ಮೂವರು ಐಎಎಸ್ ಅಧಿಕಾರಿಗಳು ಚುನಾವಣಾ ಕಣಕ್ಕೆ

3 ias officers contest in karnataka assembly election?

05-04-2018

ಬೆಂಗಳೂರು: ಈ ಬಾರಿ ಮೂರು ಮಂದಿ ನಿವೃತ್ತ ಐಎಎಸ್ ಅಧಿಕಾರಿಗಳು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ  ಪರೀಕ್ಷೆಗಿಳಿಯಲಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಆದರೆ, ಟಿಕೆಟ್ ಪಡೆಯುವ ಪ್ರಯತ್ನಗಳು ಯಶಸ್ಸು ಕಂಡರೆ ಈ ನಿವೃತ್ತ ಐಎಎಸ್ ಅಧಿಕಾರಿಗಳು ಚುನಾವಣೆಗೆ ಸ್ಪರ್ಧಿಸುವುದು ಖಚಿತ.

ಮೊದಲಿಗೆ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ. ಇವರು ಬಿಜೆಪಿ ಟಿಕೆಟ್ ಆಕಾಂಕ್ಷಿ. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸ ಬಯಸಿಯೇ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದು. ಶ್ರೀನಿವಾಸ್ ಪ್ರಸಾದ್ ಅವರು ಅಡ್ಡಿಯಾಗದಿದ್ದರೆ ಈ ಬಾರಿ ಶಿವರಾಂ ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನಂಜನಗೂಡು ಸಾಧ್ಯವಾಗದಿದ್ದರೆ ಮಳವಳ್ಳಿಯಿಂದ ಶಿವರಾಂ ಸ್ಪರ್ಧಿಸ ಬಯಸಿದ್ದಾರೆ.

ಇನ್ನೂ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ, ಭಾರೀ ಕೈಗಾರಿಕಾ ಸಚಿವಾಲಯ ಸೇರಿದಂತೆ ಅನೇಕ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅಶೋಕ್ ಕುಮಾರ್ ಮನೋಳಿ ಬೆಳಗಾವಿ ಜಿಲ್ಲೆಯ ಕುಡಚಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದೊರತಿರುವ ಗ್ರೀನ್ ಸಿಗ್ನಲ್ ಮೇರೆಗೆ ಅಶೋಕ್ ಕುಮಾರ್ ಮನೋಳಿ ಈಗಾಗಲೇ ಸ್ಪರ್ಧೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿ ಹೀರಾ ನಾಯಕ್ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಮಾಯಗೊಂಡ ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸ ಬಯಸಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೀರಾ ನಾಯಕ್ ಅವರಿಗೆ ಚುನಾವಣೆ ಸ್ಪರ್ಧೆಗೆ ಸಿದ್ಧರಾಗುವಂತೆ ಸೂಚಿಸಿದ್ದರಾದರೂ ಅಂತಿಮ ಗ್ರೀನ್ ಸಿಗ್ನಲ್ಗಾಗಿ ಹೀರಾ ನಾಯಕ್ ಕಾಯುತ್ತಿದ್ದಾರೆ.

ಹೀರಾ ನಾಯಕ್ ಸ್ಪರ್ಧೆಗೆ ಅಡ್ಡಿ ಯಾಗಿರುವುದು ಮಾಯಗೊಂಡ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಮೂರ್ತಿ ನಾಯಕ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಗುಟ್ಟಾಗಿಯೇನು ಉಳಿದಿಲ್ಲ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶಿವಮೂರ್ತಿ ನಾಯಕ್ ಅವರನ್ನು ಹಣಿಯಲು ಹೀರಾ ನಾಯಕ್ರನ್ನು ವಿಧಾನಸಭಾ ಚುನಾವಣೆಗೆ ಇಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೇ 18ರಂದು ಪ್ರಕಟವಾಗುವ ಚುನಾವಣೆಯ ಫಲಿತಾಂಶ ಮತದಾರರು ಈ ಮೂವರು ನಿವೃತ್ತ ಐಎಎಸ್ ಅಧಿಕಾರಿಗಳಲ್ಲಿ ಯಾರನ್ನು ಗೆಲ್ಲಿಸಿ ರಾಜ ಕಾರಣಕ್ಕೆ ಕರೆತರಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿದೆ.


ಸಂಬಂಧಿತ ಟ್ಯಾಗ್ಗಳು

ಐಎಎಸ್ ಕೆ.ಶಿವರಾಂ election bureaucrat


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ