ಕಳ್ಳತನ ಪ್ರಕರಣ: ಬೆಂಗಳೂರು ಟು ರಾಜಸ್ಥಾನ

Theft case: Bangalore to Rajasthan

18-04-2018

ಬೆಂಗಳೂರು: ಯಲಹಂಕದ ನ್ಯಾಯಾಂಗ ಬಡಾವಣೆಯ ಅರಣ್ಯಇಲಾಖೆ ಅಧಿಕಾರಿಯೊಬ್ಬರ ಮನೆಗೆ ನುಗ್ಗಿ ಚಿನ್ನ, ವಜ್ರ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಯಲಹಂಕ ಪೊಲೀಸರು 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿ ರಾಮನಗರ ಜೈಲಿನಲ್ಲಿದ್ದ ರಾಜಸ್ಥಾನದ ಅಜ್ಮೀರ್ ನ ರಾಮ್‍ಸಿಂಹ ಅಲಿಯಾಸ್ ರಾಮ್‍ಸಿಂಗ್ (19) ಹಾಗೂ ರೋಕಿ (19) ಎಂಬುವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅರಣ್ಯ ಇಲಾಖಾಧಿಕಾರಿ ಶ್ರೀನಾಥ್ ಅವರ ಮನೆಯಲ್ಲಿ ನಡೆಸಿದ್ದ ಕಳ್ಳತನ ಕೃತ್ಯವನ್ನು ಬಾಯ್ಬಿಟ್ಟಿದ್ದು, ಆರೋಪಿಗಳಿಂದ 15ಲಕ್ಷ ಮೌಲ್ಯದ 521 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಸಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಕಳೆದ 2017ರ ಜೂ. 22 ರಂದು ಹಾಡಹಗಲೇ ಶ್ರೀನಾಥ್ ಅವರ ಮನೆಗೆ ಬೀಗ ಮುರಿದು ಒಳ ನುಗ್ಗಿದ ಆರೋಪಿಗಳು 550 ಗ್ರಾಂ ಚಿನ್ನ, ವಜ್ರದ ಕಲ್ಲುಗಳು, 5 ಸಾವಿರ ನಗದು ದೋಚಿ ಪರಾರಿಯಾಗಿ ಆಭರಣಗಳನ್ನು ರಾಜಸ್ಥಾನಕ್ಕೆ ಕೊಂಡೊಯ್ದು ಅಜ್ಮೀರ್ ನಲ್ಲಿ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದರು.

ನಾಲ್ಕೈದು ತಿಂಗಳ ನಂತರ ಮತ್ತೆ ರಾಜ್ಯಕ್ಕೆ ಬಂದಿದ್ದ ಆರೋಪಿಗಳು, ರಾಮನಗರದಲ್ಲಿ ಕಳ್ಳತನ ಕೃತ್ಯ ನಡೆಸುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದು ಪೊಲೀಸರ ಬಂಧನಕ್ಕೊಳಗಾಗಿದ್ದರು.

ಅಲ್ಲಿಂದ ರಾಮನಗರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳು ಶಿಕ್ಷೆ ಅನುಭವಿಸುತ್ತಿದ್ದು, ಶ್ರೀನಾಥ್ ಅವರ ಮನೆಯಲ್ಲಿ ನಡೆದ ಕಳ್ಳತನದ ಜಾಡು ಹಿಡಿದ ಯಲಹಂಕ ಪೊಲೀಸರಿಗೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆರೋಪಿಗಳು ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿಚಾರಣೆಯಲ್ಲಿ ಆರೋಪಿಗಳು ಕಳ್ಳತನವನ್ನು ಬಾಯ್ಬಿಟ್ಟಿದ್ದು, ಅವರನ್ನು ಅಜ್ಮೀರ್ ಗೆ ಕರೆದೊಯ್ದು ಅಲ್ಲಿ ಮಾರಾಟ ಮಾಡಿದ್ದ ಆಭರಣಗಳನ್ನು ವಶಕ್ಕೆ ತೆಗೆದುಕೊಂಡು ಬರಲಾಗಿದೆ. ಆರೋಪಿಗಳು ನ್ಯಾಯಾಧೀಶರ ಮುಂದೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಾಟಕ ಮಾಡಿದರಾದರೂ ಪೊಲೀಸರ ಸತತ ಶ್ರಮ ನಡೆಸಿದರು. ಅಲ್ಲದೆ ಅಜ್ಮೀರ್ನಲ್ಲಿ ಆಭರಣವನ್ನು ವಶಪಡಿಸಿಕೊಳ್ಳುವಾಗ ಸ್ಥಳೀಯರ ವಿರೋಧ ಕಂಡು ಬಂದಿದ್ದು, ಅದನ್ನು ಎದುರಿಸಿ ಇನ್ಸ್ಪೆಕ್ಟರ್  ಮಂಜೇಗೌಡ ಮತ್ತವರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿತು ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣ ಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rajasthan forest ಅಜ್ಮೀರ್ ಇನ್ಸ್ಪೆಕ್ಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ