ಕುಮಾರ ಸ್ವಾಮಿಯ ಎಚ್ಚರಿಕೆ ನಡೆ

H.D kumaraswamy and rebels of other parties

18-04-2018

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್‍ನಿಂದ ಟಿಕೆಟ್ ವಂಚಿತರ ದಂಡು ಇದೀಗ ಜೆಡಿಎಸ್‍ಗೆ ವಲಸೆ ಬರಲು ಮುಂದಾಗಿದ್ದು, ಇದರಿಂದಾಗಿ ಜಾತ್ಯತೀತ ಜನತಾದಳ ವಲಸಿಗರಿಗೆ ತಾಣವಾಗಿ ಪರಿಣಮಿಸಿದೆ.

ಇದನ್ನು ಮನಗಂಡಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ, ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದು, ವಲಸಿಗರಲ್ಲಿ ಅರ್ಹರಿಗೆ ಮಾತ್ರ ಮಣೆ ಹಾಕಲು ತೀರ್ಮಾನಿಸಿದ್ದಾರೆ. ಟಿಕೆಟ್ ದೊರೆಯದ ಕಾರಣ ಎರಡು ಮೂರು ದಿನಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಬಂಡಾಯ, ಭಿನ್ನಮತ, ಅಸಮಾಧಾನ ಸ್ಪೋಟಗೊಂಡಿದೆ. ಇದರ ಪರಿಣಾಮ ಭಾರೀ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೊಂದರೆಯಾಗದಂತೆ ವಲಸಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಡಲು ನಿರ್ಧರಿಸಿದ್ದಾರೆ.

ಮೊದಲ ಹಂತದಲ್ಲಿ ಬೆಂಗಳೂರು ಮಹಾನಗರದಲ್ಲಿ ಬಿಜೆಪಿಯಿಂದ ಟಿಕೆಟ್ ದೊರೆಯದ ಪಿ.ರಮೇಶ್, ಹೇಮಚಂದ್ರ ಸಾಗರ್, ರಾಮಚಂದ್ರ, ಚಿತ್ರನಟಿ ಅಮೂಲ್ಯ, ಹನುಮಂತರಾಯಪ್ಪ ದೇವೇಗೌಡರ ಸಮ್ಮುಖದಲ್ಲಿ ಪಕ್ಷ ಸೇರಿದರು.

ಕಾಂಗ್ರೆಸ್ ಹಾಗೂ ಬಿಜೆಪಿಯ ಟಿಕೆಟ್ ಆಕಾಂಕ್ಷಿತರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಟಿಕೆಟ್ ಸಿಗದಿರುವ ಹಲವರು ಇದುವರೆಗೂ ಟಿಕೆಟ್ ಸಿಗುವ ಭರವಸೆ ಹೊಂದಿದ್ದವರು ನಿರಾಸೆಗೆ ಒಳಗಾಗಿದ್ದಾರೆ.

ತುಮಕೂರು ನಗರದ ಸೊಗಡು ಶಿವಣ್ಣ, ಮುಳಬಾಗಿಲಿನ ಹಾಲಿ ಶಾಸಕ ಎಂ.ನಾರಾಯಣಸ್ವಾಮಿ, ಗದಗ್‍ನ ಶ್ರೀಶೈಲಪ್ಪ ಬಿದರೂರು ಜೆಡಿಎಸ್ ಮುಖಂಡರ ಸಂಪರ್ಕದಲ್ಲಿದ್ದಾರೆ. ಹಾಗೆಯೇ ಕಾಂಗ್ರೆಸ್‍ನ ಟಿಕೆಟ್ ಕೈ ತಪ್ಪಿರುವ ಎಂ.ವೈ.ಗೋಪಾಲಕೃಷ್ಣ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ಟಿಕೆಟ್ ವಂಚಿತರ ನಡೆ ಯಾವ ಕಡೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗಬೇಕಿದೆ.

ಬಿಜೆಪಿಯಲ್ಲೂ ಈಗಾಗಲೇ ಎರಡು ಪಟ್ಟಿ ಬಿಡುಗಡೆಯಾಗಿದ್ದು, ಮತ್ತೊಂದು ಪಟ್ಟಿ ಬಿಡುಗಡೆ ಕಾಲ ಸನ್ನಿಹಿತವಾಗಿದೆ. ಈ ಎರಡೂ ಪಕ್ಷಗಳಲ್ಲೂ ಸ್ಪರ್ಧಿಸಲಿಚ್ಛಿಸಿದ ಹಲವರು ಟಿಕೆಟ್ ಸಿಗದಿರುವುದರಿಂದ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಹಾಗಾಗಿ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಕೊಡುವ ಭರವಸೆ ನೀಡಿದರೆ ಪಕ್ಷಕ್ಕೆ ಬರುವುದಾಗಿ ಹೇಳುತ್ತಿರುವವರು ಕೆಲವರಾದರೆ, ಮತ್ತೆ ಕೆಲವರು ಜೆಡಿಎಸ್ ನಾಯಕರೊಂದಿಗೂ ಮಾತುಕತೆಗೆ ಮುಂದಾಗಿದ್ದಾರೆ.

ಒಂದೆರಡು ದಿನಗಳಲ್ಲಿ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ ಜೆಡಿಎಸ್ ಸೇರ್ಪಡೆಗೊಳ್ಳುವವರ ಪಟ್ಟಿಯೂ ಬೆಳೆಯಲಿದೆ.  ಒಟ್ಟಾರೆ ಪಕ್ಷಾಂತರ ಪರ್ವ ಇನ್ನೂ ಮುಂದುವರೆದಿದ್ದು, ಟಿಕೆಟ್ ಹಂಚಿಕೆ ನಂತರವೂ ಸ್ಪರ್ಧಾಕಾಂಕ್ಷಿಗಳು ಜೆಡಿಎಸ್‍ನೊಂದಿಗೆ ಸೇರಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದ್ದು, ಪಕ್ಷಕ್ಕೆ ಹಲವಾರು ಹಿರಿಯ ಮುಖಂಡರು ಶೀಘ್ರದಲ್ಲೇ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ಕೇವಲ ಗ್ರಾಮೀಣ ಪ್ರದೇಶಕ್ಕೆ ಮಾತ್ರವಲ್ಲದೆ, ನಗರ ಪ್ರದೇಶದಲ್ಲೂ ತನ್ನ ಸಾಮರ್ಥ್ಯ ಸಾಬೀತು ಪಡಿಸಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

H.D.kumara swamy candidates ಗ್ರಾಮೀಣ ಚಿತ್ರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ