ಚುನಾವಣಾ ಪ್ರಚಾರ: ತಾರೆಯರ ದಂಡು

karnataka election and star campaign

19-04-2018

ಬೆಂಗಳೂರು: ಚುನಾವಣೆ ಪ್ರಚಾರಕ್ಕೂ ಚಲನಚಿತ್ರ ನಟ-ನಟಿಯರಿಗೂ ಅವಿನಾಭಾವ ಸಂಬಂಧ. ಚುನಾವಣೆ ಘೋಷಣೆಯಾಗುತ್ತಿದಂತೆ ತಾರಾ ಪ್ರಚಾರಕರ ಪಟ್ಟಿ ಸಿದ್ಧವಾಗುತ್ತದೆ. ಆಯಾ ಪಕ್ಷಗಳ ಪ್ರಮುಖ ನಾಯಕರ ಜೊತೆಗೆ ಪಕ್ಷದ ಪರ ಇರುವ ಖ್ಯಾತ ಚಲನಚಿತ್ರ ನಟ-ನಟಿಯರು ಆ ಪಟ್ಟಿ ಸೇರಿಕೊಳ್ಳುತ್ತಾರೆ. ನಟ-ನಟಿಯರಿಂದ ಅಭ್ಯರ್ಥಿಗಳಿಗೆ ಓಟು ಲಭಿಸುತ್ತವೋ ಇಲ್ಲವೋ, ಜನರಿಗಂತೂ ತಮ್ಮ ನೆಚ್ಚಿನ ನಟ-ನಟಿಯರನ್ನು ಕಣ್ಣು ತುಂಬಿಕೊಳ್ಳುವ ಸದಾವಕಾಶವಂತೂ ನಿರಾಯಾಸವಾಗಿ ದೊರೆಕುತ್ತದೆ.

ತೆಲುಗು ಭಾಷಿಕರು ಅಧಿಕ ಸಂಖ್ಯೆಯಲ್ಲಿರುವ ರಾಜ್ಯದ ಗಡಿ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಮತಯಾಚನೆಗಾಗಿ ಟಾಲಿವುಡ್ ನಾಯಕರು ಮತ್ತು ಅಲ್ಲಿನ ಹಿರಿಯ ರಾಜಕಾರಣಿಗಳನ್ನು ಕರೆತರಲು ಬಿಜೆಪಿ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಸಿದ್ಧತೆ ನಡೆಸಿವೆ.

ಗಡಿ ಭಾಗದ ಪ್ರದೇಶಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ, ಯಾದಗಿರಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಪಾವಗಡ ಭಾಗದಲ್ಲಿ ತೆಲುಗು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತೆಲುಗು ನಟ-ನಟಿಯರು ಮತ್ತು ರಾಜಕಾರಣಿಗಳ ದಂಡು ಪ್ರಚಾರಕ್ಕೆ ಬರಲಿದೆ.

ತೆಲುಗು ಮೆಗಾಸ್ಟಾರ್ ಚಿರಂಜೀವಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರಲಿದ್ದರೆ, ತೆಲುಗಿನ ಮತ್ತೊಬ್ಬ ಸೂಪರ್ ಸ್ಟಾರ್ ಪವನ್ ಕಲ್ಯಾಣ್ರನ್ನು ಕರೆತರಲು ಬಿಜೆಪಿ ಪ್ರಯತ್ನ ನಡೆಸಿದೆ. ಪವನ್ ಕಲ್ಯಾಣ್ ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪರವಾಗಿ ಬಳ್ಳಾರಿ, ರಾಯಚೂರು, ಯಾದಗಿರಿ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಚಾರ ಕೈಗೊಂಡಿದ್ದರು. ಕನಸಿನ ಕನ್ಯೆ ಹೇಮಮಾಲಿನಿ ಹಾಗೂ ಅನುಪಮ್ ಖೇರ್ ಸಹ ಬಿಜೆಪಿ ಪರ ಫೀಲ್ಡಿಗಿಳಿಯುವ ಸಾಧ್ಯತೆಗಳಿವೆ.

ಇತ್ತೀಚಿಗೆ ಜಾತ್ಯತೀತ ಜನತಾದಳ ಅಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ದೇಶದಲ್ಲಿ ತೃತೀಯ ರಂಗ ರಚನೆ ಬಗ್ಗೆ ಸಮಾಲೋಚನೆ ನಡೆಸಿದ್ದ ತೆಲಂಗಾಣ ಮುಖ್ಯಮಂತ್ರಿ  ಕೆ.ಚಂದ್ರ ಶೇಖರ್ ರಾವ್ ಜೆಡಿಎಸ್ ಪರ ಪ್ರಚಾರಕ್ಕೆ ಬರುವ ನಿರೀಕ್ಷೆ ಇದೆ. ನಟ ದೊಡ್ಡಣ್ಣ ಈಗಾಗಲೇ ಜೆಡಿಎಸ್ ನಿಂದ ಸ್ಪರ್ಧಿಸಿರುವ ತಮ್ಮ ಅಳಿಯ ವೀರೇಂದ್ರ ಪರ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಟೀಕಾ ಪ್ರಹಾರ ನಡೆಸಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯಕ್ಕೆ ಬರುವ ಸಾಧ್ಯತೆ ಇದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಆಂಧ್ರಪ್ರದೇಶದ ಉಪ ಮುಖ್ಯ ಮಂತ್ರಿ ಕೆ.ಇ.ಕೃಷ್ಣಮೂರ್ತಿ "ಬಿಜೆಪಿ ಸುಳ್ಳು ಹೇಳುವ ಪಕ್ಷವಾಗಿದೆ. ಬಿಜೆಪಿಯ ಯಾವ ಅಭ್ಯರ್ಥಿಗಳಿಗೂ ಮತ ಹಾಕಬೇಡಿ" ಎಂದು ಬಹಿರಂಗವಾಗೇ ಹೇಳಿಕೆ ನೀಡಿದ್ದರು.

ಬೆಂಗಳೂರು, ಕೆಜಿಎಫ್ ಹಾಗು ಚಾಮರಾಜನಗರ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವ ತಮಿಳು ಭಾಷೆಯ ಮತದಾರರ ಮತ ಸೆಳೆಯಲು ಬಹುಭಾಷಾ ನಟಿ ಖುಷ್ಬೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆಗೆ ಬರಲಿದ್ದಾರೆ. ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಸಹ ಕಾಂಗ್ರೆಸ್ ಪರ ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪರ ಚಲನಚಿತ್ರ ನಟ ನಟಿಯರಾದ ರಮ್ಯಾ, ಜಯಮಾಲಾ, ಭಾವನಾ, ಮಾಲಾಶ್ರೀ, ಉಮಾಶ್ರೀ, ಶಶಿಕುಮಾರ್, ಸಾಧುಕೋಕಿಲ ಪ್ರಚಾರಕ್ಕಿಳಿಯಲಿದ್ದಾರೆ.

ನಟ ಸುದೀಪ್ ನಡೆ ಬಹಿರಂಗವಾಗಬೇಕಿದೆ. ಇತ್ತೀಚಿಗೆ ಸುದೀಪ್ ಎರಡು ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರನ್ನ ಭೇಟಿ ಮಾಡಿದ್ದರು. ಸುದೀಪ್, ರಾಜಕೀಯ ಪ್ರವೇಶಕ್ಕಾಗಿ ಸೂಕ್ತ ಕಾಲ ಎದುರು ನೋಡುತ್ತಿರುವಂತಿದೆ. ಇನ್ನೊಂದೆಡೆ ನಟ ಸುದೀಪ್ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೂ ಆಪ್ತರೆ. ಹಾಗಾಗಿ, ಸುದೀಪ್ ಯಾರ ಪರ ಚುನಾವಣಾ ಪ್ರಚಾರಕ್ಕಿಳಿಯುವರುಎನ್ನುವುದು ಸದ್ಯದ ಕುತೂಹಲ.

ನಟ ದರ್ಶನ್ ಗೆ ಪಕ್ಷಗಳ ಹಂಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಕಾಂಗ್ರೆಸ್ ಹಾಗು ಬಿಜೆಪಿ ಎರಡೂ ಪಕ್ಷಗಳ ಪರ ಪ್ರಚಾರ ನಡೆಸಿದ್ದರು. ಯಾವ ಪಕ್ಷದ ಸ್ನೇಹಿತರು ಕರೆದರೂ ಅವರ ಪರ ಪ್ರಚಾರ ನಡೆಸುವೆ ಎಂದಿದ್ದರು. ಈ ಬಾರಿ ದರ್ಶನ್ ಯಾರ ಪರ ಪ್ರಚಾರ ನಡೆಸುವರು ಅನ್ನುವುದನ್ನು ನೋಡಬೇಕಿದೆ.


ಸಂಬಂಧಿತ ಟ್ಯಾಗ್ಗಳು

election campain stars ನಟ ದರ್ಶನ್ ಬಹುಭಾಷಾ ನಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ