'ಮದುವೆ,ಹುಟ್ಟುಹಬ್ಬಕ್ಕೆ ಆಯೋಗದ ಅನುಮತಿ ಬೇಡ'11-04-2018

ಬೆಂಗಳೂರು: ಮದುವೆ, ಹುಟ್ಟುಹಬ್ಬ ಸೇರಿದಂತೆ ಇನ್ನಿತರ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಚುನಾವಣಾ ಆಯೋಗದ ಅನುಮತಿಯ ಅಗತ್ಯವಿಲ್ಲವೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮದುವೆ, ಹುಟ್ಟುಹಬ್ಬಗಳಂತಹ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡುವಂತೆ ಸಾರ್ವಜನಿಕರು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮಾದರಿ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ. ವಾಸ್ತವವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಅಗತ್ಯವಿರುವುದಿಲ್ಲವೆಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟೀಕರಿಸಿದ್ದಾರೆ.

ಹಾಗೆಯೇ, ರಾಜಕೀಯ ವ್ಯಕ್ತಿಗಳು ಭಾಗವಹಿಸದಿರುವ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಹ ಅನುಮತಿಯ ಅಗತ್ಯವಿರುವುದಿಲ್ಲ. ಆದರೆ, ಸಾರ್ವಜನಿಕರು ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮಾದರಿ ನೀತಿ ಸಂಹಿತಿ ಜಾರಿ ದಳದ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯಕ್ತಿಗಳು ಉಡುಗೊರೆ ಹಂಚುತ್ತಿರುವುದು, ಇಲ್ಲವೆ ಊಟದ ವ್ಯವಸ್ಥೆ ಸೇರಿದಂತೆ ಮತದಾರರನ್ನು ಒಲಿಸಲು ಯಾವುದೇ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ, ಅಂತಹವರ ಮೇಲೆ ಆಯೋಗವು ಕಾನೂನಿನ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ನಗದು ಮಿತಿ: ಸಾರ್ವಜನಿಕರು ತಮ್ಮೊಂದಿಗೆ ಯಾವುದೇ ದಾಖಲೆಗಳಿಲ್ಲದೆ ರೂ.50,000/-ರೂ.ಗಳವರೆಗಿನ ಮೊತ್ತವನ್ನು ತಮ್ಮೊಂದಿಗೆ ಪ್ರಯಾಣದ ವೇಳೆಯಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ. ಹಾಗೆಯೇ, ರೂ.10,000/-ಇಲ್ಲವೇ ಅದಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ದಾಖಲೆಗಳ ಅವಶ್ಯಕತೆ ಇರುವುದಿಲ್ಲ . 

ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ 1255 ಚೆಕ್‍ ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆಯ ವೇಳೆ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಸ್ಥಾಪಿಸಲಾಗಿದೆ. ವಾಹನಗಳು ಮತ್ತು ಲಗೇಜುಗಳನ್ನು ತಪಾಸಿಸುವ ವೇಳೆ ಸಾರ್ವಜನಿಕರು ಸಹಕರಿಸುವಂತೆ ಆಯೋಗವು ಮನವಿ ಮಾಡಿದೆ.

ಒಂದು ಪಕ್ಷ ಎಲ್ಲ ದಾಖಲೆಗಳಿದ್ದರೂ ಅನಗತ್ಯವಾಗಿ ಚೆಕ್‍ ಪೋಸ್ಟ್ಗಳಲ್ಲಿ ತೊಂದರೆ ನೀಡಿದಲ್ಲಿ ಇಲ್ಲವೇ ಅಕ್ಷಮ್ಯವೆನಿಸುವ ರೀತಿಯಲ್ಲಿ ತಪಾಸಣೆ ನಡೆಸಿದರೆ ಅವುಗಳ ಬಗ್ಗೆ ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಮುಂದೆ ಬಾಧಿತರು ದೂರನ್ನು ಸಲ್ಲಿಸಬಹುದು.

 


ಸಂಬಂಧಿತ ಟ್ಯಾಗ್ಗಳು

code of conduct Sanjiv Kumar ಅಧ್ಯಕ್ಷ ಚೆಕ್‍ ಪೋಸ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ