ಫೇಸ್‌ಬುಕ್‌ ನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ

basava jayanthi siddaramaiah wishes in facebook

18-04-2018

ಕರ್ನಾಟಕದ ಸಮಸ್ತ ಬಂಧುಗಳಿಗೆ ಬಸವಣ್ಣನ ಜಯಂತಿಯ ಹಾರ್ದಿಕ ಶುಭಾಶಯಗಳು. ನಾನು ಬಸವಣ್ಣನವರ ಹುಟ್ಟು ಅನುಯಾಯಿ, ಹನ್ನೆರಡನೆ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪ್ರತಿಪಾದಿಸಿದ ಬಸವಣ್ಣನವರು ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ನನಗೆ ವೈಚಾರಿಕ ಗುರು.

ಬಸವಣ್ಣನ ಜಯಂತಿಯ ದಿನವೇ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಈ ನಿರ್ಧಾರ ಕಾಕತಾಳೀಯವಲ್ಲ, ಉದ್ದೇಶಪೂರ್ವಕವಾದುದು. ಆ ದಿನ ಬಸವಣ್ಣನವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತೇನೆ ಎಂದು ನನ್ನ ಮನಸ್ಸಿನೊಳಗೆ ಪ್ರಮಾಣ ಮಾಡಿದ್ದೆ. ಅದರಂತೆ ಬಸವಣ್ಣನವರ ತತ್ವದ ದಾರಿಯಲ್ಲಿಯೇ ನಮ್ಮ ಸರ್ಕಾರ ಸಾಗುತ್ತಿದೆ. ಈ ಜಾಗೃತಿ ನಮ್ಮ ಸರ್ಕಾರದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರಬೇಕೆಂಬ ಉದ್ದೇಶದಿಂದಲೇ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕೆಂದು ಆದೇಶಿಸಿದ್ದೇನೆ.

ಭಾರತದ ಇತಿಹಾಸದಲ್ಲಿ ಹನ್ನೆರಡನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಅರಸ ಬಿಜ್ಜಳನಿಗೆ ಹಣಕಾಸು ಸಚಿವರಾಗಿದ್ದ ಬಸವಣ್ಣನವರು, ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶವೆಂದು ನಾನು ನಂಬಿದ್ದೇನೆ.

ಕಾಯಕ ಮತ್ತು ದಾಸೋಹ ನನ್ನ ಇಷ್ಟದ ಬಸವಣ್ಣನನವರ ತತ್ವದ ಮೂಲಧಾತುಗಳು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಸಂಪತ್ತಿನ ಉತ್ಪಾದನೆಯ ಶಕ್ತಿ ಎಲ್ಲರದ್ದಾಗಬೇಕು, ಅದರ ವಿತರಣೆ ಸಮನಾಗಿ ನಡೆಯಬೇಕು ಎಂದು ಬಸವಣ್ಣನವರ ಆಶಯವಾಗಿತ್ತು. ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಇಷ್ಟೊಂದು ಸರಳವಾಗಿ ವಿಶ್ಲೇಷಿಸುವುದು ಸಾಧ್ಯ ಇಲ್ಲ.

ಅಣ್ಣನ ಅನ್ನದಾಸೋಹದ ಸಂದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯಾದ ಮರುಗಳಿಗೆಯಲ್ಲಿಯೇ ‘ಅನ್ನಭಾಗ್ಯ’ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ಕೈಗೊಂಡೆ. ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಮೂಲಕ ಹಾಲು, ಇಂದಿರಾ ಕ್ಯಾಂಟೀನ್, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆಗಳು ಬಸವಣ್ಣನವರ ಅನ್ನದಾಸೋಹದ ಚಿಂತನೆಯಿಂದಲೇ ಪ್ರೇರಿತವಾದುದು.

ಬಸವಣ್ಣನವರ ಜ್ಞಾನದಾಸೋಹ ಕೂಡಾ ನಮ್ಮ ಸರ್ಕಾರದ ಕಾರ್ಯಕ್ರಮದ ಭಾಗವಾಗಿದೆ. ಮಕ್ಕಳಿಗೆ ಹಾಲು-ಅನ್ನದ ಜತೆಯಲ್ಲಿ 61 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್ ನೀಡಲಾಗುತ್ತಿದೆ. ಕಳೆದ ಐದುವರ್ಷಗಳಲ್ಲಿ ಸುಮಾರು 8000 ಪ್ರಾಥಮಿಕ ಮತ್ತು 1700 ಹೈಸ್ಕೂಲ್ ಶಿಕ್ಷಕಕರನ್ನು ನೇಮಕಮಾಡಲಾಗಿದೆ. ಇದರ ಜತೆ ಹಾಸ್ಟೆಲ್ ಸೌಲಭ್ಯ ವಂಚಿತರಿಗೆ ‘ವಿದ್ಯಾಸಿರಿ’, ವಿದೇಶದಲ್ಲಿ ವ್ಯಾಸಂಗಕ್ಕೆ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಯರಿಗೆ ಒಂದನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ವ್ಯಾಸಂಗದವರೆಗೆ ಉಚಿತ ಶಿಕ್ಷಣ- ಇವೆಲ್ಲವೂ ನಮ್ಮ ಸರ್ಕಾರ ಜ್ಞಾನದಾಸೋಹಕ್ಕೆ ನೀಡಿರುವ ಮಹತ್ವವನ್ನು ಸಾರುತ್ತದೆ. ಅಣ್ಣನ ವೈಚಾರಿಕ ಜಾಗೃತಿಯ ಆಶಯಕ್ಕೆ ಅನುಗುಣವಾಗಿಯೇ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂದು ಬಸವಣ್ಣ ಬಯಸಿದ್ದರು. ಕಳೆದ ಐದು ವರ್ಷಗಳ ಅವಧಿಯ ನಮ್ಮ ಸರ್ಕಾರದ ಯೋಜನೆಗಳತ್ತ ಕಣ್ಣು ಹಾಯಿಸಿದರೆ ಬಸವಣ್ಣನ ಆಶಯಗಳ ಪ್ರಭಾವ ಪ್ರತಿಯೋಜನೆಯಲ್ಲಿಯೂ ಕಾಣಬಹುದು.

ಬಡತನ ನಿವಾರಣೆ, ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿಗೆ ನಮ್ಮ ಸರ್ಕಾರ ಆದ್ಯತೆ ನೀಡಿ ಅಭಿವೃದ್ಧಿಯ ಜೊತೆಯಲ್ಲಿ ಸಾಮಾಜಿಕ ನ್ಯಾಯವನ್ನು ಬೆಸೆಯುವ ನಮ್ಮ ‘’ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ಇಡೀ ದೇಶ ಚರ್ಚಿಸುತ್ತಿದೆ. ಬಸವಣ್ಣ ಎಂಬ ಜ್ಞಾನಭಂಡಾರದ ಮಾರ್ಗದರ್ಶನ ಇಲ್ಲದೆ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ಕನ್ನಡ ಭಾಷೆಯ ಬಗೆಗಿನ ನಮ್ಮ ಸರ್ಕಾರದ ಬದ್ಧತೆಗೂ ಬಸವಣ್ಣನೇ ಪ್ರೇರಕ ಶಕ್ತಿ. ಬಸವಣ್ಣನವರು ಕನ್ನಡವನ್ನು ಅಂದಿನ ಧರ್ಮದ ಭಾಷೆಯಾಗಿ, ವಿಚಾರದ ಭಾಷೆಯಾಗಿ, ಸಂವಹನದ ಭಾಷೆಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬೆಲೆ ಕಟ್ಟಲಾರದ್ದು. ಹಾಗೆ ನೋಡಿದರೆ ಕನ್ನಡ ಮಾಧ್ಯಮ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದೇ ಹನ್ನೆರಡನೇ ಶತಮಾನದಲ್ಲಿ ಎನ್ನುವುದು ಆಶ್ಚರ್ಯದ ಸಂಗತಿಯಾದರೂ ವಾಸ್ತವ.

ಅನ್ನದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ರಾಜ್ಯದ ಲಿಂಗಾಯತ ಮಠಗಳು ನಾಡಿನ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತಿರುವುದನ್ನು ಕೂಡಾ ನಾನು ಕೃತಜ್ಞತಾ ಭಾವದಿಂದ ಸ್ಮರಿಸುತ್ತೇನೆ. ಬಡತನ ಮತ್ತು ಅಜ್ಞಾನದ ನಿವಾರಣೆಯಲ್ಲಿ ಈ ಮಠಗಳು ವಿಶೇಷ ಪಾತ್ರವಹಿಸಿವೆ. ಶಿಕ್ಷಣ ಪ್ರಸಾರಕ್ಕೆ ಧಾರ್ಮಿಕ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದುದು.

ಬಸವಣ್ಣನ ಜಯಂತಿಯ ದಿನ ನಾವೆಲ್ಲರೂ ಮತ್ತೊಮ್ಮೆ ಬಸವಣ್ಣನವರ ತತ್ವ-ಸಿದ್ಧಾಂತದ ಮನನ ಮಾಡಿಕೊಳ್ಳೋಣ, ಬಸವಣ್ಣ ನುಡಿದಂತೆ ನಾವು ನಡೆಯೋಣ. ಸಮ ಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಕಂಡ ಕನಸನ್ನು ಸಾಕಾರಗೊಳಿಸಲು ಒಂದಾಗಿ ಕೈಜೋಡಿಸೋಣ.


ಸಂಬಂಧಿತ ಟ್ಯಾಗ್ಗಳು

siddaramaiah Basavanna ಸಮಾಜ ಅಜ್ಞಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ