ಬಿಜೆಪಿ ಮೊದಲ ಪಟ್ಟಿ-ಅತೃಪ್ತರ ಆಕ್ರೋಶ

BJP

09-04-2018

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುತ್ತಿದ್ದಂತೆ ಪಕ್ಷದಲ್ಲಿ ಸಣ್ಣ ಪ್ರಮಾಣದಲ್ಲಿ ಅಸಮಾಧಾನ ಬುಗಿಲೆದ್ದಿದೆ. ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ತುಳಸಿ ಮುನಿರಾಜು ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ. ಆದರೆ, ತುಳಸಿ ಮುನಿರಾಜು ಅವರು ಸ್ಥಳೀಯರಲ್ಲ ಎನ್ನುವ ಕಾರಣಕ್ಕೆ ಟಿಕೆಟ್ ಆಕಾಂಕ್ಷಿಗಳಾದ ಜಿ.ಎಂ.ರಾಮಚಂದ್ರ ಹಾಗೂ ಹನುಮಂತ ರಾಯಪ್ಪ ತೀವ್ರ ಅಸಮಾಧಾನಗೊಂಡಿದ್ದು, ತಮ್ಮ ಮುಂದಿನ ನಿರ್ಧಾರ ಗಳ ಬಗ್ಗೆ ಬೆಂಬಲಿಗರ ಸಭೆ ನಡೆಸಿದ್ದಾರೆ. ರಾಮಚಂದ್ರ ಹಾಗೂ ಹನುಮಂತ ರಾಯಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಮಚಂದ್ರ ಕಳೆದ ಎರಡು ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಈ ಬಾರಿ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸ್ಪರ್ಧೆಗಾಗಿ ಸಿದ್ಧತೆಯನ್ನೂ ನಡೆಸಿದ್ದರು.

ಇನ್ನು ಕಳೆದ ಬಾರಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಿಪ್ಪೇಸ್ವಾಮಿ ನಂತರ ಶ್ರೀ ರಾಮುಲು ಅವರೊಂದಿಗೆ ಬಿಜೆಪಿಗೆ ಸೇರ್ಪಡೆ ಗೊಂಡಿದ್ದರು. ಆದರೆ, ಈ ಬಾರಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಅನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಇದು ಸ್ವತಃ ತಿಪ್ಪೇಸ್ವಾಮಿ ಹಾಗೂ ಅವರ ಬೆಂಬಲಿಗರ ತೀವ್ರ ಆಕ್ರೋಶ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ತಿಪ್ಪೇಸ್ವಾಮಿ ಈಗಾಗಲೇ ತಮ್ಮ ಮುಂದಿನ ತೀರ್ಮಾನದ ಬಗ್ಗೆ ಬೆಂಬಲಿಗರ ಸಭೆ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷ ಯಡಿಯೂರಪ್ಪ ನವರೊಂದಿಗೆ ಚರ್ಚಿಸಲು ಬೆಂಗಳೂರಿಗೆ ಧಾವಿಸಿದ್ದಾರೆ. ತಿಪ್ಪೇಸ್ವಾಮಿ ಬೆಂಬಲಿಗರು ನೆರ್ಲಗುಂಟೆ ಬಳಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಪ್ರಕಟಿಸದ ಕಾರಣಕ್ಕಾಗಿ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿ ರೇವು ನಾಯಕ್ ಬೆಳಮಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಟಿಕೆಟ್ ತಪ್ಪಿಸುವ ಸಲುವಾಗಿ ಕೆಲವರು ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂದು ದೂರಿದ್ದಾರೆ. ಬಿಜೆಪಿಯಲ್ಲಿ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳದಂತೆ ಚುನಾವಣಾ ಟಿಕೆಟ್ ಮಾರಾಟವಾಗೊಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election candidates ಜನತಾದಳ ಬಿಎಸ್ಆರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ