‘ಉನ್ನತ ಶಿಕ್ಷಣ ವ್ಯವಸ್ಥೆ ಪುನರ್ ಸಂಶೋಧಿಸಬೇಕಿದೆ’12-04-2018

ಬೆಂಗಳೂರು: ತ್ವರಿತಗತಿಯಲ್ಲಿ ಮಾರ್ಪಾಡಾಗುತ್ತಿರುವ ಬೌದ್ಧಿಕ ಆರ್ಥಿಕತೆಯಿಂದ ಉದ್ಭವಿಸುತ್ತಿರುವ ಸವಾಲುಗಳಿಗೆ ಸ್ಪಂದಿಸುವಂತಾಗಲು ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪುನರ್ ಸಂಶೋಧಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.

ನಿಮ್ಹಾನ್ಸ್ ಸಮಾವೇಶ ಕೇಂದ್ರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತೀಯರು ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿದಲ್ಲಿ ಇಲ್ಲಿನ ಜನಸಂಖ್ಯೆಯ ಪ್ರಮಾಣವನ್ನು ಸಮಾಜ ಹಾಗೂ ಸಮುದಾಯಕ್ಕೆ ಒಳಿತಾಗುವ ರೀತಿ ಬಳಸಿಕೊಳ್ಳಬಹುದೆಂದು ಅವರು ನುಡಿದರು.

ಬರುವ 2030ರ ವೇಳೆಗೆ 140 ದಶಲಕ್ಷ ಜನ ಉನ್ನತ ಶಿಕ್ಷಣಕ್ಕೆ ಪ್ರವೇಶಿಸುವುದರೊಂದಿಗೆ ಭಾರತ ವಿಶ್ವದಲ್ಲೇ ಯುವ ರಾಷ್ಟ್ರವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ಉಪರಾಷ್ಟ್ರಪತಿ ತಿಳಿಸಿದರು.

ಭಾರತದಲ್ಲಿನ ಆರೋಗ್ಯ ರಕ್ಷಣಾ ವ್ಯವಸ್ಥೆ, ನಿಯಂತ್ರಣ, ತಪಾಸಣೆ ಮತ್ತು ಚಿಕಿತ್ಸೆಯಂತಹ ಎಲ್ಲಾ ಹಂತಗಳಲ್ಲಿ ಬದಲಾವಣೆಗೆ ತೆರೆದುಕೊಂಡಿದೆ. ಸಂಬಂಧಿಸಿದ ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ನಾವಿನ್ಯತೆಯ ಬಳಕೆಯಿಂದ ಈ ಕ್ಷೇತ್ರದಲ್ಲಿ ವಿಕಸನ ಉಂಟುಮಾಡಬಹುದಾಗಿದೆ ಎಂದು ಉಪರಾಷ್ಟ್ರಪತಿ ನುಡಿದರು. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಹಾಗೂ ಆರೋಗ್ಯ ರಕ್ಷಣಾ ವಲಯದ ಸೌಲಭ್ಯಗಳ ತೀವ್ರ ಕೊರತೆ ಇದೆ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಕೊರತೆ ಹೆಚ್ಚಾಗಿದ್ದು, ಇದರ ನಿವಾರಣೆಗೆ ತುರ್ತು ಗಮನಹರಿಸಬೇಕಿದೆ ಎಂದರು. 

ಪರಿಸ್ಥಿತಿಯ ಸುಧಾರಣೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಒಡಮೂಡಬೇಕಿದೆ. ಖಾಸಗಿ ವಲಯದ ಆರೋಗ್ಯ ಸೌಲಭ್ಯಗಳು ಅಗತ್ಯವಿರುವವರಿಗೆ, ಬಡವರಿಗೆ ಸುಲಭ ರೀತಿಯಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಾಗಬೇಕು ಎಂದು ಉಪರಾಷ್ಟ್ರಪತಿ ನುಡಿದರು. ಘಟಿಕೋತ್ಸವದಲ್ಲಿ 26 ಸಾವಿರದ 469 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರಗಳನ್ನು ವಿತರಿಸಲಾಯಿತು. 84 ಮಂದಿಗೆ ಪದಕಗಳನ್ನು ಪ್ರದಾನ ಮಾಡಲಾಯಿತು. ರಾಜ್ಯಪಾಲ ವಜುಭಾಯ್ ವಾಲಾ, ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ರಮೇಶ್ ಉಪಸ್ಥಿತರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ