ಕುಖ್ಯಾತ ಕನ್ನಗಳ್ಳ ಮತ್ತು ಕಳ್ಳಿಯರಿಬ್ಬರ ಬಂಧನ

notorious thief arrested at bengaluru

14-04-2018

ಬೆಂಗಳೂರು: ಕುಖ್ಯಾತ ಕನ್ನಗಳ್ಳ ಶಿವರಸನ್, ಇಬ್ಬರು ಕಳ್ಳಿಯರು ಸೇರಿ ಐವರು ಮನೆಗಳ್ಳರನ್ನು ಬಂಧಿಸಿರುವ ಜೀವನ್‍ಭೀಮಾ ನಗರ ಪೊಲೀಸರು 70 ಲಕ್ಷ 42 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು 33 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಂಗಸಂದ್ರದ ಶಿವರಸನ್ (29) ಎಂಬ ಕುಖ್ಯಾತ ಕನ್ನಗಳ್ಳನನ್ನು ಬಂಧಿಸಿ, ಆತನಿಂದ 28 ಲಕ್ಷ 89 ಸಾವಿರ ಮೌಲ್ಯದ 960 ಗ್ರಾಂ ಚಿನ್ನಾಭರಣ, 1 ಕಾರು, ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ  ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.

ಆರೋಪಿಯ ಬಂಧನದಿಂದ ಜೆಪಿ ನಗರದ 7, ಬೈಯಪ್ಪನಹಳ್ಳಿಯ 3, ಹಲಸೂರಿನ 4, ರಾಮಮೂರ್ತಿ ನಗರದ 3, ಇಂದಿರಾನಗರ, ಕೆಆರ್ ಪುರ, ಕೆಜಿ ಹಳ್ಳಿ ತಲಾ 1 ಸೇರಿ 19 ಪ್ರಕರಣಗಳು ಪತ್ತೆಯಾಗಿವೆ. ಮನೆಗೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿಯೇ ಮೂರು ತಿಂಗಳಿನಿಂದ ಕಳ್ಳತನ ಮಾಡಿದ್ದ ಬೈಯಪ್ಪನ ಹಳ್ಳಿಯ ಅಂಬೇಡ್ಕರ್ ನಗರದ ಭಾಗ್ಯಲಕ್ಷ್ಮಿ(36) ಯನ್ನು ಬಂಧಿಸಿ 5 ಲಕ್ಷ ಮೌಲ್ಯದ 173 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಹಳ್ಳಿಯ ನಾಗೇಶ್ (32) ಹಾಗೂ ಮೇಡಹಳ್ಳಿಯ ಮಂಜುಶ್ರೀ (43)ಯನ್ನು ಬಂಧಿಸಿ, 16 ಲಕ್ಷ 18 ಸಾವಿರ ಮೌಲ್ಯದ 578 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರ ಬಂಧನದಿಂದ ಜೆಬಿ ನಗರದ 8, ಬೈಯಪ್ಪನಹಳ್ಳಿಯ 3, ಇಂದಿರಾನಗರದ 1 ಸೇರಿ 12 ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ.

ಇದಲ್ಲದೆ ನವಿಮುಂಬೈನ ಸಚಿನ್ (27)ನನ್ನು ಬಂಧಿಸಿ ಜೆಬಿ ನಗರದ ತಾನು ಕೆಲಸ ಮಾಡುತ್ತಿದ್ದ ಜ್ಯುವೆಲ್ಲೆರ್ಸ್ನಲ್ಲಿ ಕಳವು ಮಾಡಿದ್ದ 400 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರ ಬಂಧನದಿಂದ 33 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ 70 ಲಕ್ಷ 42 ಸಾವಿರ ಮೌಲ್ಯದ 2 ಕೆಜಿ 120 ಗ್ರಾಂ ಚಿನ್ನಾಭರಣ, ಕಾರು, ಮೊಬೈಲ್, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಗಳಿಗೆ ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು 1 ಲಕ್ಷ ನಗದು ಬಹುಮಾನ ಘೋಷಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಅಜಯ್ ಹಿಲೋರಿ ಇದ್ದರು.


ಸಂಬಂಧಿತ ಟ್ಯಾಗ್ಗಳು

thives arrested ಕನ್ನಗಳ್ಳ ಕುಖ್ಯಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ