'ನೇಕಾರರ ವಿರುದ್ಧ ಬಿಜೆಪಿ ನಿಲುವು ಖಂಡನಾರ್ಹ’

BJP

12-04-2018

ಬೆಂಗಳೂರು: ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇಕಾರರಿಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಮೊದಲ ಪಟ್ಟಿಯಲ್ಲಿ ನೇಕಾರರಿಗೆ ಯಾವ ಕ್ಷೇತ್ರದಲ್ಲೂ ಆದ್ಯತೆ ನೀಡಿಲ್ಲ. ರಾಜಕೀಯ ಬಲಾಢ್ಯತೆಗಾಗಿ ಪರಿತಪಿಸುತ್ತಿರುವ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡುವಲ್ಲಿ ಭಾರತೀಯ ಜನತಾ ಪಾರ್ಟಿ ತೆಗೆದುಕೊಂಡಿರುವ ನಿಲುವು ಖಂಡನಾರ್ಹ ಎಂದು ನೇಕಾರರ ಜಾಗೃತಿ ವೇದಿಕೆ ತಿಳಿಸಿದೆ.

ವೇದಿಕೆಯ ರಾಜ್ಯಾಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 46 ಕ್ಷೇತ್ರಗಳಲ್ಲಿ ನೇಕಾರರು ನಿರ್ಣಾಯಕ ಮತದಾರರಿದ್ದರೂ ಭಾರತೀಯ ಜನತಾ ಪಾರ್ಟಿ ಯಾವೊಂದು ಕ್ಷೇತ್ರದಲ್ಲೂ ಟಿಕೆಟ್ ನೀಡಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಡೆಸಿರುವ ಸಮೀಕ್ಷೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ನೇಕಾರ ಅಭ್ಯರ್ಥಿಯ ಪರವಾದ ವರದಿ ಬಂದಿದ್ದರೂ ರಾಜ್ಯ ಬಿಜೆಪಿ ಮುಖಂಡರು ಬಲಾಢ್ಯ ಸಮುದಾಯದವರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು. 

ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಡಿ.ಎಸ್.ಸೂರ್ಯನಾರಾಯಣ ಮಾತನಾಡಿ, ‘ ಕಾಂಗ್ರೆಸ್ ಪಕ್ಷವು ಬೆಳಗಾವಿ ದಕ್ಷಿಣ ಹಾಗೂ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲು ನೇಕಾರ ಸಮುದಾಯದ ಇಬ್ಬರಿಗೆ ಅವಕಾಶವನ್ನು ಕಲ್ಪಿಸಿದ್ದು, ಭಾರತೀಯ ಜನತಾ ಪಾರ್ಟಿಯ ಯಾರೊಬ್ಬರೂ ನೇಕಾರ ಸಮುದಾಯವನ್ನು ಗಮನಹರಿಸಿಲ್ಲ ಎಂದು ಹೇಳಿದರು.

ಹಂಪೆ ಗಾಯತ್ರಿ ಪೀಠ ಮಹಾಸಂಸ್ಥಾನದ ದಯಾನಂದಪುರಿ ಸ್ವಾಮೀಜಿಯವರು ಮಾರ್ಚ್ 20ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ನೇಕಾರರಿಗೆ ಆದ್ಯತೆ ನೀಡಬೇಕೆಂದು ಸಲ್ಲಿಸಿದ್ದ ಮನವಿಗೆ ಬಿಜೆಪಿ ಕವಡೆ ಕಾಸಿನ ಕಿಮ್ಮತ್ತು ನೀಡದೆ ಸಮುದಾಯವನ್ನು ಅವಮಾನಿಸಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

weaver ticket ದೇವಾಂಗ ಸಂಘ ಮಹಾಸಂಸ್ಥಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ