ಕಾವೇರಿ ವಿವಾದ ರಾಜೀನಾಮೆಗೆ ಸಿದ್ದ: ದೇವೇಗೌಡ

Cauvery river dispute i am ready for resign: Deve Gowda

04-04-2018

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ನಾನು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಿದ್ದ ನಾಗಿದ್ದೇನೆ. ಆದರೆ ರಾಜ್ಯದ ಇತರ ಲೋಕಸಭಾ  ಸದಸ್ಯರೂ ರಾಜೀನಾಮೆ ನೀಡುವರೇ ಎಂದು ಮಾಜಿ ಪ್ರಧಾನಿ ಹಾಗು ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡರು, ಕಾವೇರಿ ನೀರು ಹಂಚಿಕೆ ಸಂಬಂಧ ಆರು ವಾರಗಳಲ್ಲಿ ನಿರ್ಧಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಆರು ವಾರಗಳ ಗಡುವುನಲ್ಲಿ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅದಕ್ಕೆ ತಮಿಳುನಾಡು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಎರಡು ರಾಜ್ಯಗಳು ಸೌಹರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡಿನ ಸರ್ಕಾರದ ಮನೋಭಾವ ಇನ್ನು ಬದಲಾಗಿಲ್ಲ ಎಂದು ದೇವೇಗೌಡ ಟೀಕಿಸಿದರು.

1961ರಲ್ಲಿ ಕಾವೇರಿ ಟ್ರಿಬ್ಯುನಲ್ ರಚಿಸಲಾಯಿತು.ಯಾವ ಯಾವ ಹಂತದಲ್ಲಿ ಟ್ರಿಬ್ಯುನಲ್ ಏನು ಮಾಡಿದೆ, ನ್ಯಾಯಾಲಯಗಳು ಏನು ಮಾಡಿವೆ ಎಂಬುದನ್ನು ಕೇಂದ್ರ ಸರ್ಕಾರ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ದೇಶದ ಇತಿಹಾಸದಲ್ಲಿ ಅಂತರರಾಜ್ಯ ನೀರಿನ ವಿಚಾರದಲ್ಲಿ ಎಲ್ಲೂ ಮಧ್ಯಂತರ ಆದೇಶ ನೀಡಿಲ್ಲ. ಮಧ್ಯಂತರ ಆದೇಶ ಬಂದ ತಕ್ಷಣ ಮುಖ್ಯಂತ್ರಿಯಾಗಿದ್ದ ದಿವಂಗತ ಜಯಲಲಿತ ಅವರು ಆದೇಶ ಜಾರಿಗೊಳಿಸುವಂತೆ ಒತ್ತಾಯಿಸಿದರು. ತಕ್ಷಣ ಪ್ರಧಾನಮಂತ್ರಿ ಯಾಗಿದ್ದ ನರಸಿಂಹರಾವ್ ಅವರಿದ್ದ ಸ್ಥಳಕ್ಕೆ ಬಂದು ಅವರ ಬೇಡಿಕೆ ಈಡೇರಿಸಿದರು ಎಂದು ದೇವೇಗೌಡ ಹಳೆಯ ಬೆಳವಣಿಗೆಗಳನ್ನು ನೆನಪಿಸಿಕೊಂಡರು.

ನಮ್ಮ ಕನ್ನಡಿಗರಿಗೆ ಆಗಿನಿಂದಲೂ ಅನ್ಯಾಯವಾಗುತ್ತಿದೆ, ಕನ್ನಡಿಗರನ್ನು ಪ್ರಚೋದಿಸಲು ನಾನು ಇದನ್ನು ಹೇಳುತ್ತಿಲ್ಲ, ನಮಗಾಗಿರುವ ಅನ್ಯಾಯವನ್ನು ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡಿನ ನಾಯಕರು ನೀರು ನಿರ್ವಹಣಾ ಮಂಡಳಿ ಬೇಕು ಎನ್ನುತ್ತಿದ್ದಾರೆ .ಅಲ್ಲಿನ ಕೆಲವು ನಾಯಕರು ಆತ್ಮಹತ್ಯೆ ಬೆದರಿಕೆಯನ್ನು ಹಾಕಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಈ ವಿವಾದ ಹಿನ್ನಲೆಯಲ್ಲಿ ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಹೀಗಾಗಿ ಎರಡು ರಾಜ್ಯದ ಮುಖ್ಯಮಂತ್ರಿಗಳು ಈ ವಿವಾದವನ್ನ ಬಗೆಹರಿಸೋಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಎರಡು ರಾಜ್ಯದಲ್ಲಿನ ಬೆಳೆಗಳ ಮತ್ತು ನಮ್ಮ ರಾಜ್ಯಕ್ಕೆ ಬೇಕಾಗಿರುವ ಕುಡಿಯುವ ನೀರಿನ ಬಗ್ಗೆ ಪರಿಶೀಲನೆ ನಡೆಸಿ ನೀರು ಬಿಡುಗಡೆ ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ನೀಡಿದ ಮಾಜಿ ಪ್ರಧಾನಿ ದೇವೇಗೌಡ, ಕಾವೇರಿ ವಿಚಾರವಾಗಿ ಪ್ರಾಣತ್ಯಾಗ ಮಾಡ್ತೀವಿ ಅಂತ ತಮಿಳುನಾಡು  ಸಂಸದರು ಲೋಕಸಭೆಯಲ್ಲಿ ಎಚ್ಚರಿಕೆ ನೀಡುತ್ತಾರೆ. ತಮಿಳುನಾಡಿನ ಸಿಎಂ ಮತ್ತು ಸಚಿವ ಸಂಪುಟ ಸದಸ್ಯರು ಕಾವೇರಿ ವಿಷಯವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಈ ಮೂಲಕ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ ಎಂದು ತಮಿಳುನಾಡು ಸರ್ಕಾರದ ವಿರುದ್ದ ಹೆಚ್.ಡಿ.ದೇವೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ‌ ಕಾವೇರಿ ವಿಚಾರವಾಗಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಆಗ ತಮಿಳುನಾಡಿನ 39 ಸಂಸದರು ನಮ್ಮ ಒಕ್ಕೂಟದಲ್ಲಿದ್ದಾರೆ. ಈಗ ಈ ವಿಚಾರ ತೆಗೆದರೆ ನಮ್ಮ ಸರ್ಕಾರ ಉರುಳುತ್ತೆ ನಾನು ಸರ್ಕಾರ ಉಳಿಸಿಕೊಳ್ಳ ಬೇಕು ಎಂದು ಹೇಳಿದ್ದರು. ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ.ಕೃಷ್ಣ ಸೇರಿದಂತೆ ನಾಲ್ಕು ಜನ ಕೇಂದ್ರ ಮಂತ್ರಿಗಳಿದ್ದರು ಅವರೂ ಅಸಹಾಯಕತೆ ತೋರಿದರು.

ಬಿಜೆಪಿಯ 17ಸಂಸದರು, ಜೆಡಿಎಸ್‌ನ 2ಸಂಸದರು ಸೇರಿ ಹೋರಾಟ ಮಾಡೋಣ ಎಂದು ಅನಂತ ಕುಮಾರ್‌ಗೆ ಹೇಳಿದರೆ ಅವರೂ ತಿರುಗಿಯೂ ನೋಡಲಿಲ್ಲ. ಇದು ರಾಜ್ಯದ ಪರಿಸ್ಥಿತಿ ಎಂದು  ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ