‘ಬಿಎಸ್ವೈ ವಿರುದ್ಧ 4ಕೋಟಿ ಲಂಚ ಆರೋಪ’

Bribe allegation on yeddyurappa by v.s ugrappa

06-04-2018

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ಗುತ್ತಿಗೆ ನೀಡಿಕೆಯಲ್ಲಿ ನಾಲ್ಕು ಕೋಟಿ ರೂ.ಗಳನ್ನು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಲಂಚದ ರೂಪದಲ್ಲಿ ಪಡೆದಿದ್ದಾರೆ, ಇದು ಆದಾಯ ತೆರಿಗೆ ಇಲಾಖೆಯ ವರದಿಯಲ್ಲಿ ಬಹಿರಂಗಗೊಂಡಿದ್ದು, ಯಡಿಯೂರಪ್ಪ ಹಾಗು ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯನ್ನು ನೀರಾವರಿ ನಿಗಮದ ಮೂಲಕ 2007-08 ರಲ್ಲಿ ಗುತ್ತಿಗೆ ನೀಡಲಾಗಿದ್ದು ಯಡಿಯೂರಪ್ಪ ಅಧ್ಯಕ್ಷತೆಯ ನೀರಾವರಿ ನಿಗಮ ಭದ್ರಾ ಮೇಲ್ದಂಡೆ ಯೋಜನೆಯನ್ನು 1033 ಕೋಟಿ ರೂ.ಗೆ ಮುರುಡೇಶ್ವರ ಕಾರ್ಪೊರೇಷನ್ ಲಿಮಿಟೆಡ್ ಗೆ ನೀಡಿತ್ತು. ಅದರ ಸಹವರ್ತಿ ಕಂಪನಿಯಾದ ಆರ್.ಎನ್.ಎಸ್.ಎಲ್ ಇನ್ಫ್ರಾಸ್ಟ್ರಕ್ಚರ್ ನಿಂದ ಯಡಿಯೂರಪ್ಪ ಒಂದು ಕೋಟಿ ತೆಗೆದುಕೊಂಡಿದ್ದಾರೆ. ಈ ಹಣ ಲಂಚವಾಗಿ ತೆಗೆದುಕೊಂಡಿದ್ದಾರೆ, 2009-10ರಲ್ಲಿ ಒಂದು ಕೋಟಿ ತೆಗೆದುಕೊಂಡಿದ್ದಾರೆ, 2010-11 ರಲ್ಲಿ ಒಂದು ಕೋಟಿ ತೆಗೆದುಕೊಂಡಿದ್ದಾರೆ, 2011-12 ರಲ್ಲಿ ಎರಡು ಕೋಟಿ ಲಂಚ ತೆಗೆದುಕೊಂಡಿದ್ದಾರೆ, ಇದು ಐಟಿ ಇಲಾಖೆಯ ದಾಖಲೆ ತೋರಿಸುತ್ತದೆ ಎಂದು ದಾಖಲೆಯನ್ನು ಪ್ರದರ್ಶಿಸಿದರು.

ಈ ಮೂರು ವರ್ಷದಲ್ಲಿ ಒಟ್ಟು ನಾಲ್ಕು ಕೋಟಿಗೂ ಹೆಚ್ಚು ಹಣವನ್ನು ಆರ್.ಎನ್.ಎಸ್ ಕಂಪನಿಯಿಂದ ನಗದು ರೂಪದಲ್ಲಿ ಪಡೆದುಕೊಂಡಿದ್ದರೂ ಆ ವರ್ಷದ ಆದಾಯ ತೆರಿಗೆ ಇಲಾಖೆಗೆ ನೀಡಿದ ಮಾಹಿತಿಯಲ್ಲಿ ಈ ಹಣವನ್ನು ತೋರಿಸದೆ ಮೆಚ್ಚಿಟ್ಟಿದ್ದಾರೆ, ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗುತ್ತಿಗೆ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು 2ಕೋಟಿಗೂ ಹೆಚ್ಚಿನ ದಂಡವನ್ನು ಯಡಿಯೂರಪ್ಪಗೆ ವಿಧಿಸಿದ್ದಾರೆ, ಇದು ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದಕ್ಕೆ ನಿದರ್ಶನ ಎಂದರು.

ಮುಖ್ಯಮಂತ್ರಿ ಆಗಿದ್ದ ವೇಳೆ ಯಡಿಯೂರಪ್ಪ ಭ್ರಷ್ಟಾಚಾರದ ಗಂಗೋತ್ರಿ ಹರಿಸಿದ್ದರು, ಚಿಗ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿಯೂ ಈ ಗಂಗೋತ್ರಿ ಹರಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರವನ್ನು ಪರ್ಸಂಟೇಜ್ ಸರ್ಕಾರ ಎಂದ ಪ್ರಧಾನಿ ನರೇಂದ್ರ ಮೋದಿ ಇದು ಎಷ್ಟು ಪರ್ಸೆಂಟ್ ಕಮೀಷನ್ ಎಂದು ಹೇಳಬೇಕು, ಅವರು ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ, ಈಗ ನೀವೇ ಹೇಳಿ ಇದರಲ್ಲಿ ಎಷ್ಟು ಪರ್ಸಂಟೇಜ್ ಪಡೆಯಲಾಗಿದೆ, ಅಂದಿನ ನೀರಾವರಿ ಮಂತ್ರಿಗಳು ಎಷ್ಟು ತೆಗೆದುಕೊಂಡಿದ್ದಾರೆ ಎಂದು ಹೇಳಿ ಎಂದು ಒತ್ತಾಯಿಸಿದರು.

ಇದು ನಮ್ಮ ಆರೋಪವಲ್ಲ. ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಆದಾಯ ತೆರಿಗೆ ಇಲಾಖೆ ಹೇಳಿರುವ ಮಾಹಿತಿ. ಸಾರ್ವಜನಿಕ ಜೀವನದಲ್ಲಿ ಇರುವವರು ಈ ರೀತಿ ಹಣ ತೆಗೆದುಕೊಳ್ಳುವುದು ಅಪರಾಧ, ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಾ?ಭ್ರಷ್ಟಾಚಾರ ಪ್ರತಿಬಂಧನ ಕಾಯ್ದೆ ಪ್ರಕಾರ ರಾಜ್ಯ, ಕೇಂದ್ರ ಸರ್ಕಾರ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ