ರಾಜ್ಯ ಚುನಾವಣೆ: ಪ್ರಧಾನಿ ಮೋದಿ ನಿರಾಸಕ್ತಿ-ಉದ್ದೇಶಪೂರ್ವಕ ನಡೆ?

State Election: Prime Minister Narendra Modi

17-04-2018

ಬೆಂಗಳೂರು: ಈ ಬೆಳವಣಿಗೆ ವಿಚಿತ್ರ ಹಾಗೂ ನಿಗೂಢ ಅನ್ನಿಸುತ್ತಿಲ್ಲವೇ?ಉದ್ದೇಶ ಪೂರ್ವಕ ಪೂರ್ವ ನಿರ್ಧಾರಿತ ನಡೆ ಎನ್ನಿಸುವುದಿಲ್ಲವೇ? 2014ರಲ್ಲಿ ಪ್ರಧಾನ ಮಂತ್ರಿಯಾದ ನಂತರ ದೇಶದಲ್ಲಿ ನಡೆದ ಎಲ್ಲಾ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭಾ ಉಪ ಚುನಾವಣೆ ಸಂದರ್ಭಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿರುವ ನರೇಂದ್ರ ಮೋದಿ (ಸಾಮಾನ್ಯವಾಗಿ ಭಾರತದ ಪ್ರಧಾನ ಮಂತ್ರಿಗಳಾರೂ ರಾಜ್ಯಗಳ ವಿಧಾನ ಸಭೆ ಹಾಗೂ ಲೋಕಸಭಾ ಉಪ ಚುನಾವಣೆ ಸಂದರ್ಭಗಳಲ್ಲಿ ನರೇಂದ್ರ ಮೋದಿ ಅವರಷ್ಟು ವ್ಯಾಪಕ ಮತ್ತು ಬಿರುಸಿನ ಪ್ರಚಾರ ಕೈಗೊಂಡ ಉದಾಹರಣೆ ಗಳಿಲ್ಲ) ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಅತ್ಯಂತ ಮುಖ್ಯವಾದ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತಮ್ಮ ಎಂದಿನ ಉತ್ಸಾಹ ತೋರಿಸುತ್ತಿಲ್ಲ ಯಾಕೆ?

ಮೊದಲಿಗೆ ಅಂದರೆ, ಕಳೆದ ವಾರದ ವೇಳೆಯಲ್ಲಿ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಯಾವಾಗಿನಿಂದ ಆರಂಭ ಎಂಬ ಕುತೂಹಲದಿಂದ ಇದ್ದಾಗ ರಾಜ್ಯ ಬಿಜೆಪಿ ಮೂಲಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ‌ರಾಜ್ಯಾದ್ಯಂತ ಪ್ರಚಾರ ಆರಂಭಿಸುವರು ಎಂದು ಹೇಳಿದ್ದವು. ಆದರೆ, ಏಪ್ರಿಲ್ 16ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯಲ್ಲಿ, ಬಹು ನಿರೀಕ್ಷಿತ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಈ ತಿಂಗಳ ಕೊನೆಯಿಂದ ಆರಂಭವಾಗಲಿದೆ ಎಂದಿದ್ದಾರೆ.

ಈಗಿನ ಮಾಹಿತ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ 29ರಿಂದ ರಾಜ್ಯ ಪ್ರವಾಸ ಆರಂಭಿಸಿ 16ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವರು.

ಮುರಳೀಧರರಾವ್ ಅವರ ಹೇಳಿಕೆ ಪ್ರಕಾರವೇ, ' ನರೇಂದ್ರ ಮೋದಿ ಅವರ ಚುನಾವಣಾ ರ‍್ಯಾಲಿಗಳಿಗಾಗಿ ರಾಜ್ಯಾದ್ಯಂತ ಭಾರೀ ಬೇಡಿಕೆ ಇದೆ. ಅವರ ಪ್ರವಾಸ ಕಾರ್ಯಕ್ರಮ ಸಧ್ಯದಲ್ಲೇ ಅಂತಿಮ ಗೊಳ್ಳಲಿದೆ'.

ಪ್ರಧಾನಿ ನರೇಂದ್ರ ಮೋದಿ, ಇಂದಿರಾಗಾಂಧಿ ನಂತರ ದೇಶ ಕಂಡ ಅತ್ಯಂತ ಪ್ರಭಾವ ಶಾಲಿ ಹಾಗು ಬಲಿಷ್ಠ ನಾಯಕ. ಅಷ್ಟೇ ಅಲ್ಲ, 2014 ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಪ್ರಮುಖ ರೂವಾರಿ. ಹೀಗಿದ್ದೂ, ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾಕೀ ಎಚ್ಚರದ ನಿಗೂಢ ನಡೆ. ಇದು ಉದ್ದೇಶ ಪೂರ್ವಕವೋ ಮುನ್ನೆಚ್ಚರಿಕೆ ನಡೆಯೋ ಕಾಲವೇ ಹೇಳಬೇಕು.

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು 2019ರ ಲೋಕಸಭಾ ಚುನಾವಣೆ ಪೂರ್ವದ ಸೆಮಿಫೈನಲ್ ಎಂದೇ ಬಣ್ಣಿಸಲಾಗುತ್ತಿದೆ. ಈ ಸೆಮಿಫೈನಲ್ ನಲ್ಲಿ  ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ತಮ್ಮ ಜನಪ್ರಿಯತೆಯ ಹುಳುಕು ಬಹಿರಂಗ ಗೊಳ್ಳುವುದೆಂಬ ಆತಂಕ ಪ್ರಧಾನಿ ಮೋದಿ ಅವರನ್ನ ಕಾಡುತ್ತಿರಬಹುದೆ? ನಾವು ಈವರೆಗೆ ಕಂಡಂತಹ ಪ್ರಧಾನಿ ಮೋದಿ ಆಗಿದ್ದರೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ತಮ್ಮೆಲ್ಲ ಸಂಪನ್ಮೂಲ,ಶಕ್ತಿ ಹಾಗೂ ಜನಪ್ರಿಯತೆಯನ್ನು ಪಣಕ್ಕೊಡ್ಡುತ್ತಿದ್ದರು.ಆದರೆ, ಈಗ ಅವರು ಈ ಎಲ್ಲವನ್ನೂ ಅತೀವ ಎಚ್ಚರ ಮತ್ತು ಲೆಕ್ಕಾಚಾರದ ಮೂಲಕ 2019ರ ಲೋಕಸಭಾ ಚುನಾವಣೆವರೆಗೆ ಕಾಪಿಟ್ಟು ಕೊಳ್ಳಲು ನಿರ್ಧರಿಸಿರುವಂತಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಈಗಾಗಲೇ ಆರು ಸುತ್ತು ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿದ್ದಾರೆ. ಮತ್ತೊಂದು ಪ್ರಚಾರ ಪ್ರವಾಸ ಕಾರ್ಯಕ್ರಮ ಸಿದ್ಧಗೊಂಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ, 'ಕರುನಾಡ ಯಾತ್ರೆ' ಹೆಸರಿನಲ್ಲಿ ರಾಜ್ಯದಾದ್ಯಂತ ಹತ್ತಕ್ಕೂ ಹೆಚ್ಚು ಸಭೆ ನಡೆಸಿದ್ದು ,ಮಠಗಳಿಗೆ ಭೇಟಿ ನೀಡಿದ್ದಾರೆ. ಇಂದಿನಿಂದ ಮತ್ತೊಂದು ‌ಚುನಾವಣಾ ಪ್ರಚಾರ ಪ್ರವಾಸ ಆರಂಭಿಸಿದ್ದಾರೆ.

ಜಾತ್ಯತೀತ ಜನತಾದಳ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹಾಗು ಅವರ ಪುತ್ರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಒಂದು ಹಂತದ ಪ್ರಚಾರ ಕಾರ್ಯ ಪೂರ್ಣ ಗೊಳಿಸಿದ್ದು, ಬಿ.ಎಸ್.ಪಿ ಅಧ್ಯಕ್ಷೆ ಮಾಯಾವತಿ ಬಂದು ಹೋಗಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ತುರುಸಿನ ಹಣಾಹಣಿಗೆ ಸಾಕ್ಷಿಯಾಗುತ್ತಿದೆ. ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳೂ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಬಿಜೆಪಿ, ಕಾಂಗ್ರೆಸ್ ನಂತರದ ಸ್ಥಾನದಲ್ಲಿರಲಿದೆ ಎಂದೂ ಹೇಳಿವೆ. ಆದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಿಳಿಯುತ್ತಿಲ್ಲ ಏಕೆ? ಇದು ಕುತೂಹಲಕಾರಿ ಅಲ್ಲವೇ? ಪ್ರಧಾನಿ ನರೇಂದ್ರ ಮೋದಿ ಅವರದು ಉದ್ದೇಶ ಪೂರ್ವಕ ಕಾರ್ಯತಂತ್ರ ಅನ್ನಿಸುವುದಿಲ್ಲವೇ?


ಸಂಬಂಧಿತ ಟ್ಯಾಗ್ಗಳು

Narendra modi survey ಕಾರ್ಯತಂತ್ರ ಪ್ರಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ