ಬಾದಾಮಿಯಲ್ಲಿ ಸಿಎಂ ಸ್ಪರ್ಧೆ: ಲೆಕ್ಕಾಚಾರದ ರಿಸ್ಕ್?

siddaramaiah and badami constituency: risk or safe?

14-04-2018

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಜೊತೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದಲೂ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಏಪ್ರಿಲ್ 20ರಂದು ಚಾಮುಂಡೇಶ್ವರಿಯಿಂದ ಹಾಗೂ 23ರಂದು ಬಾದಾಮಿ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸುವ ನಿರೀಕ್ಷೆ ಇದೆ.

ಅಂದರೆ, ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತ ಮತದಾರರ ಪ್ರಾಬಲ್ಯ ಇರುವ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕಿಂತಲೂ ಬಾದಾಮಿ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಲಭವಾಗಿ ಗೆಲವು ತಂದು ಕೊಡಬಲ್ಲದೆ?ಅವರ ಲೆಕ್ಕಾಚಾರಗಳಾದರೂ ಏನು?

ಬಾದಾಮಿ ಕ್ಷೇತ್ರವನ್ನು ಪ್ರಸ್ತುತ ಕಾಂಗ್ರೆಸ್ ನ ಬಿ.ಬಿ.ಚಿಮ್ಮನಕಟ್ಟಿ ಪ್ರತಿನಿಧಿಸುತ್ತಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ 68 ಸಾವಿರ ವೀರಶೈವ ಲಿಂಗಾಯತರು ಇದ್ದು, ಅವರೇ ಬಹುಸಂಖ್ಯಾತ ಮತದಾರರು.ಇನ್ನು, 48ಸಾವಿರ ಕುರುಬರು, 35ಸಾವಿರ ದಲಿತರು, 21 ಸಾವಿರ ನಾಯಕ ಜನಾಂಗದವರು ಹಾಗೂ 12 ಸಾವಿರ ಮುಸ್ಲಿಂ ಮತದಾರರಿದ್ದಾರೆ.

 ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರದೇ ಪ್ರಮುಖ ಪಾತ್ರ ಎಂದು ಭಾವಿಸಿ ವೀರಶೈವರು ಹಾಗೂ ಅವರ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಅಸಮಾಧಾನಗೊಂಡು ಆಕ್ರೋಶ ಭರಿತರಾಗಿರುವ ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ಗಿಳಿಯುವುದು ಸುರಕ್ಷಿತವೇ? ಈ ಜಿಜ್ಞಾಸೆ ಈಗ ಬಹು ಚರ್ಚಿತ. ಹಾಗಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ತ ಧರಿ-ಇತ್ತ ಹುಲಿ ಎನ್ನುವ ಸಂಕಷ್ಟಕ್ಕೆ ಸಿಲುಕುವರೇ ? ತಮ್ಮ ರಾಜಕೀಯ ಉತ್ತುಂಗ ಸ್ಥಿತಿಯಲ್ಲಿ ಲೆಕ್ಕಾಚಾರದ ಬಹು ದೊಡ್ಡ ರಿಸ್ಕ್ ತಗೆದುಕೊಳ್ಳುತ್ತಿದ್ದಾರೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮದ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲಿಯೇ ವೀರಶೈವ ಮಹಾಸಭಾದ ತವರು ಬಾದಾಮಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 1904ರಲ್ಲಿ ಅಂದಿನ ವಿಜಾಪುರ ಜಿಲ್ಲೆಯ ಬಾದಾಮಿಗೆ 12 ಕಿಲೋಮೀಟರ್‌ ದೂರದಲ್ಲಿ ಹಾನಗಲ್ಲ ಗುರು ಕುಮಾರಸ್ವಾಮಿಗಳು ಶಿವಯೋಗ ಮಂದಿರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ್ದರು. ಈ ಶಿವಯೋಗ ಮಂದಿರ ಈವರೆಗೆ ಸುಮಾರು 10ಸಾವಿರ ಮಠಾಧೀಶರನ್ನು ತಯಾರು ಮಾಡಿದ ತರಬೇತಿ ಕೇಂದ್ರವಾಗಿದೆ. ಸಿದ್ದರಾಮಯ್ಯ ವಿರುದ್ಧ ದೊಡ್ಡ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪಂಚಪೀಠಾಧಿಪತಿಗಳು ಸೇರಿದಂತೆ  ರಾಜ್ಯದ ವೀರಶೈವ ಲಿಂಗಾಯತ ಮಠಗಳಲ್ಲಿರುವ ಬಹುತೇಕ ಪೀಠಾಧಿಪತಿಗಳು ಶಿವಯೋಗ ಮಂದಿರದಿಂದಲೇ ತರಬೇತಿ ಪಡೆದವರು. ಹಾಗೆಯೇ, ಈಚೆಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿರುವ ಬಹುತೇಕ ಸ್ವಾಮಿಗಳೂ ಸಹ ಶಿವಯೋಗ ಮಂದಿರದ ವಿದ್ಯಾರ್ಥಿಗಳಾಗಿದ್ದಾರೆ. ಸದ್ಯದಲ್ಲಿಯೇ ವೀರಶೈವ ಮಹಾಸಭಾ, ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ  ಹಿನ್ನಲೆಯಲ್ಲಿ ಬೃಹತ್ ಸಭೆ ನಡೆಸಲು ನಿರ್ಧರಿಸಿದೆ.

ಈ ಕಾರಣಗಳೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಉದ್ದೇಶಿತ ಬಾದಾಮಿ ವಿಧಾನ ಸಭಾ ಕ್ಷೇತ್ರದ ಸ್ಪರ್ಧೆ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿರುವ ಅಂಶಗಳು.

ಚಾಮುಂಡೇಶ್ವರಿ ಕ್ಷೇತ್ರವೊಂದನ್ನೇ ನೀವು ನೆಚ್ಚಿಕೊಳ್ಳ ಬೇಡಿ ಎನ್ನುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಲಹೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ಸೂಕ್ತ ವಾತಾವರಣ ಜೊತೆಗೆ ವೈಯಕ್ತಿಕವಾಗಿ ಆತ್ಮವಿಶ್ವಾಸ ವಿದೆ ಎಂದು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಗುರುವಾರ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿದ ಬಿ.ಬಿ.ಚಿಮ್ಮನಕಟ್ಟಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ನೇತೃತ್ವದ ನಿಯೋಗ "ನೀವು ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸುವುದರಿಂದ ಪಕ್ಕದ ನಾಲ್ಕಕ್ಕೈದು ಜಿಲ್ಲೆಗಳಲ್ಲಿ ಪಕ್ಕಕ್ಕೆ ಪೂರಕ ವಾತಾವರಣ ನಿರ್ಮಾಣವಾಗುವ ಸಂದೇಶ ಕೊಟ್ಟಂತಾಗುತ್ತದೆ ಎಂಬ ಒತ್ತಾಯ ಮಾಡಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದ ನಿಯೋಗದ ಮಾತುಗಳು ಸರಿಯೆನ್ನಿಸಿದ್ದು, ಅವರು ಬಾದಾಮಿ ವಿಧಾನ ಸಭಾ ಕ್ಷೇತ್ರದಿಂದಲೂ ಸ್ಪರ್ಧೆಗೆ ಮನಸ್ಸು ಮಾಡಲು ಪ್ರಮುಖ ಕಾರಣ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

siddaramaiah badami ಹೈಕಮಾಂಡ್ ಚಾಮುಂಡೇಶ್ವರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ