ಬಿಜೆಪಿಯ ಮಸೂತಿ,ಸೋಮಣ್ಣ ಪಕ್ಷೇತರರಾಗಿ ಕಣಕ್ಕೆ?

BJP

12-04-2018

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿರುವ 72 ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ಇನ್ನೂ ಅಸಮಾಧಾನ, ಆಕ್ರೋಶ ಮುಂದುವರಿದಿದೆ. ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಅತೃಪ್ತ ಸ್ಪರ್ಧಾ ಆಕಾಂಕ್ಷಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಬಂಡಾಯ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಜಾತ್ಯತೀತ ಜನತಾದಳದಿಂದ ಬಿಜೆಪಿ ಸೇರಿದ್ದ ಅಮೃತ್ ದೇಸಾಯಿ ಅವರಿಗೆ ಟಿಕೆಟ್ ನೀಡಿರುವುದು ಧಾರವಾಡದ ಮಾಜಿ ಶಾಸಕಿ ಸೀಮಾ ಮಸೂತಿ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಟಿಕೆಟ್ ಹಂಚಿಕೆ ಮಾಡುವಾಗ ಪಕ್ಷದ ಮುಖಂಡರು ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ, ಈ ಬಾರಿ ಪಕ್ಷವನ್ನು ತೊರೆಯದೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಪಕ್ಷಕ್ಕಾಗಿ ಎರಡು ದಶಕಗಳ ಕಾಲ ದುಡಿದ ನನ್ನನ್ನು ನಿರ್ಲಕ್ಷಿಸಿದ್ದು ಸರಿಯಲ್ಲ ಎಂದು ಗುಡುಗಿದ್ದಾರೆ.

ಇನ್ನು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನ ಮರದ್, ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎನ್ನುವ ಕಾರಣಕ್ಕಾಗಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವನ್ನು ಈ ಹಿಂದೆ ಎರಡುಬಾರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಟ್ಟುಕೊಟ್ಟಿದ್ದೆ. ಈ ಬಾರಿ ನಾನು ನಾಮಪತ್ರ ಸಲ್ಲಿಸಲು ಹಿಂದೇಟು ಹಾಕುವುದಿಲ್ಲ. ನನ್ನ ಮತ್ತು ನನ್ನ ಪತ್ನಿಯ ಮತ ಬಿದ್ದರೂ ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮಣ್ಣ, ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂದೇಶ ರವಾನಿಸುತ್ತಿದ್ದಾರೆ. ಕಾರಡಗಿಯಲ್ಲಿ ಸೋಮಣ್ಣ ಬೆಂಬಲಿಗರ ಸಭೆಯನ್ನೂ ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರೂ ಅವರನ್ನು ಭೇಟಿ ಮಾಡದಿರಲು ನಿರ್ಧರಿಸಿರುವ ಸೀಮಾ ಮಸೂತಿ ಹಾಗೂ ಸೋಮಣ್ಣ ಬೇವಿನ ಮರದ್ ನಮ್ಮ ದಾರಿ ನಮಗೆ ಎಂದು ಬಂಡಾಯದ ಬಾವುಟ ಹಾರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ