ಕಳಂಕಿತರಿಗೆ ಕಾಂಗ್ರೆಸ್ ಟಿಕೆಟ್!

winning criteria and congress ticket

16-04-2018

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವೊಂದೇ ಮಾನದಂಡವಾದಂತಿದೆ. ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರನ್ನು ಜೈಲಿಗೆ ಹೋಗಿ ಬಂದವರು, ಆಕ್ರಮಗಳಲ್ಲಿ ಪಾಲ್ಗೊಂಡವರು ಎಂದು ಹೋದಲ್ಲಿ ಬಂದಲ್ಲಿ ನಿರಂತರವಾಗಿ ಜರಿಯುತ್ತಿದ್ದರೋ ಅವರಿಗೆ ಈ ಬಾರಿ ಸ್ಥಳೀಯ ನಿಷ್ಠಾವಂತರನ್ನು ಕಡೆಗಣಿಸಿ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.

ಅಶೋಕ್ ಖೇಣಿ-ಬೀದರ್ ದಕ್ಷಿಣ, ಆನಂದ್ ಸಿಂಗ್-ವಿಜಯ ನಗರ ಹಾಗೂ ಬಿ.ನಾಗೇಂದ್ರ- ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಇತ್ತೀಚಿಗೆ ತಾನೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಅಶೋಕ್ ಖೇಣಿ ವಿರುದ್ಧ ನೈಸ್ ರಸ್ತೆ ಭೂ ಕಬಳಿಕೆ ಆರೋಪ ಇದೆ. ಆ ಆರೋಪದ ತನಿಖೆಗಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ವಿಧಾನ ಮಂಡಲದ ಉಭಯ ಸದನಗಳ ಸದನ ಸಮಿತಿ ರಚಿಸಲಾಗಿತ್ತು. ಜಯಚಂದ್ರ, ಅನೇಕ ಬಾರಿ ಸರ್ಕಾರ ಅಶೋಕ್ ಖೇಣಿ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದರು. ಆದರೆ, ಅದೇ ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, ಭಾರೀ ಪ್ರತಿರೋಧದ ನಡುವೆಯೂ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ, ಆನಂದ್ ಸಿಂಗ್ ಹಾಗೂ ಬಿ.ನಾಗೇಂದ್ರ ವಿರುದ್ದ ಅಕ್ರಮ ಗಣಿಗಾರಿಕೆಯ ಆರೋಪಗಳಿವೆ. ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಲೋಕಾಯುಕ್ತರಾಗಿ ಸಿದ್ಧಪಡಿಸಿದ್ದ ವರದಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಆನಂದ್ ಸಿಂಗ್ ಹಾಗೂ ನಾಗೇಂದ್ರ ಹೆಸರುಗಳು ಪ್ರಸ್ತಾಪವಾಗಿದ್ದವು. ಆ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಹಾಗೂ ಬಿ.ನಾಗೇಂದ್ರ ಜೈಲಿಗೂ ಹೋಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಟಿಕೆಟ್ ಹಂಚಿಕೆಯ ಪ್ರಕ್ರಿಯೆ ಆರಂಭವಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, "ಈ ಶಾಸಕರ ಮೇಲಿನ ಆರೋಪಗಳಿಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಇವರ ಮೇಲೆ ಕಳಂಕ ಇರಬಹುದು. ಆದರೆ, ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಯಾವುದೇ ಹಂತದಲ್ಲೂ ಅವರ ಪರ ವಕಾಲತ್ತು ವಹಿಸುವುದಿಲ್ಲ ಎಂದು ಹೇಳಿದ್ದರು.

ಅಶೋಕ್ ಖೇಣಿ, ಆನಂದ್ ಸಿಂಗ್ ಹಾಗೂ ಬಿ.ನಾಗೇಂದ್ರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗುವಾಗಲೇ ಈ ಮೂವರಿಗೂ ಈ ಬಾರಿ ಟಿಕೆಟ್ ಖಚಿತ ಎಂದು ಮಾಡಿದ್ದ ಊಹೆ ಈಗ ನಿಜವಾಗಿದೆ. ಕಳಂಕಿತರು ಎಂದು ಪಟ್ಟ ಕಟ್ಟಿದವರೇ ಈಗ ಟಿಕೆಟ್ ನೀಡಿ ಪಕ್ಕದಲ್ಲಿ ಕುಳ್ಳರಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ashok kheny B.nagendra ಅಶೋಕ್ ಖೇಣಿ ವಕಾಲತ್ತು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ