ಕಿರುತೆರೆ ನಾಯಕ ನಟ ಕಿರಣ್ ರಾಜ್‍ ಅರೆಸ್ಟ್

kannada serial actor kiran raj arrested

03-04-2018

ಬೆಂಗಳೂರು: ಮುಂಬೈ ಮೂಲದ ರೂಪದರ್ಶಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿ ಹಲ್ಲೆ ನಡೆಸಿರುವ ಕನ್ನಡದ ಕಿರುತೆರೆ ನಾಯಕ ನಟ ಕಿರಣ್ ರಾಜ್‍ನನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಬಂಧನದಿಂದ ಕಿನ್ನರಿ ಪಾಲಿನ ನಾಯಕ ಇದೀಗ ನಿಜ ಜೀವನದಲ್ಲಿ ವಿಲನ್ ಆಗಿದ್ದಾರೆ. ಕಿರಣ್ ಮುಂಬೈಗೆ ಕರೆದೊಯ್ದು ಕಾರಿನಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ಅಕ್ರಮ ಬಂಧನದಲ್ಲಿಟ್ಟಿದ್ದ ಎಂದು ಮುಂಬೈ ಮೂಲದ ರೂಪದರ್ಶಿ ಹಾಗು ನಟಿ ತನಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ. ಪೊಲೀಸರು ನಟಿ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ, ಇತ್ತ ನಗರದ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ನಟ ಕಿರಣ್ ಪ್ರತಿ ದೂರು ದಾಖಲಿಸಿದ್ದಾರೆ.

ಮುಂಬೈ ಮೂಲದ ನಟಿ ಯಾಸ್ಮಿನ್ ಪಠಾಣ್ ಅವರು ದೂರು ನೀಡಿದ್ದು, ದೂರಿನಲ್ಲಿ ನಟ ಕಿರಣ್ ರಾಜ್, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಕಳೆದ 5 ವರ್ಷಗಳಿಂದ ನಾವಿಬ್ಬರು ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದ್ದು, ಇದೀಗ ಕಿರಣ್ ರಾಜ್ ತನ್ನ ಮದುವೆಯಾಗದೇ ಮೋಸ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನ್ನನ್ನು ತಮ್ಮ ಸ್ನೇಹಿತರೊಂದಿಗೆ ಸೇರಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆಯಿಂದ ಯಾಸ್ಮಿನ್ ಮುಖ, ಕೈ- ಕಾಲಿನ ಮೇಲೆ ಗಾಯದ ಗುರುತುಗಳಾಗಿವೆ ಎನ್ನಲಾಗಿದೆ.

ರೂಪದರ್ಶಿಯಿಂದ ದೂರು: ಕಿನ್ನರಿ ಧಾರಾವಾಹಿ ಯಶಸ್ಸು ಕಂಡ ಬೆನ್ನಲ್ಲೇ ನಟ ಕಿರಣ್ ರಾಜ್ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡೋಕೆ ಸಿದ್ಧವಾಗುತ್ತಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ಕಿರಣ್ ರಾಜ್, 'ಅಸತೋಮ ಸದ್ಗಮಯ' ಎಂಬ ಸಿನಿಮಾದಿಂದ ನಾಯಕನಾಗಿ ಬಡ್ತಿ ಪಡೆದಿದ್ದರು. ಆದರೆ, ವಿಪರ್ಯಾಸವೆಂದರೆ, ಸಿನಿಮಾದಲ್ಲಿ ಹೀರೋ ಆಗ ಬೇಕಿದ್ದ ಕಿರಣ್ ವಿರುದ್ಧ ಆತನ ಪ್ರೇಯಸಿಯೇ ದೂರು ದಾಖಲಿಸಿದ್ದಾರೆ. ನಟಿ ಯಾಸ್ಮಿನ್ ಹೇಳುವಂತೆ ತಾವು ಮತ್ತು ಕಿರಣ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಲಿವಿಂಗ್ ಟು ಗೆದರ್ ರಿಲೇಷನ್ ಷಿಪ್ ಹೊಂದಿದ್ದೆವು. ಅಲ್ಲದೆ ನಮ್ಮ ನಡುವೆ ದೈಹಿಕ ಸಂಬಂಧ ಕೂಡ ಇತ್ತು. ಅಂತರ್ ಧರ್ಮೀಯರಾದರೂ ನಮ್ಮಿಬ್ಬರ ಪ್ರೇಮಕ್ಕೆ ನಮ್ಮ ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು. ಆದರೆ, ಕೆಲ ದಿನಗಳಿಂದ ಕಿರಣ್ ವರ್ತನೆ ಬದಲಾಗಿದೆ. ಅಲ್ದೇ, ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೇ, ಸ್ನೇಹಿತರೊಟ್ಟಿಗೆ ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯಾಸ್ಮಿನ್ ದೂರಿದ್ದಾರೆ. ಹಲ್ಲೆ ಸಂಬಂಧ ಯಾಸ್ಮಿನ್ ಈ ಹಿಂದೆ ಮುಂಬೈನ ಪೊಲೀಸ್ ಠಾಣೆಯೊಂದರಲ್ಲೂ  ದೂರು ನೀಡಿದ್ದರು.

ಕಿರಣ್‍ನಿಂದಲೂ ದೂರು: ಇತ್ತ ಕಿರಣ್, ಯಾಸ್ಮಿನ್ ಪಠಾಣ್ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ನಾನು ಹಲ್ಲೆ ನಡೆಸಿಲ್ಲ. ನನ್ನ ತಂದೆ-ತಾಯಿ ಮೇಲೆ ಸುಮಯಾ ಹಲ್ಲೆ ನಡೆಸಿದ್ದಾರೆ. ನನ್ನ ಪೋಷಕರನ್ನು ಗೃಹಬಂಧನದಲ್ಲಿಡುವ ಪ್ರಯತ್ನ ಮಾಡಿದ್ದಾಳೆ ಎಂದು ಕಿರಣ್ ರಾಜ್ ಪ್ರತಿ ದೂರು ನೀಡಿದ್ದಾರೆ. ಆಕೆ ನಯವಂಚಕಿ, ಆಕೆ ವಿರುದ್ಧ ಈಗಾಗಲೇ 2-3 ಪ್ರಕರಣಗಳು ದಾಖಲಾಗಿದ್ದು, ನನ್ನ ಕಾರಿನ ಗಾಜು ಒಡೆದು ಹಾನಿ ಮಾಡಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ. ಈ ಸಂಬಂಧ ನಗರದ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರು ಸಲ್ಲಿಸುವ ವೇಳೆ ನಟಿ ತಾವಿಬ್ಬರೂ ಜೊತೆಗಿರುವ ಫೋಟೋಗಳನ್ನೂ ಕೂಡ ಸಾಕ್ಷ್ಯವಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಂಧನ: ದೈಹಿಕ ಸಂಪರ್ಕ ನಡೆಸಿ ಮದುವೆಯಾಗದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ರೂಪದರ್ಶಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಕಿರುತೆರೆ ನಟ ಕಿರಣ್ ರಾಜ್ ನನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಮುಂಬೈ ಮೂಲದ ರೂಪದರ್ಶಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದು ಕಿರಣ್ ವಿರುದ್ಧ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿ ಕಿರಣ್‍ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Actor arrested ರೂಪದರ್ಶಿ ವಿಪರ್ಯಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ