ನಾಗರಿಕರ ಸೇವೆಗೆ 'ಸುವಿಧಾ ಮತ್ತು ಸಮಾಧಾನ್'

Suvidha and Samadhan for civil service

11-04-2018

ಬೆಂಗಳೂರು: ಚುನಾವಣೆಗೆ ಸಂಬಂಧಿಸಿದ ಅನುಮತಿ, ಪರವಾನಗಿ ಹಾಗೂ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಭಾರತದ ಚುನಾವಣಾ ಆಯೋಗವು 'ಸುವಿಧಾ ಮತ್ತು ಸಮಾಧಾನ್' ಎಂಬ ಎರಡು ನಾಗರಿಕ ಸೇವಾ ಅಪ್ಲಿಕೇಷನ್‍ಗಳನ್ನು ಅಭಿವೃದ್ಧಿಪಡಿಸಿ ರಾಜ್ಯ ಮುಖ್ಯ ಚುನವಣಾಧಿಕಾರಿಗಳ ವೆಬ್‍ಸೈಟ್ ನಲ್ಲಿ ಹೋಸ್ಟ್ ಮಾಡಲಾಗಿದೆ.

ಸುವಿಧಾ:

ಚುನಾವಣೆಗೆ ಸಂಬಂಧಿಸಿದ ಅನುಮತಿ/ಪರವಾನಗಿಗಳನ್ನು 24 ಗಂಟೆಗೊಳಗೆ ನೀಡಲು ಸುವಿಧಾ ಎಂಬ ಏಕಗವಾಕ್ಷಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಭೆ, ರ‍್ಯಾಲಿ, ವಾಹನ, ತಾತ್ಕಾಲಿಕ ಚುನಾವಣಾ ಕಚೇರಿ, ಧ್ವನಿವರ್ಧಕ, ಇತ್ಯಾದಿಗಳಿಗೆ ಅನುಮತಿಗಾಗಿ ‘ಸುವಿಧಾ’ ಬಳಸಬಹುದು. ಬ್ಯಾಕ್‍ಎಂಡ್‍ನಲ್ಲಿ ವಿವಿಧ ಪ್ರಾಧಿಕಾರ/ಇಲಾಖೆಗಳ ಸಮನ್ವಯವನ್ನು ಒಂದೇ ಗವಾಕ್ಷಿಯಲ್ಲಿ ಲಭ್ಯವಾಗುವಂತೆ ‘ಸುವಿಧಾ’ ದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಈ ವ್ಯವಸ್ಥೆಯನ್ನು ಪ್ರತಿ ಚುನಾವಣಾಧಿಕಾರಿಗಳ ಮಟ್ಟದಲ್ಲಿ, ಪ್ರತಿ ಉಪ-ವಿಭಾಗದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅರ್ಜಿ ಸಲ್ಲಿಸುವುದು, ಪ್ರಕ್ರಿಯೆ, ಅನುಮತಿ ನೀಡುವಿಕೆಯನ್ನು ಸಹಕ್ರಿಯೆಯ ಆಧಾರದಲ್ಲಿ ಮಾಡಲಾಗಿದೆ. ಆದರೆ, ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್‍ಗಳ ಬಳಕೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಕನಿಷ್ಟ36 ಗಂಟೆಗಳ ಮೊದಲು ಸಲ್ಲಿಸಬೇಕು.

‘ಸುವಿಧಾ’ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಸಹಕಾರಿಯಾಗಿದೆ. ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆಯಲು ಎಲ್ಲ ಪಕ್ಷಗಳು ಮತ್ತು ಸ್ಪತಂತ್ರ ಅಭ್ಯರ್ಥಿಗಳಿಗೆ ‘ಸುವಿಧಾ’ ಸಮಾನ ಅವಕಾಶ ಕಲ್ಪಿಸುತ್ತದೆ. ಅನುಮತಿ ನೀಡುವ ಪ್ರಾಧಿಕಾರಗಳು ಏಕಗವಾಕ್ಷಿಯಲ್ಲಿ ಲಭ್ಯವಾಗುವುದರಿಂದ ಕ್ಷಿಪ್ರಗತಿಯಲ್ಲಿ ಅನುಮತಿ ನೀಡುವುದು ಸಾಧ್ಯವಾಗಿದೆ. ಎಲ್ಲ ಸಂಬಂಧಿತ ಮಾಹಿತಿಯನ್ನು ಸಲ್ಲಿಸಿರುವ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಅನುಮತಿಗಳನ್ನು ನೀಡಲಾಗುವುದು. ಅಪೂರ್ಣ ಮಾಹಿತಿಗಳನ್ನು ತಿರಸ್ಕರಿಸಲಾಗುವುದು. ಪ್ರತಿ ಚುನಾವಣಾಧಿಕಾರಿಗಳ ಕಚೇರಿಯು ಸುವಿಧಾ ಹೆಲ್ಪ್‍ ಡೆಸ್ಕ್‍ಅನ್ನು ಹೊಂದಿದ್ದು, ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳಿಗೆ ಸಹಾಯ ಮಾಡಲು ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಏಪ್ರಿಲ್9, 2018 ರವರೆಗೆ 336 ಅಪ್ಲಿಕೇಷನ್‍ಗಳು ಅನುಮತಿ ಕೋರಿ ಸ್ವೀಕೃತವಾಗಿದ್ದು, ಈ ಪೈಕಿ 207ನ್ನು ವಿಲೇವಾರಿ ಮಾಡಲಾಗಿದೆ. ಗರಿಷ್ಠ 66 ಅರ್ಜಿಗಳು ಉಡುಪಿ ಜಿಲ್ಲೆಯಲ್ಲಿ ಸ್ವೀಕೃತವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ 44 ಸ್ವೀಕೃತವಾಗಿವೆ. ರಾಜಕೀಯ ಪಕ್ಷಗಳು ಹೆಚ್ಚಿನ ಸಮಯ, ಶ್ರಮ ವ್ಯರ್ಥ ಮಾಡದೆ ಸುಲಭವಾಗಿ ಈ ಅರ್ಜಿಗಳನ್ನು ಬಳಸಬಹುದಾಗಿದೆ. ಸ್ವತಂತ್ರ ಅಭ್ಯರ್ಥಿಗಳು ಮತ್ತು ಹೊಸದಾಗಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಮತ್ತು ಪಕ್ಷಗಳಿಗೆ ಸಹ ಸುವಿಧಾ ಅನುಕೂಲಕರವಾಗಿದೆ. ಅನುಮತಿಗಾಗಿ ವಿವಿಧ ಅಧಿಕಾರಿಗಳನ್ನು ಭೇಟಿ ಮಾಡುವ ತೊಂದರೆ ಸುವಿಧಾದಿಂದ ಇಲ್ಲವಾಗಿದೆ.

ಸಮಾಧಾನ್:

ನಾಗರೀಕರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಮಾಜದ ವಿವಿಧ ಸ್ಥರದ ಎಲ್ಲಾ ರೀತಿಯ ದೂರುಗಳು, ಕುಂದು-ಕೊರತೆ, ಸಲಹೆ-ಸೂಚನೆಗಳನ್ನು ಒಂದೇ ವೇದಿಕೆಯಡಿ ಸಲ್ಲಿಸಲು ಅವಕಾಶವಾಗುವಂತಹ ವ್ಯವಸ್ಥೆಯನ್ನು ಚುನಾವಣಾ ಆಯೋಗವು ‘ಸಮಾಧಾನ್’ ಅನ್ನುವ ವ್ಯವಸ್ಥೆಯನ್ನು ಸಿದ್ಧಪಡಿಸಿದೆ.

ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ದೂರುಗಳು ಇಲ್ಲವೆ ಸಲಹೆಗಳನ್ನು ಬಹುಮಾಧ್ಯಮಗಳ ಮೂಲಕ ದಾಖಲಿಸುವ ಈ ವ್ಯವಸ್ಥೆಯು ಅದಕ್ಕೆ ಪರಿಹಾರವನ್ನು ದೊರಕಿಸಿಕೊಡುವಲ್ಲಿಯೂ ಸಹಕಾರಿಯಾಗಿದೆ. ನಾಗರೀಕರು ಸಹಾಯವಾಣಿ 1950, ಇಲ್ಲವೇ ವೆಬ್‍ಸೈಟ್, ಫ್ಯಾಕ್ಸ್, ಎಸ್‍ಎಂಎಸ್ ಸೇರಿದಂತೆ ಇನ್ನಿತರ ಮಾಧ್ಯಮಗಳನ್ನು ಬಳಸಿಕೊಂಡು ದೂರು/ಸಲಹೆಗಳನ್ನು ದಾಖಲಿಸಲು ಆಯೋಗವು ಅವಕಾಶ ಮಾಡಿಕೊಟ್ಟಿದೆ.

‘ಸಮಾಧಾನ್’ದಲ್ಲಿ ನಾಗರೀಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಇಲ್ಲವೆ ಸಲಹೆ ಅಥವಾ ಯಾವುದೇ ನೆರವು ಬೇಕಾಗಿದ್ದಲ್ಲಿ ಅಥವಾ ಉಲ್ಲಂಘನೆಯಾದ ಪ್ರಕರಣಗಳಿಗೆ ಸೇರಿದಂತೆ ವಿವಿಧ ರೀತಿಯ ವಿಷಯವಾರು ರೂಪದಲ್ಲಿ ದಾಖಲಿಸಲು ಅವಕಾಶವಿದೆ. ನಕಲಿ ಇಲ್ಲವೆ ತಪ್ಪು ಮಾಹಿತಿಗಳನ್ನು ನೀಡುವುದನ್ನು ತಪ್ಪಿಸಲು ದೂರುದಾರರ ಗುರುತಿಗಾಗಿ ಪ್ರತ್ಯೇಕವಾದ ಐಡಿಯನ್ನು ಸಕ್ರಿಯಗೊಳಿಸಿ ಅದಕ್ಕೆ ಅವರ ಮೊಬೈಲ್ ಸಂಖ್ಯೆಯನ್ನು ಜೋಡಿಸಲಾಗುತ್ತದೆ. ಇದೇ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಸಲ್ಲಿಸಿದ ಅರ್ಜಿಯ ಸ್ಥಿತಿ-ಗತಿಯನ್ನು ಅರಿತುಕೊಳ್ಳಬಹುದಾಗಿದೆ.

ಕನ್ನಡದಲ್ಲಿ ದೂರು ಸಲ್ಲಿಸಲು ಅನುವಾಗುವಂತೆ ’ಯೂನಿಕೋಡ್’ ತಂತ್ರಾಂಶವನ್ನು ಅಳವಡಿಸಲಾಗಿದೆ. ದೂರುಗಳನ್ನು ಚುನಾವಣಾಧಿಕಾರಿಗಳು/ ಉಪಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ದಾಖಲಿಸಲಾಗುತ್ತದೆ. ಮತದಾನಕ್ಕೆ ಸಂಬಂಧಿಸಿದ ದೂರುಗಳನ್ನು ಮುಖ್ಯಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸಲ್ಲಿಸಲು ಅವಕಾಶವಿದೆ. ಸಲ್ಲಿಸಲಾಗುವ ಅರ್ಜಿಗಳನ್ನು ಸರಿಸುಮಾರು 24 ಗಂಟೆಗಳ ಒಳಗಾಗಿ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲಾಗುತ್ತದೆ. ತೆಗೆದುಕೊಂಡ ಕ್ರಮಗಳ ಬಗ್ಗೆ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಲಾಗುತ್ತದೆ.

‘ಸಮಾಧಾನ್’ದಲ್ಲಿ ಇದುವರೆಗೆ 253ದೂರು ಮತ್ತು ಸಲಹೆಗಳನ್ನು ದಾಖಲಿಸಲಾಗಿದ್ದು, ಈ ಪೈಕಿ 172 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘನೆಗೆ ಸಂಬಂಧಿಸಿದಂತೆ ಛಾಯಾಚಿತ್ರ, ಮುದ್ರಿತ ಧ್ವನಿ, ವಿಡಿಯೋಗಳನ್ನು ದೂರಿನ ಜೊತೆ ಸಲ್ಲಿಸಬಹುದು ಹಾಗೂ ಆಡಿಯೋ, ವಿಡಿಯೋ, ಚಿತ್ರ ಹಾಗೂ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಸಹ ಅವಕಾಶವಿದೆ. ಚುನಾವಣಾ ಆಯೋಗವು ಸುಗಮ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಅನುವಾಗುವಂತೆ ಸಾರ್ವಜನಿಕರು ಈ ವೇದಿಕೆಯನ್ನು ಬಳಸಿಕೊಂಡು ಆಯೋಗಕ್ಕೆ ನೆರವಾಗಬಹುದಾಗಿದೆ.


ಸಂಬಂಧಿತ ಟ್ಯಾಗ್ಗಳು

samadhan suvidha ವೇದಿಕೆ ದಾಖಲೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ