ್ಯ ಮಂತ್ರಿ ಆಗಲು ಇರುವ ಎರಡನೇ ಅಡೆ-ತಡೆ ಅವರ ಮೇಲೆ ಇರುವ ಭ್ರಷ್ಟಾಚಾರದ ಆರೋಪಗಳು. ಸದಾ ಕ್ಲೀನ್ ಇಮೇಜ್ಗಾಗಿ ಎಚ್ಚರದಿಂದ ಇರುವ ಪ್ರಧಾನಿ ನರೇಂದ್ರ ಮೋದಿ, 2019ರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರದ ಆರೋಪ ಇರುವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಪ್ರತಿ ಪಕ್ಷಗಳಿಗೆ ಪ್ರಬಲ ಟೀಕಾಸ್ತ್ರವನ್ನು ಉಡುಗೊರೆಯಾಗಿ ನೀಡುವರೆ?

2011ರಲ್ಲಿ ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪನವರ ಭ್ರಷ್ಟಾಚಾರಗಳನ್ನು ಎತ್ತಿ ಹೇಳಿದ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ನಾಯಕತ್ವ ಯಡಿಯೂರಪ್ಪ ಅವರನ್ನು ಒತ್ತಾಯಪೂರ್ವಕವಾಗಿ ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿತ್ತು. ನಂತರ, ಯಡಿಯೂರಪ್ಪ ಬಿಜೆಪಿಯ ನಾಶಕ್ಕೆ ಪಣತೊಟ್ಟು ಪಕ್ಷವನ್ನು ಒಡೆದು ಕರ್ನಾಟಕ ಜನತಾಪಕ್ಷವನ್ನು ಕಟ್ಟಿದವರು. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಣತೊಟ್ಟು ಅಧಿಕಾರದಲ್ಲಿದ್ದ ಬಿಜೆಪಿ ಕೇವಲ 40 ಸ್ಥಾನಗಳಿಗೆ ಕುಸಿಯುವಂತೆ ಮಾಡಿ ಪರೋಕ್ಷವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನೆರವಾದವರು.

ಅಂತಹ ಬಿ.ಎಸ್.ಯಡಿಯೂರಪ್ಪನವರನ್ನು ರಾಜ್ಯದ ಬಹುಸಂಖ್ಯಾತ ಲಿಂಗಾಯತರ ನಾಯಕರೆನ್ನುವ ಒಂದೇ ಕಾರಣಕ್ಕೆ ಮತ್ತೆ ಬಿಜೆಪಿಗೆ ಕರೆತಂದು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಯಿತು.

ನರೇಂದ್ರ ಮೋದಿ, ತಾವು ಪ್ರಧಾನಿಯಾದ ನಂತರ ಬಿಹಾರ, ಜಾರ್ಖಂಡ್, ಹರಿಯಾಣ, ಉತ್ತರ ಪ್ರದೇಶ ಹಾಗೂ ಇತ್ತೀಚಿಗೆ ಗುಜರಾತ್ ರಾಜ್ಯಗಳ ವಿಧಾನ ಸಭಾ ಚುನಾವಣೆ ನೇತೃತ್ವ ವಹಿಸಿ ವ್ಯಾಪಕ ಪ್ರಚಾರ ನಡೆಸಿದ್ದರು. ಆ ರಾಜ್ಯಗಳಲ್ಲಿ ಬಿಜೆಪಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿರಲಿಲ್ಲ. ಹಾಗಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ನಿಲುವಿನಲ್ಲಿ ದಿಢೀರನೆ  ಬದಲಾವಣೆ ಯಾದ್ದದಾದರೂ ಹೇಗೆ? ಮತ್ತು ಏಕೆ?

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸ್ಪಷ್ಟ ಅರಿವಿದೆ. ಅವರು, ತರಿಸಿಕೊಂಡಿರುವ ಕೇಂದ್ರ ಗುಪ್ತದಳ ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ವರದಿಗಳು, ಬಹುತೇಕ ಚುನಾವಣಾ ಸಮೀಕ್ಷೆಗಳು "ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ, ಬಿಜೆಪಿಗಿಂತಲೂ ಉತ್ತಮ ಸ್ಥಾನದಲ್ಲಿದೆ. ಬಿಜೆಪಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ'. ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯ ಸ್ಟಾರ್ ಪ್ರಚಾರಕರಾದ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯತೆ ಹಾಗೂ ಘನತೆಗೆ ಕುಂದುಂಟುಮಾಡಿಕೊಳ್ಳಲು ಸಿದ್ಧರಿಲ್ಲ.

'ಗೆಲುವಿಗೆ ನೂರಾರು ಅಪ್ಪಂದಿರು, ಸೋಲಿಗೆ ಯಾರೂ ಇಲ್ಲ' ಎನ್ನುವಂತೆ ಒಂದೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದೇ ಹೋದರೆ ಸೋಲಿನ ಹೊಣೆ ಹೊರಲು ಯಾರಾದರೂ ಬೇಕಲ್ಲ. ಅದಕ್ಕಾಗಿ, ಯಡಿಯೂರಪ್ಪ ನವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷತೆ ಜೊತೆಗೆ ಭಾವಿ ಮುಖ್ಯ ಮಂತ್ರಿ ಎಂದು ಘೋಷಿಸಲಾಗಿದೆ ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು. ಚುನಾವಣೆಯಲ್ಲಿ ಸೋತರೆ ಹೊಣೆಗಾರಿಕೆ ಯಡಿಯೂರಪ್ಪ ಅವರದ್ದು, ಗೆದ್ದು ಅಧಿಕಾರಕ್ಕೆ ಬಂದರೆ ಇದ್ದೇ ಇದೆಯಲ್ಲ 'ಮೋದಿ ಮ್ಯಾಜಿಕ್‌' ಎನ್ನುವ ಆರ್ಭಟ.

ಕರ್ನಾಟಕಕ್ಕೆ ಆಗಾಗ ಬಂದು ಪಕ್ಷದ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಿ ಪ್ರಚಾರವನ್ನು ಚುರುಕುಗೊಳಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಮತದಾರರನ್ನು ಸೆಳೆಯಬಲ್ಲ ನಾಯಕ ಅಲ್ಲ. ಅವರೇನಿದ್ದರೂ ಚುನಾವಣಾ ತಂತ್ರಗಳನ್ನು ನೇಪತ್ಯದಲ್ಲಿ ರೂಪಿಸಬಲ್ಲ ಚತುರ. ಗೆದ್ದರಷ್ಟೇ ಅವರಿಗೆ ಕೆಲ ಮಾಧ್ಯಮಗಳಿಂದ ಚಾಣಕ್ಯನೆಂಬ ತುತ್ತೂರಿ. ಸೋತರೆ ಅವರೂ ಹೊಣೆಗಾರರಲ್ಲ. ಇವೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದಾಗ ಅನ್ನಿಸುವುದು ಮತ್ತೊಮ್ಮೆ ಮುಖ್ಯ ಮಂತ್ರಿ ಸ್ಥಾನ ಕನಸು ಕಾಣುತ್ತಿರುವ ಬಿ.ಎಸ್.ಯಡಿಯೂರಪ್ಪ 'ಹರಕೆಯ ಕುರಿ'ಯಾಗುತ್ತಾರೆಯೇ ಹೊರೆತು ಮತ್ತೊಮ್ಮೆ ಅವರು ಮುಖ್ಯಮಂತ್ರಿ ಆಗುವುದು ಕಷ್ಟ. 

-ಎಸ್.ಆರ್.ವೆಂಕಟೇಶ ಪ್ರಸಾದ್


ಸಂಬಂಧಿತ ಟ್ಯಾಗ್ಗಳು

B.S.Yeddyurappa cm candidate ತುತ್ತೂರಿ ಹರಕೆಯ ಕುರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ