‘ಸಿದ್ದರಾಮಯ್ಯ ಬಗ್ಗೆ ಏನನ್ನು ಹೇಳಲಾರೆ’

BJP foundation day at bangalore bjp office

06-04-2018

ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆದ್ದು, ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಉತ್ತರ ಪ್ರದೇಶದ ಫಲಿತಾಂಶ ರಾಜ್ಯದಲ್ಲಿ ಮರುಕಳಿಸಲಿದೆ. ಈ ವಿಚಾರದಲ್ಲಿ ಯಾವುದೇ ಸಂದೇಹ ಬೇಡ ಎಂದು ಹೇಳಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕದಲ್ಲಿ ಅನಿರೀಕ್ಷಿತ ಫಲಿತಾಂಶಕ್ಕೆ ರಾಜ್ಯದ ಜನತೆ ಕಾತುರರಾಗಿದ್ದಾರೆ. ನಾವು ವಿಷನ್ 150 ಗುರಿಯನ್ನು ತಲುಪುವುದರಲ್ಲಿ ಯಾವ ಅನುಮಾನವೂ ಬೇಡ. ಅದಕ್ಕೆ ಬೇಕಾದ ಕಾರ್ಯ ತಂತ್ರವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ಒಟ್ಟು 16 ಸಮೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಪಪಡಿಸಲಾಗುತ್ತಿದೆ. ಎರಡು ದಿನಗಳಿಂದ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ಕೇಂದ್ರ ಮಂಡಳಿಗೆ ಕಳುಹಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದು, ನಂತರ ಪಟ್ಟಿ ಪ್ರಕಟವಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಏನನ್ನು ಹೇಳಲಾರೆ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವವರ ಬಗ್ಗೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ತಮ್ಮ ಸ್ವಂತ ಕ್ಷೇತ್ರಗಳಾದ ಚಾಮುಂಡೇಶ್ವರಿ, ವರುಣಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರ ಹುಡುಕುವ ದಯನೀಯ ಪರಿಸ್ಥಿತಿ ಅವರಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು. ನಮ್ಮಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ಸಣ್ಣಪುಟ್ಟ ಗೊಂದಲ ಇರಬಹುದು. ಆದರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ ಆಗ ಅವರ ಒಳಜಗಳ ಬೀದಿಗೆ ಬರುತ್ತದೆ ಎಂದು ಟೀಕಿಸಿದರು.

ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರ ಭಾಗವಾಗಿ ಕೆಲಸ ಮಾಡಿದ್ದೆ. ಏಪ್ರಿಲ್ 6 ನಮಗೆ ಸಂಭ್ರಮದ ದಿನ 38 ವರ್ಷಗಳ ಹಿಂದೆ ನಾವು ಮರುಹುಟ್ಟು ಪಡೆದುಕೊಂಡಿದ್ದೇನೆ ಎಂದರು. ನಮಗೆ ಆರ್.ಎಸ್.ಎಸ್ ಎಂದರೆ ತಾಯಿ ಮತ್ತು ಮಗುವಿನ ಸಂಬಂಧವಿದ್ದ ಹಾಗೆ . ಪ್ರಪಂಚದಲ್ಲೇ ಅತಿದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ. ಸಂಘಟನೆಯಲ್ಲಿ ನಾನು ಗುರುತಿಸಿಕೊಂಡಿರುವುದಕ್ಕೆ ಹೆಮ್ಮೆ ಇದೆ ಎಂದರು.

1984ರಲ್ಲಿ ಬಿಜೆಪಿ ಕೇವಲ ಎರಡು ಸ್ಥಾನ ಗೆದ್ದಿತ್ತು. ಇಂದು ಕೇಂದ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಹುಮತ ಪಡೆದು ಅಧಿಕಾರ ನಡೆಸುತ್ತಿದ್ದೇವೆ. ವಿಶ್ವದಲ್ಲೇ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷ ಎಂಬ ಹೆಗ್ಗಳಿಕೆಗೂ ಬಿಜೆಪಿ ಪಾತ್ರವಾಗಿದೆ. ನಮ್ಮ ಪಕ್ಷದ ನೇತಾರ ಯಡಿಯೂರಪ್ಪ ನೇತೃತ್ವದಲ್ಲಿ ಜನಪರ ಸಭೆ ನಡೆಸಬೇಕೆಂಬುದು ನಮ್ಮೆಲ್ಲರ ದೃಢ ಸಂಕಲ್ಪ ಎಂದು ವಾಗ್ದಾನ ಮಾಡಿದರು. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಅರುಣ್‍ಕುಮಾರ್, ಮಂಜುಳಾ ಮತ್ತಿತರರು ಹಾಜರಿದ್ದರು


ಸಂಬಂಧಿತ ಟ್ಯಾಗ್ಗಳು

B.S.yeddyurappa siddaramaiah ಅಧಿಕಾರ ಸಂಸ್ಥಾಪನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ