ರಾಜ್ಯ ಚುನಾವಣೆ: ಜಾತಿ ಲೇಪನ,ಪ್ರತಿಷ್ಠೆ-ಹಣಾಹಣಿ

karnataka election: caste-religion, Every technique, many more

14-04-2018 483

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಜಾತಿ ಲೇಪನಕ್ಕೆ ಒಳಗಾಗಿದೆಯೇ? ಪ್ರತಿಷ್ಠೆ-ಹಣಾಹಣಿ ಪ್ರತಿ ತಂತ್ರಗಳಿಗೆ ದಾರಿ ಮಾಡಿಕೊಟ್ಟಿದೆಯೇ?

ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ-ಮತ್ತೆ ಭೇಟಿ ನೀಡುತ್ತಿರುವುದು, ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತಗೆದುಕೊಂಡಿರುವುದು ಅದಕ್ಕಾಗಿ ತಂತ್ರ, ಪ್ರತಿ-ತಂತ್ರಗಳ ಮೊರೆ ಹೋಗಿರುವುದನ್ನು ಅವಲೋಕಿಸಿದಾಗ ಈ ಪ್ರಶ್ನೆಗೆ ಹೌದು ಎಂತಲೇ ಉತ್ತರಿಸಬೇಕಾಗುತ್ತದೆ.

ಅಭ್ಯರ್ಥಿಗಳ ವರ್ಚಸ್ಸು, ಹಣ ಹಾಗೂ ತೋಳ್ಬಲದ ಮಾನದಂಡದ ಮೇಲೆ ನಡೆಯುತ್ತಿದ್ದ ಟಿಕೆಟ್ ಹಂಚಿಕೆ ಕಸರತ್ತಿಗೆ ಈಗ ಪೂರ್ತಿಯಾಗಿ ಜಾತಿ ಲೇಪನವಾಗಿದೆ. ಬಿಜೆಪಿಯ ಹಿಂದುತ್ವ ಕಾರ್ಡ್ ಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಕಾರ್ಡ್ ತೇಲಿಬಿಟ್ಟಿದ್ದಾರೆ.

ಕೆಲವು ಮಾಧ್ಯಮಗಳ ಪ್ರಕಾರ ಬಿಜೆಪಿ ಅಧ್ಯಕ್ಷ ಅಮಿತ್ ಷಾ,' ಚಾಣಕ್ಯ' ಎಂತಹ ಚುನಾವಣೆಯನ್ನೇ ಆಗಲಿ ಸುಲಭವಾಗಿ ತಮ್ಮ ತಂತ್ರಗಳಿಂದ ಗೆಲ್ಲಬಲ್ಲ ಮಹಾ ಚತುರ ರಾಜಕಾರಣಿ. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಆ ಕಾರಣಕ್ಕಾಗಿ ಅನೇಕ ಅನುಕೂಲಗಳನ್ನು ಪಡೆದಿರುವುದು ದೇಶದ 22 ರಾಜ್ಯಗಳಲ್ಲಿ ನೇರವಾಗಿ ಇಲ್ಲವೆ ಪರೋಕ್ಷವಾಗಿ ಅಧಿಕಾರ ಹಿಡಿದು ಸಂಪನ್ಮೂಲ ಕ್ರೋಡೀಕರಣ ಸೇರಿದಂತೆ ಚುನಾವಣೆ ಎದುರಿಸಲು ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ಕಾಂಗ್ರೆಸ್‌ ಗಿಂತ ಹೆಚ್ಚು ಹೊಂದಿದ್ದರೂ, ಸಿದ್ದರಾಮಯ್ಯ ಎಂಬ ಒಬ್ಬ ಕಾಂಗ್ರೆಸ್ ಮುಖ್ಯ ಮಂತ್ರಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಗಿಂತ ಭಾರೀ ಎನ್ನವಂತಹ ಅನುಕೂಲಗಳನ್ನು ಹೊಂದಿರುವ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯ ಮಂತ್ರಿ ಆಗಿಲ್ಲದಿದ್ದರೆ, ಚುನಾವಣೆಯಲ್ಲಿ ಮುಂಚೂಣಿ ನಾಯಕನಾಗಿಲ್ಲದೇ ಹೋಗಿದ್ದರೆ ಕರ್ನಾಟಕವನ್ನು ಸುಲಭ ತುತ್ತಾಗಿಸಿ ಕೊಳ್ಳಬಹುದಿತ್ತು ಎಂದು ಕೈ ಕೈ ಹಿಸುಕಿಕೊಳ್ಳುವಂತಹ ವಾತಾವರಣ ನಿರ್ಮಿಸಿ ಬಿಟ್ಟಿದ್ದಾರೆ.

ಈ ಎಲ್ಲಾ ಅಂಶಗಳೂ ಜಾತ್ಯತೀತ ಜನತಾದಳಕ್ಕಿಂತ ಕಾಂಗ್ರೆಸ್ ಹಾಗೂ ಬಿಜೆಪಿ ಈ ಬಾರಿಯ ಚುನಾವಣೆಯನ್ನು ಪ್ರತಿಷ್ಠೆಯ ಜೊತೆಗೆ ಮಾಡು-ಇಲ್ಲವೆ ಮಡಿ ಎನ್ನುವ ಜಂಗೀ ಕುಸ್ತಿಯಾಗಿ  ಮಾರ್ಪಡಿಸಿರುವುದನ್ನು ಖಚಿತವಾಗಿ ಬಿಂಬಿಸುತ್ತಿವೆ.

ಅಮಿತ್ ಷಾ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಾರದ ಮುಂಚೂಣಿಗೆ ನಿಲ್ಲುವಾಗ ತಾವು ಬೇರೆ ರಾಜ್ಯಗಳಲ್ಲಿ ಅನುಸರಿಸಿದ ತಂತ್ರಗಳು ಹಾಗೂ ಅವುಗಳಿಗೆ ದೊರೆತ ಗೆಲವುಗಳಿಂದ ಕರ್ನಾಟಕವನ್ನೂ ಗೆದ್ದು ಬಿಡಬಹುದು ಎಂದುಕೊಂಡಂತಿತ್ತು. ಉತ್ತರ ಪ್ರದೇಶದಂತೆ ಹೊಸ ಪ್ರಯೋಗಗಳನ್ನು ನಡಸಬೇಕೆಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಮುಖಂಡರಿಗೆ ಸಲಹೆ ಸೂಚನೆಗಳನ್ನು ನೀಡಿದ್ದರು. ಆದರೆ, ಇಲ್ಲಿನ ಜಾತಿ ಸಮೀಕರಣವೇ ಬೇರೆ ಆಗಿರುವುದು ಈಗ ಸವಾಲಾಗಿ ಪರಿಣಮಿಸಿದೆ.

ಚುನಾವಣೆಯಲ್ಲಿ  ಬೇರೆ ಬೇರೆ ಅಂಶಗಳನ್ನು ಆಧರಿಸಿಯೇ ಕಾರ್ಯತಂತ್ರಗಳೂ ರೂಪಗೊಂಡರೂ ಈ ಬಾರಿ ಜಾತಿ ಪ್ರಮುಖ ಪಾತ್ರ ವಹಿಸುತ್ತಿದೆ. ಕಾಂಗ್ರೆಸ್ ತನ್ನ ಅಹಿಂದ ಮತ ಬ್ಯಾಂಕ್ ಛಿಧ್ರವಾಗದಂತೆ ಮುನ್ನೆಚ್ಚರಿಕೆ ವಹಿಸಿ ಮುಸ್ಲಿಂ ಮತಗಳು ಪಕ್ಷದ ಪರ ಇರುವಂತೆ ಯೋಜನೆ ರೂಪಿಸಿದೆ. ಜೊತೆಗೆ, ಮುಖ್ಯವಾಗಿ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಬಿಜೆಪಿಯ ಲಿಂಗಾಯತ ಮತಗಳಿಗೆ ಗಾಳ ಹಾಕಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ, ಹಿಂದೂ ಮತಗಳು ಚದುರದಂತೆ ಕ್ರೋಡೀಕರಣಕ್ಕೆ ತೀವ್ರ ಪ್ರಯತ್ನ ನಡೆಸಿದೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಹೊಸ ಪ್ರಯೋಗಕ್ಕೆ ಹೋಗದೆ ಜಾತಿ ಮತ್ತು ಗೆಲುವಿನ ಅಂಶಗಳಷ್ಟನ್ನೇ ನೀಡುತ್ತಿದೆ. ಈ ಎಲ್ಲಾ ಲೆಕ್ಕಾಚಾರ ಆಧರಿಸಿಯೇ ಟಿಕೆಟ್ ಹಂಚಿಕೆ ನಡೆದಿದೆ.

ಬಿಜೆಪಿ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅತ್ಯಂತ ತಾಳ್ಮೆ ವಹಿಸಿ ತಟಸ್ಥ ನಿಲುವು ತಳೆದಿದೆ. ಪರಿಶಿಷ್ಟ ಪಂಗಡದ ಮತದಾರನ್ನು ಸೆಳೆಯಲು ಶ್ರೀರಾಮುಲು ಅವರಿಗೆ ಪ್ರಚಾರದಲ್ಲಿ ಪ್ರಮುಖ ಸ್ಥಾನ ನೀಡಲು, ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀ ರಾಮುಲು ಅವರನ್ನು ಉಪಮುಖ್ಯ ಮಂತ್ರಿ ಮಾಡಲಾಗುವುದು ಎನ್ನುವ ಸುದ್ದಿಯನ್ನು ಹರಿಯ ಬಿಟ್ಟಿದೆ. ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸದ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಬಳಸಿಕೊಂಡು ಮಾದಿಗ ಜನಾಂಗದ ಮತ ಸೆಳೆಯುವ ಕಾರ್ಯತಂತ್ರವನ್ನು ರೂಪಿಸಿದೆ.

ಇದರ ಜೊತೆಗೆ ಜಾತ್ಯತೀತ ಜನತಾದಳ ಒಕ್ಕಲಿಗರ ಜೊತೆಗೆ ಮುಸ್ಲಿಂ ಮತ ಪಡೆಯಲು ಯೋಜನೆ ರೂಪಿಸಿದೆ. ಮಾಯವತಿ ವರ್ಚಸ್ಸು ಬಳಸಿ ದಲಿತರ ಒಲೈಕೆಯ ತಂತ್ರಕ್ಕೆ ಮೊರೆ ಹೋಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಜಾತಿ ಲೇಪನಕ್ಕೊಳಗಾಗಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎನ್ನುವ ಜಿದ್ದಿಗೆ ಬಿದ್ದು ಜಾತಿ ಸಮೀಕರಣಕ್ಕೆ ದಾರಿ ಮಾಡಿಕೊಟ್ಟದೆ ಎನ್ನಬಹುದಲ್ಲವೇ?


ಸಂಬಂಧಿತ ಟ್ಯಾಗ್ಗಳು

election caste-religion ಜಾತಿ ಲೇಪನ ಅಧಿಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ