ಕಾಂಗ್ರೆಸ್ ಟಿಕೆಟ್: ಅದೃಷ್ಟಶಾಲಿ ಅಪ್ಪ-ಮಕ್ಕಳು

Congress Ticket and family politics

16-04-2018

ಬೆಂಗಳೂರು: ಕುಟುಂಬ ರಾಜ ಕಾರಣಕ್ಕೆ ನಾಂದಿ ಹಾಡಿದ ಕಾಂಗ್ರೆಸ್ ಪಕ್ಷದಲ್ಲಿ ಈ ಬಾರಿಯೂ ಕುಟುಂಬ ರಾಜಕಾರಣ ಮುಂದುವರಿದಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 20ಮಂದಿ ಪ್ರಭಾವಶಾಲಿ ಕಾಂಗ್ರೆಸ್ ನಾಯಕರು ಟಿಕೆಟ್ ಬಯಸಿದ್ದರು. ಈಗಾಗಲೇ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್, ಸಚಿವ ಎಂ.ಕೃಷ್ಣಪ್ಪ ಮತ್ತು ಅವರ ಮಗ ಪ್ರಿಯಾ ಕೃಷ್ಣ ಶಾಸಕರಾಗಿದ್ದಾರೆ.

ಅವರಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಎಚ್.ಸಿ.ಮಹಾದೇವಪ್ಪ, ಟಿ.ಬಿ.ಜಯಚಂದ್ರ, ರಾಮಲಿಂಗಾ ರೆಡ್ಡಿ, ಶಾಸಕ ಕೆ.ಎನ್.ರಾಜಣ್ಣ, ಕೇಂದ್ರದ ಮಾಜಿ ಸಚಿವರುಗಳಾದ ಕೆ.ಎಚ್.ಮುನಿಯಪ್ಪ ಹಾಗೂ, ಸಿ.ಕೆ.ಜಾಫರ್ ಷರೀಫ್ ತಮ್ಮ ಮೊಮ್ಮಗನಿಗೆ, ಮಾರ್ಗರೇಟ್ ಆಳ್ವ ತಮ್ಮ ಮಗನಿಗೆ, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಸುಮಾರು 20 ಮಂದಿ ತಮ್ಮ ಮಕ್ಕಳಿಗೆ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಬಯಸಿದ್ದರು.

ಅವರಲ್ಲಿ, ಅದೃಷ್ಟ ಶಾಲಿ ಅಪ್ಪಂದಿರೆಂದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ವರುಣ ವಿಧಾನಸಭಾ ಕ್ಷೇತ್ರವನ್ನು ಮಗ ಡಾ.ಯತೀಂದ್ರ ಗೆ ಬಿಟ್ಟುಕೊಟ್ಟು ತಾವು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಪಡೆದುಕೊಂಡಿದ್ದಾರೆ.

ಶಾಮನೂರು ಶಿವಶಂಕರಪ್ಪ-ದಾವಣಗೆರೆ ದಕ್ಷಿಣ, ಅವರ ಮಗ ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ ಉತ್ತರ, ಸಚಿವ ಎಂ.ಕೃಷ್ಣಪ್ಪ-ವಿಜಯನಗರ ಅವರ ಪುತ್ರ ಪ್ರಿಯಾಕೃಷ್ಣ-ಗೋವಿಂದರಾಜ ನಗರ ಕ್ಷೇತ್ರಗಳಿಂದ ಈ ಬಾರಿಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವರಾದ ಟಿ.ಬಿ.ಜಯಚಂದ್ರ-ಸಿರಾ, ಅವರ ಪುತ್ರ ಸಂತೋಷ್-ಚಿಕ್ಕನಾಯಕನಹಳ್ಳಿ, ರಾಮಲಿಂಗಾರೆಡ್ಡಿ-ಬಿಟಿಎಂ ಲೇಔಟ್, ಅವರ ಮಗಳು ಸೌಮ್ಯ ರೆಡ್ಡಿ-ಜಯನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ‌ಪುತ್ರಿ ರೂಪಾ ಶಶಿಧರ್ ಅವರಿಗೆ ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಟಿಕೆಟ್ ದೊರೆಕಿಸಿಕೊಟ್ಟಿದ್ದಾರೆ.

 ಆದರೆ, ಭಾರಿ ಪ್ರಯತ್ನದ ನಂತರವೂ ಸಚಿವ ಎಚ್.ಸಿ.ಮಹಾದೇವಪ್ಪ ತಮ್ಮ ಪುತ್ರ ಸುನೀಲ್ ಬೋಸ್ ಗೆ ಟಿ.ನರಸೀಪುರ ಇಲ್ಲವೆ ಸಿ.ವಿ.ರಾಮನ್ ನಗರದಿಂದ, ಮಾರ್ಗರೇಟ್ ಆಳ್ವ ತಮ್ಮ ಪುತ್ರ ನಿವೇದಿತ್ ಆಳ್ವಗೆ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ತಮ್ಮ ಮೊಮ್ಮಗ ಷರೀಫ್ ಗೆ ಹೆಬ್ಬಾಳದಿಂದ, ಮೋಟಮ್ಮ ತಮ್ಮ ಮಗಳಿಗೆ ಮೂಡಿಗೆರೆಯಿಂದ, ಶಾಸಕ ಕೆ.ಎನ್.ರಾಜಣ್ಣ ತಮ್ಮ ಮಗನಿಗೆ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ಈ ನಾಯಕರ ಮನವಿ ಹಾಗೂ ಒತ್ತಡಗಳಿಗೆ ಮಣಿದಿಲ್ಲ.


ಸಂಬಂಧಿತ ಟ್ಯಾಗ್ಗಳು

congress ticket C.K.Jaffer Sharief ಯಶಸ್ವಿ ಹೈಕಮಾಂಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ