‘ತಮಿಳುನಾಡು ಒತ್ತಡಕ್ಕೆ ಕೇಂದ್ರ ಮಣಿಯಬಾರದು’-ಸಿಎಂ

cm siddaramaia reaction on cauvery issue and tamilnadu bandh

05-04-2018

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕೇ ಹೊರತು ಯಾವುದೇ ಕಾರಣಕ್ಕೂ ತಮಿಳುನಾಡಿನ ಒತ್ತಡ ತಂತ್ರಕ್ಕೆ ಮಣಿಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿನ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಯವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರದ ಮೇಲೆ ತಮಿಳುನಾಡಿನವರು ಒತ್ತಡ ಹೇರುತ್ತಿದ್ದಾರೆ. ಈ ಹಿಂದೆ ಕಾವೇರಿ ನ್ಯಾಯ ಮಂಡಳಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಹೇಳಿತ್ತು. ಆದರೆ ಸುಪ್ರೀಂ ಕೋರ್ಟ್ ಸ್ಕೀಂ ಮಾಡುವಂತೆ ತಿಳಿಸಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಸ್ಕೀಂ ಎಂದರೆ ನಿರ್ವಹಣಾ ಮಂಡಳಿ ರಚನೆ ಮಾಡುವುದಲ್ಲ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲು ಒಂದು ವ್ಯವಸ್ಥೆ ರೂಪಿಸುವುದು. ಅದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು. ಕಾನೂನು ರೀತ್ಯ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳಬೇಕು ಎಂದರು.

ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ನನ್ನನ್ನು ಸೋಲಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ನನ್ನ ಪ್ರಕಾರ ಇಬ್ಬರೂ ಒಂದಾಗಿದ್ದಾರೆ ಎನಿಸುತ್ತದೆ. ಅವರು ಹಿಂದೆಯೂ ಒಂದಾಗಿದ್ದರು. 2006ರಲ್ಲಿ ಅವರು ಒಂದಾಗಿದ್ದಾಗ ಯಾರು ಗೆದ್ದವರು. ಈಗಲೂ ಕುಮಾರಸ್ವಾಮಿ, ಯಡಿಯೂರಪ್ಪ ಒಂದಾಗಿದ್ದಾರೆ. ಆದರೂ ಗೆಲ್ಲುವುದು ನಾನೇ.

ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಯಾವಾಗಲೂ ನನ್ನ ವಿರುದ್ಧವೇ ಟೀಕಾಸ್ತ್ರಗಳನ್ನು ಪ್ರಯೋಗ ಮಾಡುತ್ತಾರೆ. ನಾನೊಬ್ಬನೇ ಅವರ ಟಾರ್ಗೆಟ್ ಆಗಿದ್ದೇನೆ. ಮುಖ್ಯಮಂತ್ರಿಯವರು ಚುನಾವಣಾ ಅಕ್ರಮಗಳನ್ನು ಎಸಗುತ್ತಿದ್ದಾರೆ ಎಂದು ದೇವೇಗೌಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಚುನಾವಣಾ ರಾಜಕೀಯದಲ್ಲಿ ಗೌಡರಿಗೆ ಸಾಕಷ್ಟು ಅನುಭವ ಇದೆ. ಅವರು ಈ ಹಿಂದೆ ಮಾಡಿದ್ದನ್ನು ನಮಗೆ ಹೇಳುತ್ತಿದ್ದಾರೆ. ಚುನಾವಣಾ ಅಕ್ರಮಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಅದಕ್ಕಾಗಿ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. ಅಂತಹವುಗಳನ್ನು ಯಾವತ್ತೂ ಮಾಡಿಲ್ಲ. ಇವತ್ತೂ ಮಾಡುವುದಿಲ್ಲ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಯಾವುದೇ ಅಧಿಕಾರಿಗಳನ್ನು ಕರೆದಿಲ್ಲ. ಮುಖ್ಯ ಕಾರ್ಯದರ್ಶಿಯವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಅಧಿಕಾರಿ ಭೇಟಿ ಮಾಡುವುದೂ ಇಲ್ಲ ಎಂದರು.

ಚಿತ್ರನಟ ಸುದೀಪ್ ಅವರು ಇಂದು ಬೆಳಿಗ್ಗೆ ತಮ್ಮನ್ನು ಭೇಟಿಯಾಗಿದ್ದರು. ಏಪ್ರಿಲ್ 7ರಂದು ನಡೆಯುವ ಚಲನಚಿತ್ರ ರಂಗದ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾಂಭಕ್ಕೆ ಆಹ್ವಾನ ನೀಡಲು ಅವರು ಬಂದಿದ್ದರು. ಆದರೆ, ಪಕ್ಷದ ಪರ ಪ್ರಚಾರ ನಡೆಸಲು ನಾನು ಅವರನ್ನು ಆಹ್ವಾನಿಸಿಲ್ಲ.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿದ್ದು, ಪರಿಶೀಲನಾ ಸಮಿತಿಗೆ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ದೆಹಲಿಯಲ್ಲಿ ಪರಿಶೀಲನಾ ಸಮಿತಿ ಸಭೆ ಮತ್ತು ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ಅಂತಿಮ ಪಟ್ಟಿ ಹೊರ ಬೀಳಲಿದೆ.

ಇದೀಗ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಲ್ಲಿ ನನ್ನನ್ನು ಸೋಲಿಸುವುದಾಗಿ ದೇವೇಗೌಡ ಮತ್ತು ಕುಮಾರ ಸ್ವಾಮಿಯವರು ಹೇಳುತ್ತಿದ್ದಾರೆ. ನಮಗೂ ಸೋಲಿಸುವ ಶಕ್ತಿ ಇದೆ. ಆದರೆ ನಾವು ಯಾರನ್ನೂ ಗುರಿಯಾಗಿಟ್ಟುಕೊಂಡು ಮಾತನಾಡುವುದಿಲ್ಲ. ಕಾಂಗ್ರೆಸ್ ಗೆಲುವು ನಮಗೆ ಮುಖ್ಯ. ಪಕ್ಷದ ಸಿದ್ಧಾಂತ ಮತ್ತು ಮಾಡಿರುವ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ನಾವು ಚುನಾವಣೆಯಲ್ಲಿ ಹೋರಾಟ ಮಾಡುತ್ತೇವೆ.

ಬಾದಾಮಿ ಸೇರಿದಂತೆ ಉತ್ತರ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿರುವುದು ನಿಜ. ಆದರೆ, ಎರಡು ಕಡೆ ಸ್ಪರ್ಧಿಸುವ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದರು. ಚಾಮುಂಡೇಶ್ವರಿಯಲ್ಲಿ ನಮ್ಮದೇ ಗೆಲುವು ಎನ್ನುವವರು ಭ್ರಮೆಯಲ್ಲಿದ್ದಾರೆ. ಅವರು ಭ್ರಮಾಲೋಕದಲ್ಲಿ ತೇಲಾಡಲು ನನ್ನ ಅಭ್ಯಂತರ ಇಲ್ಲ ಎಂದು ವ್ಯಂಗ್ಯವಾಡಿದರು.

ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರು ದೇಶ ಕಂಡ ಅಪರೂಪದ ರಾಜಕಾರಣಿ. ಕೆಳಸ್ತರದಿಂದ ಬಂದು ಉಪ ಪ್ರಧಾನಿಯಾಗಿ ರಾಜಕೀಯದಲ್ಲಿ ಬೆಳೆದಿದ್ದರು. ಬಹಳ ದೀರ್ಘ ಕಾಲ ರಾಜಕಾರಣದಲ್ಲಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬಾಬು ಅವರು ನಿಭಾಯಿಸದ ಖಾತೆಗಳೇ ಇಲ್ಲ.

ಎಲ್ಲ ಇಲಾಖೆಗಳಲ್ಲಿಯೂ ಅವರು ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಎಲ್ಲ ಇಲಾಖೆಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದರು. ಜೊತೆಗೆ ಬಾಬು ಅವರು ದಕ್ಷ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಇಂದಿರಾಗಾಂಧಿ ಮತ್ತು ಜಗಜೀವನರಾಂ ಅವರು ದೇಶದಲ್ಲಿ ಹಸಿರು ಕ್ರಾಂತಿಗೆ ಕಾರಣಕರ್ತರು. ಆಹಾರ ಭದ್ರತೆ ವಿಚಾರದಲ್ಲಿ ಜಗಜೀವನರಾಂ ಅವರ ಕೊಡುಗೆಯೂ ಅಪಾರವಾಗಿದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ