ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಏಪ್ರಿಲ್ 13ರಂದು ಪ್ರಕಟ!

List of Congress candidates may announce on 13April..!

11-04-2018

ಬೆಂಗಳೂರು: ಮೇ ತಿಂಗಳ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಈ ತಿಂಗಳ 13ರಂದು ಪ್ರಕಟಿಸಲಿದೆ.

ದೆಹಲಿಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಲ್ಲಿ ಒಬ್ಬರಾದ ಮಧುಸೂಧನ್ ಮಿಸ್ತ್ರಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಕಳೆದೆರಡು ದಿನಗಳಿಂದ ಸಭೆ ನಡೆದಿದೆ. ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸ್ಕ್ರೀನಿಂಗ್ ಕಮಿಟಿ ಸದಸ್ಯರುಗಳಾದ ಗೌರವ್ ಗೋಗೊಯ್ ಹಾಗೂ ಥಾಮಸ್ ಧ್ವಜ್ ಸಾಹೂ ಭಾಗವಹಿಸಿದ್ದರು.

ಮೊದಲ ದಿನ 115ರಿಂದ 120 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳಿಗೆ ಸಹಮತ ಏರ್ಪಟ್ಟಿತ್ತು, ಇನ್ನೂ ಕೆಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಲ ಆಕಾಂಕ್ಷಿಗಳಿದ್ದು, ಆ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ನಿನ್ನೆ ಚರ್ಚಿಸಲಾಯಿತು.

ಸ್ಕ್ರೀನಿಂಗ್ ಕಮಿಟಿ ಏನೇ ಇದ್ದರೂ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ‌ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಪ್ತರಿಗೆ ಟಿಕೆಟ್ ದೊರಕಿಸಿಕೊಡುವುದರಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.

2013ರ ಚುನಾವಣೆಯಲ್ಲಿ ಪರಾಭವಗೊಂಡು ಈ ಬಾರಿ ಟಿಕೆಟ್ ಆಕಾಂಕ್ಷಿಗಳ ಮತ್ತು 2013ರಲ್ಲಿ ಗೆಲವು ಸಾಧಿಸಿದ್ದ 122 ಅಭ್ಯರ್ಥಿಗಳ ಕುರಿತು ಪ್ರತ್ಯೇಕ ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲ ದಿನದ ಸಭೆಯಲ್ಲಿ ಬೆಳಗಾವಿ ಹಾಗೂ ಮೈಸೂರು ವಿಭಾಗ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಸಮಾಲೋಚನೆ ಮಾಡಲಾಗಿದೆ.

ಎರಡನೇ ದಿನದ ಸಭೆಯಲ್ಲಿ ಕಲಬುರಗಿ ಹಾಗೂ ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದು ಮತ್ತೆ ದೆಹಲಿಯಲ್ಲಿ ಏಪ್ರಿಲ್ 13ರಂದು ನಡೆಯಲಿರುವ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು. ಆ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವುದು.

ಸ್ಕ್ರೀನಿಂಗ್ ಕಮಿಟಿಯಿಂದ ಅಂತಿಮವಾದ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕೇಂದ್ರೀಯ ಚುನಾವಣಾ ಸಮಿತಿ ಅನುಮೋದಿಸಬೇಕು. ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಈ ಸಮಿತಿ ಸಭೆ ನಡೆಯಲಿದೆ ಎನ್ನಲಾಗಿದೆ. ಈ ಸಭೆಯ ಒಪ್ಪಿಗೆ ನಂತರ ಎಐಸಿಸಿ ಸಂಘಟನಾ ಕಾರ್ಯದರ್ಶಿ ಅಶೋಕ್ ಗೆಹ್ಲೊಟ್ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವರು.

ಇತ್ತೀಚೆಗೆ ಜಾತ್ಯತೀತ ಜನತಾದಳದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಚೆಲುವರಾಯ ಸ್ವಾಮಿ-ನಾಗಮಂಗಲ, ಜಮೀರ್ ಅಹಮದ್ ಖಾನ್-ಚಾಮರಾಜ ಪೇಟೆ, ಎಚ್.ಸಿ.ಬಾಲಕೃಷ್ಣ-ಮಾಗಡಿ, ಭೀಮಾ ನಾಯಕ್-ಹಗರಿ ಬೊಮ್ಮನಹಳ್ಳಿ, ಅಖಂಡ ಶ್ರೀನಿವಾಸ ಮೂರ್ತಿ-ಪುಲಿಕೇಶಿ ನಗರ, ಇಕ್ಬಾಲ್ ಅನ್ಸಾರಿ-ಗಂಗಾವತಿ ಹಾಗೂ ರಮೇಶ್ ಬಂಡೀಸಿದ್ದೇ ಗೌಡ-ಶ್ರೀರಂಗಪಟ್ಟಣ ಅವರಿಗೆ 2013ರಲ್ಲಿ ಜಯಗಳಿಸಿದ್ದ ಕ್ಷೇತ್ರಗಳಿಂದಲೇ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅದಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ.

ಅಶೋಕ್ ಖೇಣಿ, ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಭೀಮಾ ನಾಯಕ್ ಅವರಿಗೆ ಟಿಕೆಟ್ ನೀಡುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿರುವರಾದರೂ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾತು ಕೊಟ್ಟಿದ್ದೇವೆ, ಈ ಬಾರಿ ಗೆಲುವಷ್ಟೇ ಮುಖ್ಯ, ಟಿಕೆಟ್ ನೀಡಲೇ ಬೇಕು ಎಂದು ಪಟ್ಟುಹಿಡಿದಿದ್ದಾರೆ.

ಇನ್ನೂ,ಇತ್ತೀಚಿಗೆ ನಿಧನರಾದ ಬೇಲೂರು ಶಾಸಕ ರುದ್ರೇ ಗೌಡರ ಸಹೋದರನಿಗೆ ಈ ಬಾರಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಅನಾರೋಗ್ಯದಿಂದ ಇರುವ ಬಾದಾಮಿಯ ಬಿ.ಬಿ.ಚಿಮ್ಮನಕಟ್ಟಿ ಹಾಗೂ ಆರೋಪ ಎದುರಿಸುತ್ತಿರುವ ಎಚ್.ವೈ.ಮೇಟಿ, ಪರಮೇಶ್ವರ್ ನಾಯ್ಕ ಅವರ ಹೆಸರುಗಳು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸೇರುವುದು ಅನುಮಾನ ಎನ್ನಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

siddaramaiah AICC ಎಚ್.ವೈ.ಮೇಟಿ ಪಟ್ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ