ಗುಂಡೇಟಿಗೆ ಶರಣಾದ ಕುಖ್ಯಾತ ಸರಗಳ್ಳ

Gunfire on notorious chain snatcher: arrested

11-04-2018

ಬೆಂಗಳೂರು: ನಗರದ ಸೋಲದೇವನಹಳ್ಳಿಯಲ್ಲಿ ಬಂಧಿಸಲು ಬೆನ್ನಟ್ಟಿ ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ಬವಾರಿಯಾ ಗ್ಯಾಂಗ್‍ನ ಸರಗಳ್ಳ ರಾಮ್‍ಸಿಂಗ್‍ಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಬಲಗಾಲು ಹಾಗೂ ಬಲಗೈಗೆ ಎರಡು ಗುಂಡೇಟು ತಗುಲಿ ಗಾಯಗೊಂಡಿರುವ ಉತ್ತರ ಪ್ರದೇಶದ ಶಾಮ್‍ಲಿ ಜಿಲ್ಲೆಯ ರಾಮ್‍ಸಿಂಗ್ (35), ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಉತ್ತರ ವಲಯ ಡಿಸಿಪಿ ಚೇತನ್‍ಸಿಂಗ್ ರಾಥೋರ್ ತಿಳಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ರಾಮ್‍ಸಿಂಗ್ ಜೊತೆಗಿದ್ದ ಮತ್ತೊಬ್ಬ ಕುಖ್ಯಾತ ಸರಗಳ್ಳ ಶಾಮ್‍ಲಿ ಜಿಲ್ಲೆಯ ರಾಜೇಂದ್ರ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ನಂದಿನಿಲೇಔಟ್, ಪೀಣ್ಯ, ಯಲಹಂಕ, ಸೋಲದೇವನಹಳ್ಳಿ ಕಡೆಗಳಲ್ಲಿ ಸರಗಳ್ಳತನ ಹೆಚ್ಚಾಗಿ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ನಿನ್ನೆ ಮಧ್ಯಾಹ್ನ ಬಾಗಲೂರು ಹಾಗೂ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನವಾಗಿದ್ದರಿಂದ ರಾತ್ರಿ ಇಡೀ ಪೊಲೀಸರು ನಾಕಾಬಂಧಿ ನಡೆಸಿ ವಾಹನಗಳ ತಪಾಸಣೆ ನಡೆಸಿದ್ದರು. ಸೋಲದೇವನಹಳ್ಳಿಯ ಲಕ್ಷ್ಮಿಪುರ ಕ್ರಾಸ್ ಬಳಿ ಪೊಲೀಸ್ ಸಿಬ್ಬಂದಿ, ಇಮಾಮ್ ಸಾಬ್ ಕರಿಕಟ್ಟಿ ಹಾಗೂ ಬಿರಾದಾರ್ ತಪಾಸಣೆ ನಡೆಸುತ್ತಿದ್ದಾಗ ರಾತ್ರಿ 11.30ರ ಸುಮಾರಿನಲ್ಲಿ ನೀಲಿ ಬಣ್ಣದ ಬಜಾಜ್ ಪಲ್ಸರ್ ಬೈಕ್‍ನಲ್ಲಿ ಇಬ್ಬರು ಹೋಗುತ್ತಿರುವುದು ಕಂಡು ಬಂತು.

ಕೂಡಲೇ ಬೈಕ್ ನಿಲ್ಲಿಸಿ ತಪಾಸಣೆ ನಡೆಸಲು ಹೋದಾಗ ದುಷ್ಕರ್ಮಿಗಳು ಬೈಕ್ ಬೀಳಿಸಿ ಪರಾರಿಯಾಗಲು ಯತ್ನಿಸಿದ್ದು, ಹಿಡಿಯಲು ಹೋದ ಇಮಾಮ್ ಸಾಬ್ ಕರಿಕಟ್ಟೆ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡು ನೀಲ್‍ಗಿರಿ ತೋಪಿಗೆ ಓಡಿ ಹೋದರು. ಕೂಡಲೇ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡು ನೀಲ್‍ಗಿರಿ ತೋಪನ್ನು ಕಾರ್ಯಾಚರಣೆ ನಡೆಸಿದಾಗ ದುಷ್ಕರ್ಮಿಗಳು ಕೆರೆಗುಡ್ಡದಹಳ್ಳಿ ಅರಣ್ಯಪ್ರದೇಶದಲ್ಲಿ ಅಡಗಿರುವುದು ಪತ್ತೆಯಾಗಿದೆ.

ಅಲ್ಲಿಗೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಕಂಡು ಬಂದ ರಾಮ್‍ಸಿಂಗ್ ಬಂಧಿಸಲು ಬಂದ ಪೊಲೀಸರು ಮೇಲೆ ಚಾಕು ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ, ಶರಣಾಗುವಂತೆ ಸ್ಥಳದಲ್ಲಿದ್ದ ನಂದಿನಿಲೇಔಟ್ ಪೊಲೀಸ್ ಠಾಣೆ ಸಬ್‍ ಇನ್ಸ್ಪೆಕ್ಟರ್ ಸೋಮಶೇಖರ್ ಗಾಳಿಯಲ್ಲಿ ಎರಡು ಸುತ್ತು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಪೊಲೀಸರತ್ತ ನುಗ್ಗಿದಾಗ ಮತ್ತೆ  ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಅದರಲ್ಲಿ ಒಂದು ಬಲಗಾಲಿಗೆ ಮತ್ತೊಂದು ಬಲಗೈಗೆ ತಗುಲಿ ಕುಸಿದುಬಿದ್ದಿದ್ದಾನೆ, ಕೂಡಲೇ ಅತನನ್ನು ವಶಕ್ಕೆ ಪಡೆದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಆತ ಚೇತರಿಸಿಕೊಂಡ ನಂತರ ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ಚೇತನ್‍ಸಿಂಗ್ ತಿಳಿಸಿದ್ದಾರೆ. ಪರಾರಿಯಾದ ಮತ್ತೊಬ್ಬ ಸರಗಳ್ಳ ರಾಜೇಶ್‍ಗಾಗಿ ಇಡೀ ರಾತ್ರಿ ಶೋಧಿಸಲಾಯಿತಾದರೂ ಆತ ಪತ್ತೆಯಾಗಿಲ್ಲ ರಾಮ್‍ಸಿಂಗ್ ನಡೆಸಿದ ಹಲ್ಲೆ ಗಾಯಗೊಂಡಿರುವ  ಇಮಾಮ್ ಸಾಬ್ ಕರಿಕಟ್ಟಿ ಹಾಗೂ ಬಿರಾದಾರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಸರಗಳ್ಳ ರಾಮ್‍ಸಿಂಗ್ ಸಮೀರ್ ಹೋಮಿ ಎಂಬ ಹೆಸರುಗಳಲ್ಲಿ ನಗರವಲ್ಲದೇ ದೇಶದ ವಿವಿಧ ನಗರಗಳಲ್ಲಿ ನಡೆದ ಹಲವು ಸರಗಳ್ಳತನದಲ್ಲಿ ಭಾಗಿಯಾಗಿದ್ದು ಮಂಗಳವಾರ ಮಧ್ಯಾಹ್ನ ಯಲಹಂಕದಲ್ಲಿ ಕಳವು ಮಾಡಿದ್ದ ಚಿನ್ನದ ಸರ ಹಾಗೂ ಪಲ್ಸರ್ ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

shoot out robbery ಸರಗಳ್ಳತ ಬಲಗೈ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ