ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸಿ ಸಿಎಂ ಆಗ್ರಹ



06-04-2018

ಮೈಸೂರು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆ ಇದ್ದಾಗಲೂ ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ಕಡಿಮೆಯಾಗಲಿಲ್ಲ. ಹಿಂದಿನ ಯುಪಿಎ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಆದರೆ, ಈಗ ಇಲ್ಲ. ಇದರಿಂದ ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯ ಆಗುತ್ತಿದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾನು ದರ ಕಡಿಮೆ ಮಾಡದೇ ರಾಜ್ಯ ಸರ್ಕಾರಗಳ ಮೇಲೆ ಜವಾಬ್ದಾರಿ ಹೊರಿಸುವುದೇಕೆ? ರಾಜ್ಯ ಸರ್ಕಾರ ಈ ಹಿಂದೆಯೂ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ಅಬಕಾರಿ ಸುಂಕ ವಸೂಲಿ ಮಾಡುತ್ತಿತ್ತು. ಈಗಲೂ ಮಾಡುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 130ರೂ. ಇತ್ತು. ಈಗ ಸುಮಾರು 50 ರೂ.ಗಳಾಗಿದೆ. ಆಗ ಪೆಟ್ರೋಲ್ ಬೆಲೆ ಲೀಟರ್ಗೆ 75 ರೂ.ಇತ್ತು. ಈಗ 75.ರೂ.ಆಗಿದೆ. ಆದರೆ, 35 ರೂ.ಗಳಿಗೆ ಪೆಟ್ರೋಲ್ ಮಾರಾಟ ಆಗಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ದಲಿತರ ಮೇಲಿನ ದೌರ್ಜನ್ಯ ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನವಾದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ನ್ಯಾಯಾಲಯದಲ್ಲಿಯೂ ಪರಿಣಾಮಕಾರಿಯಾಗಿ ಹೋರಾಟ ನಡೆಸಿಲ್ಲ. ಕಾಯ್ದೆ ತಿದ್ದುಪಡಿಗೂ ಮುಂದಾಗಲಿಲ್ಲ.

ಕಾಯಿದೆ ಒಂದು ಬಾರಿ ದುರ್ಬಲವಾದರೆ ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಮಾಡಲಾಗದು. ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರೆಗೂ ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ. ಪ್ರತಿಭಟನೆಗಳಲ್ಲಿ 9ಮಂದಿ ದಲಿತರು ಸಾವಿಗೀಡಾದರೂ ಪ್ರತಿಕ್ರಿಯೆ ಇಲ್ಲ. ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಹಿತ ಕಾಯುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಟೀಕಿಸಿದರು.

ಮೂರು ದಿನಗಳ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ವೇಳೆ ಬೆಂಬಲಿಗರ ಮನೆಗೆ ಊಟಕ್ಕೆ ಹೋಗಿದ್ದೆ. ಊಟ ಮಾಡಿ ಕುಳಿತಿದ್ದಾಗ ಕುರ್ಚಿ ಕುಸಿದು ತಲೆ ಶೋಕೇಸ್ ಗೆ ತಗುಲಿತು. ಅಷ್ಟಕ್ಕೆ ಕುರ್ಚಿಯಿಂದ ಬಿದ್ದ ಸಿಎಂ ರಾಜಕೀಯದಲ್ಲಿಯೂ ಬೀಳುತ್ತಾರೆ ಎಂಬ ವ್ಯಾಖ್ಯಾನ ಶುರುವಾಯಿತು. ಇಂತಹ ಮೂಢ ನಂಬಿಕೆಗೆ ಏನು ಹೇಳುವುದು?

ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದರು. 10-12 ಬಾರಿ ಹೋಗಿ ಬಂದೆ. ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿಲ್ಲವೇ? ನನ್ನ ಕಾರಿನ ಮೇಲೆ ಕಾಗೆ ಕುಳಿತಾಗಲೂ ಭಾರಿ ಚರ್ಚೆ ನಡೆಯಿತು.‌ ಬಜೆಟ್ ಮಂಡಿಸುವುದೇ ಇಲ್ಲ ಎಂದರು.  ಬೇರೆಯವರ ಟೀಕೆಗಳೇ ನನಗೆ ಪ್ಲಸ್ ಪಾಯಿಂಟ್ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕಾವೇರಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು 12ರಂದು ರಾಜ್ಯ ಬಂದ್ ಗೆ ಕರೆ ನೀಡಿವೆ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಪ್ರತಿಭಟನೆಯನ್ನು, ಸಿಟ್ಟನ್ನು ಬೇರೆ ರೂಪದಲ್ಲಿಯೂ ವ್ಯಕ್ತಪಡಿಸಬಹುದು. ಬಂದ್ ಅಗತ್ಯವಿಲ್ಲ ಎಂದು ಕನ್ನಡಪರ ಸಂಘಟನೆಗಳ ಮುಖಂಡರಿಗೆ ಮನವಿ ಮಾಡುತ್ತೇನೆ.

ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದು. ಮೂರೇ ತಿಂಗಳಲ್ಲಿ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಯುತ್ತದೆ ಎಂಬುದು ಪ್ರತಿಪಕ್ಷಗಳ ಭ್ರಮೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಜೆಡಿಎಸ್ ಸ್ಥಾನಗಳ ಸಂಖ್ಯೆ 25ರಿಂದ 30ಕ್ಕೆ ಸೀಮಿತವಾಗಲಿದೆ.

ಜನತಾ ಪರಿವಾರದ ಎಲ್ಲ ನಾಯಕರು ಒಂದಾಗಿದ್ದಾಗ ಜೆಡಿಎಸ್ ಗೆ 59 ಸ್ಥಾನಗಳು ಬಂದಿತ್ತು. ನಾಯಕರು ಒಬ್ಬೊಬ್ಬರಾಗಿ ಬಿಟ್ಟ ಮೇಲೆ 28ಕ್ಕೆ ಇಳಿಯಿತು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ ಸ್ಥಾನಗಳ ಸಂಖ್ಯೆ 40. ಅದರಲ್ಲಿ 11 ಮಂದಿ ಪಕ್ಷ ತೊರೆದಿದ್ದಾರೆ. ನಾನು ಆ ಪಕ್ಷದ ಅಧ್ಯಕ್ಷ ಆಗಿದ್ದವನು. ಹೀಗಾಗಿ ಜೆಡಿಎಸ್ ಶಕ್ತಿ ಎಲ್ಲೆಲ್ಲಿ ಇದೆ ಎಂಬುದು ನನಗೆ ಗೊತ್ತಿದೆ.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಚುನಾವಣೆಗೆ ಹೋದಾಗಲೇ ಜೆಡಿಎಸ್ ಗೆ ಬಂದ ಸ್ಥಾನಗಳ ಸಂಖ್ಯೆ 28. ದೇವೇಗೌಡರು, ಕುಮಾರಸ್ವಾಮಿಯವರೇ ಹೇಳುವಂತೆ ಮುಖ್ಯಮಂತ್ರಿಯಾಗಿ ಅವರು ಒಳ್ಳೆಯ ಕೆಲಸ ಮಾಡಿದ್ದರೆ ಸ್ಥಾನಗಳ ಸಂಖ್ಯೆ 59ರಿಂದ 28ಕ್ಕೆ ಕುಸಿದದ್ದು ಏಕೆ? ಎಂದು ಹೇಳಿದರು. ಮುಖ್ಯಮಂತ್ರಿಯಾದರೆ ಮುಂದೆ ಒಳ್ಳೆಯ ಕೆಲಸ ಮಾಡುವುದಾಗಿ ದೇವೇಗೌಡರು, ಕುಮಾರಸ್ವಾಮಿಯವರು ಹೇಳುತ್ತಿದ್ದಾರೆ. ಆದರೆ, ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂಬುದು ಮುಖ್ಯ.

ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವುದು ಖಚಿತ. ಈ ಕ್ಷೇತ್ರ ನನಗೆ ಸುರಕ್ಷಿತ ಅಲ್ಲ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನಾನು ಎಂಟನೇ ಬಾರಿಗೆ ಕಣಕ್ಕಿಳಿಯುತ್ತಿದ್ದೇನೆ. ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರು ಎರಡನೇ ಬಾರಿಗೆ ಇಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ವಸ್ತುಸ್ಥಿತಿ ಏನು ಎಂಬುದು ನನಗೆ ಗೊತ್ತಿದೆ.

ನನ್ನ ಸ್ಪರ್ಧೆಯಿಂದ ಚಾಮುಂಡೇಶ್ವರಿ ಕ್ಷೇತ್ರದ ಜನತೆಗೆ ಖುಷಿಯಾಗಿದೆ. ಅವರು ನನಗೆ ಆಶೀರ್ವಾದ ಮಾಡುವ ವಿಶ್ವಾಸವೂ ಇದೆ. ಈ ಕ್ಷೇತ್ರಕ್ಕೆ 2006ರಲ್ಲಿ ನಡೆದ ಮರು ಚುನಾವಣೆಯಲ್ಲೂ ಮಾಜಿ ಪ್ರಧಾನಿ ದೇವೇಗೌಡರು, ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಯಡಿಯೂರಪ್ಪ ಒಂದಾಗಿದ್ದರು. ಆದರೂ ಜನರು ಕೈ ಬಿಡಲಿಲ್ಲ.

ಮರು ಚುನಾವಣೆ ಗೆಲುವು ಸಿದ್ದರಾಮಯ್ಯ ಅವರದ್ದಲ್ಲ. ಚುನಾವಣಾ ವೀಕ್ಷಕರಾಗಿದ್ದ ಪೀಟರ್ ಅವರದ್ದು ಎಂದು ದೇವೇಗೌಡರು ಟೀಕೆ ಮಾಡುತ್ತಾರೆ. ಒಬ್ಬ ಚುನಾವಣಾ ವೀಕ್ಷಕರು ಚುನಾವಣೆಯಲ್ಲಿ ಯಾರನ್ನಾದರೂ ಗೆಲ್ಲಿಸಲು ಸಾಧ್ಯವೇ? ಪೀಟರ್ ಅವರು ದೇವೇಗೌಡರು, ಕುಮಾರಸ್ವಾಮಿಯವರ ಚುನಾವಣಾ ಅಕ್ರಮಗಳನ್ನು ತಡೆದರು ಅಷ್ಟೆ. ಆ ಕೋಪದಿಂದ ದೇವೇಗೌಡರು ಮಾತನಾಡುತ್ತಾರೆ.

ಹಣ, ಹೆಂಡ ಹಂಚಿ, ಬಾಡೂಟ ಹಾಕಿಸಿ ನಾನು ಯಾವತ್ತೂ ಚುನಾವಣೆ ಎದರಿಸಿಲ್ಲ. ಮತದಾರರಿಗೆ ಆಮಿಷ ತೋರಿಸುವ ಕೆಲಸ ಮಾಡಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನತೆ ನೂರಕ್ಕೆ ನೂರರಷ್ಟು ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

siddaramaiah petrol ಆಶೀರ್ವಾದ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ