ನಾಗನ ಮನೆ ಮೇಲೆ ಪೊಲೀಸರ ದಾಳಿ..ಅಪಾರ ಪ್ರಮಾಣದ ಮಾರಕಾಸ್ತ್ರಗಳ ವಶ

Kannada News

17-05-2017

ಬೆಂಗಳೂರು : ಉದ್ಯಮಿಗಳ ಅಪಹರಣ,ಸುಲಿಗೆ,ಬೆದರಿಕೆ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತನಾಗಿರುವ ರೌಡಿ ವಿ.ನಾಗರಾಜ್ ಅಲಿಯಾಸ್ ನಾಗನ ಶ್ರೀರಾಂಪುರದ ಮನೆ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.
ಶ್ರೀರಾಂಪುರದಲ್ಲಿನ ಸ್ವತಂತ್ರಪಾಳ್ಯದ ಮನೆಗೆ ನಾಗನನನ್ನು ಬೆಳಿಗ್ಗೆ ಕರೆದೊಯ್ದ ಪೊಲೀಸರು ಆತನ ಸಮ್ಮುಖದಲ್ಲೇ ದಾಳಿ ನಡೆಸಿ ಮಾರಕಾಸ್ತ್ರಗಳು ಇನ್ನಿತರ ದಾಖಲಾತಿಗಳಲ್ಲದೇ  ಅಮಾನ್ಯಗೊಂಡಿರುವ 500 ಹಾಗೂ 1000 ಮುಖಬೆಲೆಯ ನೋಟುಗಳು ದೊರೆತಿವೆ.
ಹೆಣ್ಣೂರು ಇನ್ಸ್‍ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ಪೊಲೀಸರು ನಾಗನ ಎರಡು ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ನಡೆದ ದಾಳಿಯ ವೇಳೆ ಮನೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟಿರುವ ಸ್ಥಳವನ್ನು ನಾಗನೇ ಪೊಲೀಸರಿಗೆ ತೋರಿಸಿದ್ದಾನೆ.
ನಾಗ ತೋರಿಸಿದ ಜಾಗದಲ್ಲಿದ್ದ ಮಾರಕಾಸ್ತ್ರಗಳು ಆಸ್ತಿಪಾಸ್ತಿಯ ದಾಖಲೆಗಳು ಹಳೆಯ ನೋಟುಗಳು ದೊರೆತಿದ್ದು ಅವುಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ10ರವರೆಗೆ ಪೊಲೀಸ್ ವಶದಲ್ಲಿರುವ ನಾಗನ ಅಪರಾಧ ಪ್ರಕರಣಗಳ ವಿಚಾರಣೆಯನ್ನು ನಡೆಸಿ ಸಾಕ್ಷಾಧಾರಗಳನ್ನು ಪತ್ತೆಹಚ್ಚುತ್ತಿರುವ ಪೊಲೀಸರು ನಾಗ ಮನೆಯಲ್ಲಿಯೇ ಉದ್ಯಮಿಗಳನ್ನು ಅಪಹರಿಸಿ ಕರೆತಂದು ಸುಲಿಗೆ ಮಾಡುತ್ತಿದ್ದ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.
ಮನೆಯಲ್ಲಿ ನಡೆಸುತ್ತಿದ್ದ ಉದ್ಯಮಿಗಳಿಂದ ಹಣ ವಸೂಲಿ ಪ್ರಕರಣ ಹಾಗೂ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ನಾಗ ಭಾಗಿಯಾಗಿರುವ ವಿವರಗಳನ್ನು ಸಂಗ್ರಹಿಸತೊಡಗಿದ್ದಾರೆ.ಈ ನಡುವೆ ನಾಗ ವಿಚಾರಣೆಯಲ್ಲಿ ದಿನಕ್ಕೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಅಪರಾಧ ಪ್ರರಕರಣಗಳ ನಿಖರ ಸಾಕ್ಷಾಧಾರಗಳನ್ನು ಸಂಗ್ರಹಿಸಲು ದಾಳಿ ನಡೆಸಲಾಗಿದೆ.  

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ