ಮಹದಾಯಿ, ಕಳಸ-ಬಂಡೂರಿ ಹೋರಾಟಗಾರರಲ್ಲಿ ಬಿರುಕು!

variance in Mahadevi, Kalasa-banduri fighters!

12-04-2018

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೆ ?ಬೇಡವೇ? ಇದು ಕಳೆದ ಎರಡೂವರೆ ವರ್ಷಗಳಿಂದ ಮಹದಾಯಿ, ಕಳಸಾ-ಬಂಡೂರಿ ನದಿ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ನಡೆಸಿರುವವರ ನಡುವಿನ ಜಿಜ್ಞಾಸೆ.

ಕರ್ನಾಟಕ ರೈತಸೇನೆಯ ಅಧ್ಯಕ್ಷ ವೀರೇಶ ಸೊಬರದಮಠ, ‘ಸೇನೆಯಿಂದ ಚುನಾವಣೆಗೆ ಯಾರೂ ಸ್ಪರ್ಧಿಸುವುದಿಲ್ಲ, ಸೇನೆಯಲ್ಲಿರುವವರು ಸ್ಪರ್ಧಿಸಬಯಸಿದರೆ ರಾಜೀನಾಮೆ ನೀಡಬೇಕು. ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ. ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದವರು, ಸೋತವರು ಮತ್ತೆ ಹೋರಾಟಕ್ಕೆಬಂದಿಲ್ಲ. ಹಾಗಾಗಿ, ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾರೆ.

ಆದರೆ ಕರ್ನಾಟಕ ರೈತಸೇನೆಯ ಉಪಾಧ್ಯಕ್ಷ ಶಂಕರಣ್ಣ ಅಂಬಲಿ ಅವರದು ವಿಭಿನ್ನ ನಿಲುವು. ‘ಮಹದಾಯಿ ಹೋರಾಟಗಾರರು ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲಿಸಲು ಕರ್ನಾಟಕ ರೈತಸೇನೆ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಈಗ ವೀರೇಶ ಸೊಬರದ ಮಠ ಅಂತಹ ನಿರ್ಧಾರವನ್ನು ಮಾಡಿಯೇ ಇಲ್ಲ ಎನ್ನುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ತಮ್ಮ ನಿರ್ಧಾರವನ್ನು ತಿಳಿಸುತ್ತೇನೆ" ಎಂದಿದ್ದಾರೆ.

ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ಲೋಕನಾಥ್ ಹೆಬಸೂರ್, ‘ಒಕ್ಕೂಟದಿಂದ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ನಾನು ನವಲಗುಂದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಇನ್ನಿತರರು ಬೇರೆ ಬೇರೆ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ. ರೈತಸೇನೆಗೂ ನಮಗೂ ಸಂಬಂಧವಿಲ್ಲ. ಆದರೆ ರೈತಸೇನೆಯಿಂದ ಬೆಂಬಲ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ.

ಹೋರಾಟ ವೇದಿಕೆ ಸಂಚಾಲಕ ವಿಕಾಸ್ ಸೊಪ್ಪಿನ್  ‘ಕಳಸ- ಬಂಡೂರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವು ನಾಯಕರು ಸೇರಿ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಉತ್ತರ ಕರ್ನಾಟಕ ಅಭಿವೃದ್ಧಿ ವೇದಿಕೆ ರಚಿಸಿದ್ದಾರೆ. ವೇದಿಕೆ ವತಿಯಿಂದ ಸ್ಪರ್ಧಿಸಿದರೆ ಒಬ್ಬೊಬ್ಬರಿಗೆ ಒಂದೊಂದು ಚಿಹ್ನೆ ದೊರೆಯುತ್ತದೆ. ಆದ್ದರಿಂದ, ಹೊಸ ಪಕ್ಷವೊಂದರಿಂದ ಒಂದೇ ಚಿಹ್ನೆಯಡಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಚಿಂತನೆ ನಡೆಸಿದ್ದೇವೆ’ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ, ಕರ್ನಾಟಕ ವಿಧಾನ ಸಭೆ ಚುನಾವಣೆ ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರರಲ್ಲಿ ಬಿರುಕು ಮೂಡಿಸಿದೆ. ಹೋರಾಟ ಸಂದರ್ಭದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ಮುಖಂಡರು ಈಗ ಸ್ಪರ್ಧಿಸುವ ಹಾಗೂ ಬೆಂಬಲಿಸುವ ವಿಷಯದಲ್ಲಿ ಬೇರೆ ಬೇರೆ ನಿಲುವು ಹೊಂದಿರುವುದು ಕಂಡುಬರುತ್ತಿದೆ.


ಸಂಬಂಧಿತ ಟ್ಯಾಗ್ಗಳು

Mahadayi kalasa banduri ಚಿಹ್ನೆ ನಿಲುವು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ