ಕೈತಪ್ಪಿದ ಟಿಕೆಟ್: ಕಾಂಗ್ರೆಸ್ ಮುಖಂಡರ ಅಸಮಾಧಾನ

the congress leaders dissatisfaction for refused to give ticket

16-04-2018

ಬೆಂಗಳೂರು: ಈ ತಿಂಗಳ 13ರಂದು ತನ್ನ 224 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷ ಅಂತೂ ಇಂತು 15ರಾತ್ರಿ 8.25ರ ವೇಳೆಗೆ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 218 ಆಕಾಂಕ್ಷಿಗಳಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಬೆಂಬಲಿತ ಸ್ವರಾಜ್ ಇಂಡಿಯಾ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರ ಮೇಲುಕೋಟೆ ಹೊರತುಪಡಿಸಿ, ಉಳಿದ 5 ಕ್ಷೇತ್ರಗಳ ಟಿಕೆಟ್ ಇನ್ನೂ ಪ್ರಕಟವಾಗಬೇಕಿದೆ. ಹಾಲಿ 12ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ .

ತೀವ್ರ ಕುತೂಹಲ ಮೂಡಿಸಿದ್ದ ಶಾಂತಿ ನಗರ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆ ಯಾಗಿಲ್ಲ. ಕಿತ್ತೂರು, ಸಿಂಧಗಿ ಹಾಗೂ ರಾಯಚೂರು ನಗರ ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ಮೇಲ್ನೋಟಕ್ಕೆ ಟಿಕೆಟ್ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಮೇಲುಗೈ ಸಾಧಿಸಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಜೆಡಿಎಸ್ ನ 7ಬಂಡಾಯ ಶಾಸಕರಿಗೂ ಟಿಕೆಟ್ ದೊರೆಕಿಸಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಬಂಡಾಯವೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಮಾಧಾನ ಪಡಿಸಲು ಹೈದರಾಬಾದ್ ಕರ್ನಾಟಕದಲ್ಲಿ ಖರ್ಗೆ ಬೆಂಬಲಿಗರಿಗೆ ಟಿಕೆಟ್ ನೀಡಲಾಗಿದೆ. 40ಲಿಂಗಾಯತರು, 23ಒಕ್ಕಲಿಗರು, 50ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ.

ಐದು ಬ್ರಾಹ್ಮಣರು, ಹದಿನೈದು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಮೂರು ಕ್ಷೇತ್ರಗಳಲ್ಲಿ ವೈಶ್ಯ ಹಾಗೂ ಬಂಟ್ಸ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಶಾಂತಿನಗರದ ಎನ್.ಎ.ಹ್ಯಾರಿಸ್ಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ತಿಪಟೂರು ಶಾಸಕ ಕೆ.ಷಡಕ್ಷರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಷಡಕ್ಷರಿ, ತಮಗೆ ಟಿಕೆಟ್ ಸಿಗದಿರುವುದಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಪಟೂರು ಬಂದ್ ಗೆ ಅವರ ಬೆಂಬಲಿಗರು ಕರೆ ನೀಡಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಕೊಡುವುದಾಗಿ ಹೇಳಿದ್ದ ಹಾಲಿಶಾಸಕ ಬಿ.ಬಿ.ಚಿಮ್ಮನಕಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದು ಡಾ.ದೇವರಾಜ್ ಪಾಟೀಲರಿಗೆ ಟಿಕೆಟ್ ಪ್ರಕಟಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿಮ್ಮನಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಭಾಸ್ಕರ್ ಗೌಡ, ಪುಟ್ಟೇಗೌಡ ಹಾಗೂ ಪಾಲಹಳ್ಳಿ ಚಂದ್ರ ಶೇಖರ್ ಅವರು ಜಾತ್ಯತೀತ ಜನತಾದಳದಿಂದ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾನಗಲ್ ನಲ್ಲಿ ಹಾಲಿ ಶಾಸಕ ಮನೋಹರ ತಹಶಿಲ್ದಾರರ್ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಸಿರಗುಪ್ಪದ ಹಾಲಿ ಶಾಸಕ ಎಂ.ಬಿ.ನಾಗರಾಜ್ ತಮಗೆ ಟಿಕೆಟ್ ಕೈ ತಪ್ಪಿರುವ ಸಂಬಂಧ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

candidates congress ಅಸಮಾಧಾನ ಬಂದ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ