ಕಣ್ಣೀರ ಧಾರೆ ಸೀರಿಯಲ್ ಗಳಲ್ಲಿ ಏಕೆ?

serials and crying?

13-04-2018

ಕನ್ನಡ ಧಾರಾವಾಹಿಗಳಲ್ಲಿ ಅಳುಮುಂಜಿಗಳದ್ದೇ ದರ್ಬಾರು. ಯಾವುದೇ ಸೀರಿಯಲ್ ನೋಡಿದರೂ ಅದು ಎಂಥದ್ದೇ ಕಥೆಯಾಗಿದ್ದರೂ ಅಲ್ಲಿ ಅಳು ಮಾತ್ರ ತಪ್ಪಿದ್ದಲ್ಲ. ಸಂಜೆ ಮನೆಗೆ ಬಂದ ಗಂಡಸರಿಗೆ ಮೊದಲು ಕೇಳಿಸುವುದೇ ಅಳುವಿನ ಸದ್ದು. ಅಳುವುದು ಸ್ತ್ರೀ ಪಾತ್ರಗಳು ಮಾತ್ರವಲ್ಲ, ಈ ಧಾರಾವಾಹಿಗಳಲ್ಲಿ ಸ್ತ್ರೀಗಳೊಂದಿಗೆ ಗಂಡಸರು ಮಕ್ಕಳು ವೃದ್ಧರು, ಎಲ್ಲರೂ ಅಳುತ್ತಿರುತ್ತಾರೆ. ಆಶ್ಚರ್ಯವೆಂದರೆ ಅನೇಕ ಬಾರಿ ಈ ಅಳು ವಿನಾಕಾರಣವಾಗಿರುತ್ತದೆ. ಯಾರೋ ಸತ್ತಿದ್ದಾರೆಂಬ ಸುಳ್ಳು ಸುದ್ದಿ ಕೇಳಿ ಅಳುವುದು, ಯಾವುದೋ ಹಳೆಯ ಘಟನೆಯನ್ನು ನೆನೆದುಕೊಂಡು ಅಳುವುದು. ಯಾವುದೊ ಪರಿಸ್ಥಿತಿಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿ ಅಳುವುದು ಇವೆಲ್ಲ ಸಾಮಾನ್ಯ. ಭಾರತೀಯ ಸಂಸ್ಕೃತಿಯಲ್ಲಿ ಭಾವನೆಗಳೇ ಒಬ್ಬ ವ್ಯಕ್ತಿಯ ವೈರಿಗಳು ಎಂಬ ಸತ್ಯವನ್ನು ಸಾರಿ ಸಾರಿ ಹೇಳಿದ್ದರೂ ಈ ಸೀರಿಯಲ್ ಗಳಲ್ಲಿ ಮಾತ್ರ ಅಳುವುದು ಒಂದು ಸಹಜ ಗುಣವೆಂಬಂತೆ ತೋರಿಸುತ್ತಾರೆ. ತಮಾಷೆಯೆಂದರೆ ಹೆಂಗಸು ಯಾವುದಾದರೂ ಪರಿಸ್ಥಿತಿಯನ್ನು ನಿಭಾಯಿಸದಾದಾಗ ಅವಳು ಅಳುವಿನ ಮೊರೆ ಹೋಗುವುದು ಅದು ಆ ಹೆಂಗಸಿನ ವ್ಯಕ್ತಿತ್ವಕ್ಕೆ ಮಾಡಿದ ಅವಮಾನವೆಂದು ಆ ನಟಿಗೂ ಗೊತ್ತಿಲ್ಲ, ನಿರ್ದೇಶಕನಿಗೂ ತೋಚಿದಂತಿಲ್ಲ ಮತ್ತು ಚಾನಲ್ ನವರು ತಲೆ ಕೆಡಿಸಿಕೊಂಡಂತಿಲ್ಲ. ಸಂಜೆ ಸರಿದು ರಾತ್ರಿಯಾಗುತ್ತಿದ್ದಂತೆ ಮನೆ ಮನೆಗಳಲ್ಲಿ ಈ ಅಳುವಿನ ಶಬ್ದ ಕೇಳಿಬರುವುದು ಎಷ್ಟು ಸರಿ ಎಂದು ಯಾರೂ ಯೋಚಿಸಿದಂತೆ ಕಂಡು ಬರುತ್ತಿಲ್ಲ. ಈ ಅಳುವಿನ ಅನಿಷ್ಟದಿಂದ ಮನೆ ಮಂದಿಯೆಲ್ಲ ಖಿನ್ನತೆಗೆ ಒಳಗಾಗದಿದ್ದರೆ ಸಾಕು ಎಂದು ಹೇಳುತ್ತಾರೆ ಸೂಪರ್ ಸುದ್ದಿ ಮಾತನಾಡಿಸಿದ ಕೆಲವು ಮನ ಶಾಸ್ತ್ರಜ್ಞರು.


ಸಂಬಂಧಿತ ಟ್ಯಾಗ್ಗಳು

tv serial Kannda ಮನ ಶಾಸ್ತ್ರಜ್ಞ ವ್ಯಕ್ತಿತ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ