ಸಚಿವ-ಜಿಲ್ಲಾಧಿಕಾರಿ ಜಟಾಪಟಿ

Rohini sindhuri v/s A.manju

07-04-2018

ಬೆಂಗಳೂರು: ಇದೊಂದು ವಿಲಕ್ಷಣ ಪ್ರಕರಣ, ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳಿಗೂ ಅವಕಾಶಗಳಿವೆ. ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ.ಅವರ ನಡುವಿನ ಈ ಗುದ್ದಾಟ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಹೆಚ್ಚು ಪ್ರಭಾವಶಾಲಿಯೋ ಇಲ್ಲವೆ ಕಾರ್ಯಾಂಗವೋ ಎನ್ನುವ ಕುತೂಹಲ ಚರ್ಚೆಗೂ ದಾರಿ ಮಾಡಿ ಕೊಟ್ಟಿದೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಜಟಾಪಟಿಗೆ ನಾಂದಿ ಹಾಡಿದ್ದು, ಶ್ರವಣಬೆಳಗೊಳದಲ್ಲಿ ನಡೆದ ಬಾಹುಬಲಿಯ ಮಹಾಮಸ್ತಕಾಭಿಷೇಕ. ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದಂತೆ ಕರೆಯಲಾದ ಟೆಂಡರ್ ಗೆ ಎ.ಮಂಜು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ತಮ್ಮ ಮಾತು ಕೇಳದ ಜಿಲ್ಲಾಧಿಕಾರಿ ರೋಹಿಣಿ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಿಸಿದರು. ಅದಕ್ಕೆ ಚುನಾವಣಾ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ವರ್ಗಾವಣೆ ಮಾಡುವಂತಿಲ್ಲ ಎಂದು ತಡೆ ನೀಡಿತ್ತು. ಮೊದಲ ಬಾರಿಗೆ ಜಿಲ್ಲಾಧಿಕಾರಿ ರೋಹಿಣಿ ವರ್ಗಾವಣೆಯಿಂದ ಬಚಾವಾಗಿದ್ದರು.

ನಂತರ, ಸರ್ಕಾರ ಮತ್ತೆ ರೋಹಿಣಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿತು‌. ಅದನ್ನು ರೋಹಿಣಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿ ಗೆಲುವು ಕಂಡರು. ಈಗ ವರ್ಗಾವಣೆ ಪ್ರಕರಣ ಹೈಕೋರ್ಟ್ ಮೆಟ್ಟಿಲು ಹತ್ತಿ ಮತ್ತೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿಯ ಮುಂದಕ್ಕೆ ಬಂದಿದೆ.

ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ನಂತರ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಜಿಲ್ಲಾ ಕಚೇರಿಯಲ್ಲಿ ಅವರ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದನ್ನು ತಡೆದು ಅವರನ್ನು ಹೊರ ಹಾಕಿ ಬೀಗ ಜಡಿದು ಸ್ವತಃ  ಸಚಿವ ಎ.ಮಂಜು ಅವರ ವಿರುದ್ಧವೇ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ.

 

ಈ ಘಟನೆ ಇಬ್ಬರ ನಡುವಿನ ಜಟಾಪಟಿಯನ್ನು ತಾರಕಕ್ಕೇರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಬೀಗ ಜಡಿಯಬಹುದೇ ಎನ್ನುವ ಪ್ರಶ್ನೆಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಸಚಿವ ಎ.ಮಂಜು 'ನಾನು ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ, ಅದು ಸಚಿವ ಕಚೇರಿ. ಅಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲಾಗುತ್ತಿತ್ತೇ ಹೊರತು ಪಕ್ಷದ ಕೆಲಸ ಮಾಡುತ್ತಿರಲಿಲ್ಲ, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೇ ನೋಟಿಸ್ ನೀಡುವ ಅರ್ಹತೆ ಇದೆಯೇ ಅನ್ನುವುದನ್ನು ಅವರು ಅರಿತು ಕೊಳ್ಳಬೇಕಿದೆ. ಹಾಗಾಗಿ, ಜಿಲ್ಲಾಧಿಕಾರಿ ರೋಹಿಣಿ ಅವರ ವರ್ಗಾವಣೆ ಕೋರಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ' ಎನ್ನುತ್ತಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಜಿಲ್ಲಾಧಿಕಾರಿ ರೋಹಿಣಿ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ. ಇಲ್ಲಿ ಕುತೂಹಲ ಕರ ಸಂಗತಿ ಎಂದರೆ ಹಾಸನ ಜಿಲ್ಲೆಯ ಲೋಕಸಭಾ ಸದಸ್ಯರು ಜಾತ್ಯತೀತ ಜನತಾದಳದ ಅಧ್ಯಕ್ಷರೂ ಆದ ಹೆಚ್.ಡಿ.ದೇವೇಗೌಡ ಹಾಗೂ ಅವರ ಪುತ್ರ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜಿಲ್ಲಾಧಿಕಾರಿ ಪರ ಇದ್ದಾರೆ. ಅವರ ಎಲ್ಲಾ ಕಾರ್ಯಗಳನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

A.Manju Rohini Sindhuri ಕುತೂಹಲ ಎಚ್.ಡಿ.ದೇವೇಗೌಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ